– ರೈತರಿಗೆ ಕೆಎಂಎಫ್‌ನಿಂದ ಹಾಲಿ ಪ್ರೋತ್ಸಾಹ ಧನ ರೂಪದಲ್ಲಿ ರೂ.339.00 ಕೋಟಿಗಳು ಬಾಕಿ
– ಮಂಡ್ಯ ಜಿಲ್ಲೆಯ ಹಾಲು ಉತ್ಪಾದಕರಿಗೆ 36.55 ಕೋಟಿ ರೂ. ಬಾಕಿ
– ಶಾಸಕ ದಿನೇಶ್ ಗೂಳಿಗೌಡ ಪ್ರಶ್ನೆಗೆ ಉತ್ತರ ನೀಡಿರುವ ಸಹಕಾರ ಸಚಿವರು
ಬೆಳಗಾವಿ: ಹಾಲು ಉತ್ಪಾದಕ ರೈತರಿಗೆ ಪ್ರಸ್ತುತ ನೀಡುತ್ತಿರುವ 5 ರೂಪಾಯಿ ಪ್ರೋತ್ಸಾಹ ಧನವನ್ನು ಏರಿಕೆ ಮಾಡುವ ಯಾವುದೇ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ ಎಂದು ರಾಜ್ಯ ಸರ್ಕಾರ (Karnataka Government) ಸ್ಪಷ್ಟಪಡಿಸಿದೆ.
ಈ ಸಂಬಂಧ ಸ್ಥಳೀಯ ಸಂಸ್ಥೆಗಳ ಮಂಡ್ಯ ಕ್ಷೇತ್ರದ ಶಾಸಕ ದಿನೇಶ್ ಗೂಳಿಗೌಡ (Dinesh Guligowda) ಅವರು ಸದನದಲ್ಲಿ ಕೇಳಿರುವ ಪ್ರಶ್ನೆಗೆ ಉತ್ತರಿಸಿರುವ ಸರ್ಕಾರ, ಸದ್ಯಕ್ಕೆ ಅಂತಹ ಯಾವುದೇ ಉದ್ದೇಶ ಇಲ್ಲ. ಹಾಲಿ ಎಲ್ಲ ರೈತರಿಗೆ ಈಗ ನಿಗದಿ ಮಾಡಿರುವ ಐದು ರೂಪಾಯಿಯನ್ನು ನೀಡುತ್ತಾ ಬಂದಿದೆ ಎಂದು ಸ್ಪಷ್ಟಪಡಿಸಿದೆ. ಇದನ್ನೂ ಓದಿ: ರಾಜ್ಯಗಳ ಪುನರ್ ವಿಂಗಡಣಾ ಕಾಯ್ದೆ: ಭಾಷಾವಾರು ಪ್ರಾಂತ್ಯಗಳ ರಚನೆಯೇ ಅಂತಿಮ – ಸಿಎಂ
ಹಾಲು ಉತ್ಪಾದಕರಿಗೆ ಸರ್ಕಾರ 5 ರೂಪಾಯಿಗಳ ಪ್ರೋತ್ಸಾಹ ಧನವನ್ನು ಪ್ರತಿ ತಿಂಗಳು ನೀಡಲಾಗುತ್ತಿದೆಯೇ? ಪ್ರಸ್ತುತ ನೀಡುತ್ತಿರುವ 5 ರೂಪಾಯಿ ಪ್ರೋತ್ಸಾಹ ಧನವನ್ನು ಹೆಚ್ಚಿಸುವ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆ. ಈ ಸಂಬಂಧ ಸ್ಥಳೀಯ ಸಂಸ್ಥೆಗಳ ಮಂಡ್ಯ ಕ್ಷೇತ್ರದ ಶಾಸಕ ದಿನೇಶ್ ಗೂಳಿಗೌಡ ಅವರು ಕೇಳಿದ್ದ ಪ್ರಶ್ನೆಗೆ ಸದನದಲ್ಲಿ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ (S.T.Somshekar) ಉತ್ತರಿಸಿದ್ದಾರೆ.
339.00 ಕೋಟಿ ರೂ. ಪ್ರೋತ್ಸಾಹಧನ ಬಾಕಿ
ಜಿಲ್ಲೆಯ ಹಾಲು ಉತ್ಪಾದಕರಿಗೆ ಸರ್ಕಾರ ನೀಡುತ್ತಿರುವ ಪ್ರೋತ್ಸಾಹ ಧನ ಉಳಿಸಿಕೊಳ್ಳಲಾಗಿದೆಯೇ? ಉಳಿಸಿಕೊಂಡಿದ್ದರೆ ಮೊತ್ತವೆಷ್ಟು ಮತ್ತು ಯಾವಾಗ ಬಾಕಿ ಮೊತ್ತವನ್ನು ನೀಡಲಾಗುವುದು ಎಂದು ಶಾಸಕ ದಿನೇಶ್ ಗೂಳಿಗೌಡ ಅವರು ಪ್ರಶ್ನೆ ಮಾಡಿದ್ದರು. ಇದಕ್ಕೆ ಸಾಮಾನ್ಯ ವರ್ಗದ ಹೈನುಗಾರಿಕೆ ಸೆಪ್ಟೆಂಬರ್, ಅಕ್ಟೋಬರ್ ಮತ್ತು ನವೆಂಬರ್ 2022ರಲ್ಲಿ ಹಾಲಿ ಪ್ರೋತ್ಸಾಹ ಧನ 339.00 ಕೋಟಿ ರೂ. ಬಾಕಿಯಿರುತ್ತದೆ. ನವೆಂಬರ್-2022ರ ತಿಂಗಳಲ್ಲಿ ಪರಿಶಿಷ್ಟ ಜಾತಿ ವರ್ಗದ ಹೈನುಗಾರರಿಗೆ 5.00 ಕೋಟಿ ರೂ. ಮತ್ತು ಪರಿಶಿಷ್ಟ ಪಂಗಡ ವರ್ಗದ ಹೈನುಗಾರರಿಗೆ 3.00 ಕೋಟಿಗಳನ್ನು ಪಾವತಿಸಲು ಬಾಕಿಯಿರುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಹೊಸವರ್ಷದ ಮೊದಲ ವಾರದಲ್ಲೇ KPTCL ಎಇ, ಜೆಇ ನೇಮಕ ಪರೀಕ್ಷೆ ಫಲಿತಾಂಶ: ಸುನೀಲ್ ಕುಮಾರ್
ಮಂಡ್ಯ ಜಿಲ್ಲೆಯಲ್ಲಿ ಸೆಪ್ಟೆಂಬರ್, ಅಕ್ಟೋಬರ್ ಮತ್ತು ನವೆಂಬರ್ ತಿಂಗಳಿನಲ್ಲಿ ರೈತರಿಗೆ 36.55 ಕೋಟಿ ರೂಪಾಯಿ ಬಾಕಿ ಪ್ರೋತ್ಸಾಹಧನ ನೀಡಬೇಕಿದೆ. ಮಂಡ್ಯ ಹಾಲು ಒಕ್ಕೂಟದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಒಟ್ಟು ನೌಕರರ ಸಂಖ್ಯೆ ಎಷ್ಟು ಎಂಬ ಪ್ರಶ್ನೆಗೆ, 267 ಮಂದಿ ಕಾಯಂ ನೌಕರರು ಕಾರ್ಯನಿರ್ವಹಣೆ ಮಾಡುತ್ತಿದ್ದು, ಗುತ್ತಿಗೆ ಆಧಾರದಲ್ಲಿ 1,057 ಮಂದಿ ಕಾರ್ಮಿಕರು ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ ಎಂಬ ಮಾಹಿತಿಯನ್ನು ರಾಜ್ಯ ಸರ್ಕಾರ ನೀಡಿದೆ.
ಈ ಸಹಕಾರ ಸಂಘಗಳು ಸ್ವಂತ ಕಟ್ಟಡಗಳನ್ನು ಹೊಂದಿದೆಯೇ ಅಥವಾ ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿದೆಯೇ? ಹಾಗಿದ್ದಲ್ಲಿ, ಅವುಗಳ ಒಟ್ಟು ಸಂಖ್ಯೆ ಎಷ್ಟು ಎಂದು ಶಾಸಕ ದಿನೇಶ್ ಗೂಳಿಗೌಡ ಅವರು ಕೇಳಿರುವ ಪ್ರಶ್ನೆಗೆ, ಒಕ್ಕೂಟದ ವ್ಯಾಪ್ತಿಯ ಒಟ್ಟು 1,276 ಹಾಲು ಉತ್ಪಾದಕರ ಸಹಕಾರ ಸಂಘಗಳ ಪೈಕಿ 777 ಹಾಲು ಉತ್ಪಾದಕರ ಸಹಕಾರ ಸಂಘಗಳು ಸ್ವಂತ ಕಟ್ಟಡ ಹೊಂದಿದ್ದು, ಉಳಿದ 499 ಸಂಘಗಳು ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ಸರ್ಕಾರ ಮಾಹಿತಿ ನೀಡಿದೆ. ಇದನ್ನೂ ಓದಿ: ಜಿಲ್ಲಾ ಕೇಂದ್ರಗಳಲ್ಲಿ ಉದ್ಯಮಿಯಾಗು-ಉದ್ಯೋಗ ನೀಡು ಕಾರ್ಯಾಗಾರ: ಸಚಿವ ನಿರಾಣಿ
ಮಂಡ್ಯ ಹಾಲು ಒಕ್ಕೂಟದಿಂದ ಪ್ರತಿ ದಿನ ಬೆಳಗ್ಗೆ ಮತ್ತು ಸಂಜೆ ಎಷ್ಟು ಲೀಟರ್ ಹಾಲನ್ನು ಖರೀದಿ ಮಾಡಲಾಗುತ್ತದೆ ಎಂಬ ಶಾಸಕರ ಪ್ರಶ್ನೆಗೆ ಉತ್ತರಿಸಿರುವ ಸಚಿವರು, ಮಂಡ್ಯ ಹಾಲು ಒಕ್ಕೂಟವು 2022-23ನೇ ಸಾಲಿನಲ್ಲಿ ನವೆಂಬರ್- 2022ರ ಮಾಹೆಯ ಅಂತ್ಯಕ್ಕೆ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಸರಾಸರಿ 8,99,048 ಲೀಟರ್ ಹಾಲನ್ನು ರೈತರಿಂದ ಖರೀದಿಸಲಾಗಿದೆ ಎಂದು ಉತ್ತರ ನೀಡಿದ್ದಾರೆ. ಶೀಘ್ರವಾಗಿ ಪ್ರೋತ್ಸಾಹ ಧನವನ್ನು DBT ಮುಖೇನ ನೇರವಾಗಿ ಹಾಲು ಉತ್ಪಾದಕರ ಆಧಾರ್ ಜೋಡಣೆ ಬ್ಯಾಂಕ್ ಖಾತೆಗೆ ಪಾವತಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಪ್ರಭು ಚವ್ಹಾಣ್ (Prabhu Chauhan) ತಿಳಿಸಿದ್ದಾರೆ.