ಬೆಂಗಳೂರು: ನನ್ನ ಹಾಗೂ ಸಿಎಂ ಸಿದ್ದರಾಮಯ್ಯ ಅವರ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ನಾನು ಅವರ ಮನೆಗೆ ಹೋಗಿ ಒಂದು ಗಂಟೆ ಮಾತುಕತೆ ನಡೆಸಿದ್ದೇನೆ. ಅವರು ಮಾತ್ರ ನಮ್ಮ ಮನೆಗೆ ಬಂದಿಲ್ಲ ಅಷ್ಟೇ. ಇದನ್ನು ಹೊರತುಪಡಿಸಿ ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಾ. ಜಿ ಪರಮೇಶ್ವರ್ ಹೇಳಿದ್ದಾರೆ.
ಬೆಂಗಳೂರಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇಬ್ಬರು ಒಟ್ಟಾಗಿ ಸೇರಿ ಮುಂದಿನ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ತರಲು ದುಡಿಯುತ್ತಿದ್ದೇವೆ. ಬೆಳಗಾವಿ ಸಮಾವೇಶಕ್ಕೆ ಕೊನೆ ಕ್ಷಣದಲ್ಲಿ ಕರೆದ್ರು. ಆದರೆ ನಾನು ಬರುವುದಕ್ಕೆ ಆಗೋದಿಲ್ಲ ಅಂತ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಹೇಳಿದ್ದೆ. ಇದರಲ್ಲಿ ಯಾವುದೇ ಅಸಮಾಧಾನ ಇಲ್ಲ ಎಂದರು.
Advertisement
ಅಲ್ಲದೇ ಅದು ಮೊದಲು ಫಿಕ್ಸ್ ಆಗಿದ್ದು ಸರ್ಕಾರಿ ಕಾರ್ಯಕ್ರಮ. ನಂತರ ಪಕ್ಷದ ಕಾರ್ಯಕ್ರಮ ಮಾಡಲು ಅಲ್ಲಿನ ಜಿಲ್ಲಾ ಮುಖಂಡರು ನಿರ್ಧಾರ ಮಾಡಿದ್ರು. ಹೀಗಾಗಿ ಕೊನೆ ಕ್ಷಣದಲ್ಲಿ ಬನ್ನಿ ಅಂತ ಹೇಳಿದ್ದಕ್ಕೆ ನಾನು ಹೋಗಲು ಸಾಧ್ಯವಾಗಲಿಲ್ಲ ಅಂದ್ರು. ಷಡಕ್ಷರಿ ವಿಚಾರದಲ್ಲೂ ಬೇಸರವಿಲ್ಲ. ಜೊತೆಗೆ ಲೆಫ್ಟು, ರೈಟು, ಸೆಂಟರ್, ಮುಂದೆ, ಹಿಂದೆ ಯಾವ ವಿಷಯದಲ್ಲಿ ಬೇಜಾರಿಲ್ಲ ಎಂದರು.
Advertisement
ಬಿಜೆಪಿ ಪ್ರತಿಭಟನೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಕಾನೂನಿಗಿಂತ ಯಾವುದೂ ದೊಡ್ಡದು ಇಲ್ಲ. ಚುನಾವಣಾ ಹಿನ್ನೆಲೆಯಲ್ಲಿ ರಾಜಕೀಯ ಮಾಡಲು ಬಿಜೆಪಿ ಹೊರಟಿದೆ. ಚುನಾವಣೆಯ ದುರುದ್ದೇಶದಿಂದ ಜಾರ್ಜ್ ಅವರ ರಾಜೀನಾಮೆಗೆ ಆಗ್ರಹಿಸುತ್ತಿದ್ದೆ. ಕಾನೂನಿನಂತೆಯೇ ಜಾರ್ಜ್ ಅವರು ನಡೆದುಕೊಳ್ಳುತ್ತಿದ್ದಾರೆ. ಯಾವುದೇ ಕಾರಣಕ್ಕೂ ಜಾರ್ಜ್ ಅವರು ರಾಜೀನಾಮೆ ಕೊಡುವ ಅವಶ್ಯಕತೆಯಿಲ್ಲ ಅಂದ್ರು.