ರಾಮನಗರ: ಡಿ.ಕೆ.ಶಿವಕುಮಾರ್ (DK Shivakumar) ಮತ್ತೆ ಜೈಲಿಗೆ ಹೋಗ್ತಾರೆ ಎಂಬ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ (KS Eshwarappa) ಹೇಳಿಕೆಗೆ ಡಿಸಿಎಂ ಡಿಕೆಶಿ ಟಾಂಗ್ ನೀಡಿದ್ದಾರೆ.
ರಾಮನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನ್ನನ್ನು ಜೈಲಿಗೆ ಕಳುಹಿಸುವುದಾಗಿ ಅನೇಕರು ಮಾತನಾಡಿದ್ದಾರೆ. ಅವರೂ ಮಾತನಾಡಿದ್ದಾರೆ, ನಮ್ಮ ಜಿಲ್ಲೆಯವರೂ ಮಾತನಾಡಿದ್ದಾರೆ. ನಾನು ಎಲ್ಲದಕ್ಕೂ ಸಿದ್ಧನಿದ್ದೇನೆ. ನನ್ನ ವಿರುದ್ಧ ದೊಡ್ಡ ಷಡ್ಯಂತ್ರ ನಡೆಯುತ್ತಿದೆ. ಸಿಬಿಐ (CBI) ಮೂಲಕ ಏನೇನು ಮಾಡಿಸುತ್ತಿದ್ದಾರೆ, ಬೇರೆಯವರ ಮೂಲಕ ಏನು ಮಾಡಿಸುತ್ತಿದ್ದಾರೆ ಎಂದು ನನಗೂ ಗೊತ್ತಿದೆ. ಸಮಯ ಬಂದಾಗ ಎಲ್ಲವನ್ನೂ ಮಾತನಾಡುತ್ತೇನೆ ಎಂದು ಡಿಕೆಶಿ ತಿಳಿಸಿದ್ದಾರೆ.
- Advertisement
ಮೋದಿ ಪ್ರಧಾನಿಯಾಗುವುದನ್ನು (Narendra Modi) ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ, ಕುಮಾರಸ್ವಾಮಿ ಈ ಹಿಂದೆ ಹೇಳಿದ್ದೆಲ್ಲಾ ಮತ್ತೆ ನೆನಪಿಸಿಕೊಳ್ಳಿ. ಅವರು ಪ್ರಧಾನಿಯಾದರೆ ದೇಶ ಬಿಟ್ಟು ಹೋಗುವುದಾಗಿ ದೇವೇಗೌಡರೇ (Deve Gowda) ಹೇಳಿದ್ದರು. ಅದಕ್ಕೆ ಪ್ರಧಾನಿಗಳು ನನ್ನ ಮನೆಯಲ್ಲೇ ಜಾಗ ನೀಡುತ್ತೇನೆ ಬನ್ನಿ ಎಂದಿದ್ದರು. ಕುಮಾರಸ್ವಾಮಿ ಅವರ ಮಾತುಗಳ ದಾಖಲೆ ಮಾಧ್ಯಮಗಳ ಬಳಿಯೂ ಇದೆ ಎಂದು ತಿರುಗೇಟು ನೀಡಿದ್ರು.
- Advertisement
ಇದೇ ವೇಳೆ ಇಂದು ರಾಜ್ಯಪಾಲರ ಭಾಷಣದಲ್ಲಿ ಸುಳ್ಳು ಹೇಳಿಸಲಾಗಿದೆ ಎಂಬ ಬಿಜೆಪಿ ನಾಯಕರ ಆರೋಪಕ್ಕೆ ತಿರುಗೇಟು ನೀಡಿದ ಡಿಕೆಶಿ, ರಾಜ್ಯದ ಮಹಿಳೆಯರಿಗೆ 2 ಸಾವಿರ ಕೊಟ್ಟಿರುವುದು ಸುಳ್ಳೇ, ಮಹಿಳೆಯರು ಬಸ್ ಗಳಲ್ಲಿ ಉಚಿತವಾಗಿ ಸಂಚಾರ ಮಾಡುತ್ತಿರುವುದು ಸುಳ್ಳೇ, ಯುವಕರಿಗೆ ನಿರುದ್ಯೋಗ ಭತ್ಯೆ ಸಿಗುತ್ತಿರುವುದು ಸುಳ್ಳಾ ಬಡವರಿಗೆ 5 ಕೆ.ಜಿ ಅಕ್ಕಿ ಹಾಗೂ ಉಳಿದ 5 ಕೆ.ಜಿ ಅಕ್ಕಿಯ ಹಣ ನೀಡುತ್ತಿರುವುದು ಸುಳ್ಳಾ? 200 ಯೂನಿಟ್ ವರೆಗೂ ಉಚಿತ ವಿದ್ಯುತ್ ನೀಡುತ್ತಿರುವುದು ಸುಳ್ಳಾ? ಬಿಜೆಪಿಯವರು ರಾಮನ ಹೆಸರಲ್ಲಿ ಮತ ಕೇಳಲು ಹೊರಟಿದ್ದಾರೆ. ರಾಮ ಅವರ ಮನೆ ಆಸ್ತಿಯೇ? ರಾಮ ನಮ್ಮ ಆಸ್ತಿಯಲ್ಲವೇ? ನಾವು ಹಿಂದೂಗಳಲ್ಲವೇ?” ಎಂದು ತಿರುಗೇಟು ನೀಡಿದರು.