ಬೆಂಗಳೂರು: ಜೆಡಿಎಸ್-ಕಾಂಗ್ರೆಸ್ ನಡುವೆ ಚುನಾವಣಾ ಮೈತ್ರಿಯೇನೋ ಆಗಿರಬಹುದು. ಆದ್ರೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಹೇಳಿಕೆಯಿಂದ ಮೈತ್ರಿಯಲ್ಲಿ ಅಸಹಕಾರದ ಭಯ ಕಾಡುತ್ತಿದೆಯಾ ಅನ್ನೋ ಅನುಮಾನ ಶುರುವಾಗಿದೆ.
ಹೌದು. ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿಯನ್ನ ಮಣಿಸಲೇಬೇಕೆಂದು ಹಠಕ್ಕೆ ಬಿದ್ದು ಮೈತ್ರಿ ಮಾಡಿಕೊಂಡಿರೋ ಜೆಡಿಎಸ್ – ಕಾಂಗ್ರೆಸ್ ಸ್ಥಿತಿ ಇದೀಗ ಅಕ್ಷರಃ ಗೊಂದಲದ ಗೂಡಾಗಿದೆ. ಮೇಲ್ನೋಟಕ್ಕೆ ಮೈತ್ರಿ ನಾಯಕರ ನಡುವೆ ಕೊಂಚ ಸಮನ್ವಯತೆ ಕಂಡರೂ ಬಹುತೇಕ ಜಿಲ್ಲೆಗಳಲ್ಲಿ ಕಾರ್ಯಕರ್ತರ ನಡುವಿನ ಒಗ್ಗಟ್ಟು ಹೇಳತೀರದು. ಹಾವು-ಮುಂಗುಸಿಯಂತಿದ್ದ ಕೈ ಹಾಗೂ ತೆನೆ ಹೊತ್ತ ಕಾರ್ಯಕರ್ತರು ಸದ್ಯಕ್ಕೆ ಒಂದಾಗೋ ಲಕ್ಷಣಗಳು ಕಾಣಿಸ್ತಾ ಇಲ್ಲ. ಇದರಿಂದ ಮೈತ್ರಿ ನಾಯಕರಲ್ಲಿ ಆತಂಕ ಶುರುವಾಗಿದೆ. ಹೀಗಾಗಿಯೇ ರಾಹುಲ್ ಗಾಂಧಿ ಭಾನುವಾರ ಬೆಂಗಳೂರಿನಲ್ಲಿ ನಡೆದ ಮೈತ್ರಿ ನಾಯಕರ ಪ್ರಚಾರ ಸಭೆಯಲ್ಲಿ ಉಭಯ ಪಕ್ಷಗಳ ಕಾರ್ಯಕರ್ತರ ಸಮನ್ವಯತೆಯ ಬಗ್ಗೆ ಹೆಚ್ಚು ಒತ್ತು ಕೊಟ್ಟು ಮಾತನಾಡಿದ್ದರು.
Advertisement
Advertisement
ರಾಹುಲ್ ತಮ್ಮ ಮಾತಿನುದ್ದಕ್ಕೂ ಜೆಡಿಎಸ್ ಗೆಲುವಿಗೆ ಕಾಂಗ್ರೆಸ್ ಕಾರ್ಯಕರ್ತರು ಸಹಕರಿಸಬೇಕು. ಮೈತ್ರಿ ಪಕ್ಷದ ಪರ ಪ್ರಚಾರ ನಡೆಸಬೇಕು ಅನ್ನೋದನ್ನೇ ಹೈಲೈಟ್ ಮಾಡಿದ್ದರು. ಅಂದಹಾಗೆ ರಾಹುಲ್ ಸಮನ್ವಯತೆ ಜಪ ಮಾಡೋದರ ಹಿಂದೆ ದಳಪತಿಗಳ ಮನವಿ ಇತ್ತಾ ಅನ್ನೋದು ಇದೀಗ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ. ಯಾಕೆಂದರೆ ಮಂಡ್ಯದಲ್ಲಿ ರಾಜ್ಯ ನಾಯಕರ ಎಚ್ಚರಿಕೆ ನಡುವೆಯೂ ಕೈ ಕಾರ್ಯಕರ್ತರು ಜೆಡಿಎಸ್‍ಗೆ ಸಾಥ್ ನೀಡ್ತಿಲ್ಲ. ಹೀಗಾಗಿ ರಾಹುಲ್ ಬಾಯಿಂದಲೇ ಕಾರ್ಯಕರ್ತರಿಗೆ ಮೈತ್ರಿ ನಾಯಕರು ಸಮನ್ವಯತೆಯ ಪಾಠ ಮಾಡಿಸಿದ್ದಾರೆ ಎನ್ನಲಾಗಿದೆ. ಹಾಗೆಯೇ ಈ ವೇಳೆ ಸಿಎಂ ಕುಮಾರಸ್ವಾಮಿ ಕೂಡ ಕೈ ಅಭ್ಯರ್ಥಿಗಳು ಇರೋ ಕಡೆ ದಳ ಕಾರ್ಯಕರ್ತರು ಹೆಗಲು ಕೊಟ್ಟು ದುಡಿಯಿರಿ ಎಂದು ಕರೆ ನೀಡಿದರು.
Advertisement
Advertisement
ಇದಿಷ್ಟೇ ಅಲ್ಲ ಸಮಾವೇಶದ ಬಳಿಕ ನಡೆದ ಸಭೆಯಲ್ಲೂ 2 ಪಕ್ಷಗಳ ಕಾರ್ಯಕರ್ತರ ನಡುವಿನ ಸಹಕಾರದ ಬಗ್ಗೆಯೇ ಹೆಚ್ಚು ಚರ್ಚೆ ನಡೆಯಿತೆನ್ನಲಾಗಿದೆ. ಅಲ್ಲದೆ ಜಂಟಿ ಸಮಾವೇಶದ ಮೂಲಕ ದೇಶಕ್ಕೆ ಮಹಾಮೈತ್ರಿಯ ಸಂದೇಶ ಕಳುಹಿಸಲು ಸಜ್ಜಾಗಿದ್ದ ಮೈತ್ರಿ ನಾಯಕರಿಗೆ ಕಾರ್ಯಕರ್ತರ ಮುನಿಸು ತಲೆನೋವಾಗಿ ಪರಿಣಮಿಸಿದೆ.