ಚಿಕ್ಕಮಗಳೂರು: ಸಮ್ಮಿಶ್ರ ಸರ್ಕಾರದ ಗುದ್ದಾಟದ ನಡುವೆ ಶುಕ್ರವಾರ ನಡೆಯುವ ಸಮನ್ವಯ ಸಮಿತಿ ಸಭೆಯಲ್ಲಿ ಕೈಗೊಳ್ಳುವ ನಿರ್ಧಾರಗಳೇ ಸರ್ಕಾರಕ್ಕೇ ಗೈಡ್‍ಲೈನ್ಸ್ ಅಂತ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಸಭೆ ಇದೇ ಶುಕ್ರವಾರ 29ನೇ ತಾರೀಖಿನಂದು ನಡೆಯಲಿದೆ. ಸಭೆಯಲ್ಲಿ ಅಧ್ಯಕ್ಷರಾದ ಮಾಜಿ ಸಿಎಂ ಸಿದ್ದರಾಮಯ್ಯ, ಮುಖ್ಯಮಂತ್ರಿ ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಜಿ.ಪರಮೇಶ್ವರ್, ರಾಜ್ಯ ಕಾರ್ಯದರ್ಶಿ ವೇಣುಗೋಪಾಲ್, ಜೆಡಿಎಸ್ ಕಾರ್ಯದರ್ಶಿ ಡ್ಯಾನಿಶ್ ಅಲಿ ಹಾಗೂ ಮುಖಂಡರನ್ನು ಒಳಗೊಂಡಿದ್ದು, ಸಭೆಯಲ್ಲಿ ತೆಗೆದುಕೊಳ್ಳುವ ನಿರ್ಧಾರಗಳೇ ಸರ್ಕಾರಕ್ಕೆ ಗೈಡ್‍ಲೈನ್ಸ್ ಆಗಿದೆ. ಸರ್ಕಾರ ಇದನ್ನೇ ಭಗವದ್ಗೀತೆ, ಕುರಾನ್, ಬೈಬಲ್ ಅಂತಾ ತಿಳಿದುಕೊಂಡು ಇದರ ಆಧಾರದಲ್ಲಿ ಸರ್ಕಾರ ನಡೆಯಬೇಕು ಎಂದು ತಿಳಿಸಿದ್ದಾರೆ.
ಸಮ್ಮಿಶ್ರ ಸರ್ಕಾರದ ಗುದ್ದಾಟದ ಬಗ್ಗೆ ಮಾತನಾಡಿದ ಅವರು ಕಾಂಗ್ರೆಸ್-ಜೆಡಿಎಸ್ ನೇತೃತ್ವದ ಮೈತ್ರಿ ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ. ಸರ್ಕಾರ ಬಲಿಷ್ಟ ಹಾಗೂ ಸುಭದ್ರವಾಗಿದ್ದು, ಸರ್ಕಾರ ಜವಾಬ್ದಾರಿಯಿಂದ ಕೆಲಸ ಮಾಡ್ತಿದೆ. ಎಲ್ಲಾ ಸಚಿವರು ತಮ್ಮ ತಮ್ಮ ಇಲಾಖೆಗಳ ಕೆಲಸ ಕಾರ್ಯಗಳಲ್ಲಿ ನಿರತರಾಗಿದ್ದಾರೆ. ಪ್ರಜಾಪ್ರಭುತ್ವ ಹಾಗೂ ಕಾನೂನಿನ ಪ್ರಕಾರ ಸರ್ಕಾರ ಐದು ವರ್ಷ ಉಳಿಯಬೇಕು, ಯಾವುದೇ ತೊಂದರೆ ಇಲ್ಲದೆ ಸರ್ಕಾರ ಐದು ವರ್ಷ ಆಡಳಿತ ನಡೆಸಲಿದೆ ಎಂದು ಹೇಳಿಕೆ ನೀಡಿದ್ದಾರೆ.