ಮಾನವ ನಾಗರಿಕತೆಯ ಇತಿಹಾಸದಲ್ಲಿ ಹತ್ತು ಹಲವು ಭೀಕರ ವಿಮಾನ ದುರಂತಗಳು (Plane Crashes) ಸಂಭವಿಸಿವೆ. ಪ್ರತಿ ದುರಂತ ನಡೆದಾಗಲೂ, ನೂರಾರು ಸಂಖ್ಯೆಯಲ್ಲಿ ಸಾವುನೋವುಗಳು ಸಂಭವಿಸಿವೆ. ಹೀಗೆ ಇತಿಹಾಸದ ಪುಟಗಳಲ್ಲಿ ಹುದುಗಿ ಹೋಗಿದ್ದ ಈ ನೋವಿನ ಘಟನೆಗಳನ್ನು ಇತ್ತೀಚೆಗಷ್ಟೇ ಬಾರಾಮತಿಯಲ್ಲಿ (Baramati) ಸಂಭವಿಸಿದ ಘೋರ ವಿಮಾನ ದುರಂತ ಮುನ್ನೆಲೆಗೆ ತಂದಿದೆ.
ಮಹಾರಾಷ್ಟ್ರದ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮುಂಚಿತವಾಗಿ ʻದಾದಾʼ ಖ್ಯಾತಿಯ ಅಜಿತ್ ಪವಾರ್ 4 ಪ್ರಮುಖ ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸಬೇಕಿತ್ತು. ಹೀಗಾಗಿ ಬುಧವಾರ (ಜ.28) ಮುಂಬೈನಿಂದ ಬಾರಾಮತಿಗೆ ಹೊರಟಿದ್ದರು. ವಿಮಾನವು ಬೆಳಗ್ಗೆ 8:45 ಕ್ಕೆ ಅಂತಿಮ ಹಂತದಲ್ಲಿ ತೀವ್ರ ತಾಂತ್ರಿಕ ತೊಂದರೆಗಳು ಮತ್ತು ಅಸ್ಥಿರತೆ ಎದುರಿಸಿತು. ಬಾರಾಮತಿ ವಿಮಾನ ನಿಲ್ದಾಣದಲ್ಲಿ ಇಳಿಯಲು ಪ್ರಯತ್ನಿಸುವಾಗ ಪೈಲಟ್ ನಿಯಂತ್ರಣ ಕಳೆದುಕೊಂಡರು. ಇದರಿಂದಾಗಿ ವಿಮಾನವು ರನ್‌ವೇಯಲ್ಲಿಯೇ (Runway) ಅಪಘಾತಕ್ಕೀಡಾಗಿ ಬೆಂಕಿ ಹೊತ್ತಿಕೊಂಡಿತು. ಮೃತಪಟ್ಟ ಇತರರಲ್ಲಿ ಇಬ್ಬರು ಪೈಲಟ್‌ಗಳು ಮತ್ತು ಇಬ್ಬರು ಪ್ರಯಾಣಿಕರು ಸೇರಿದ್ದಾರೆ. ಅವರಲ್ಲಿ ಒಬ್ಬ ಸಹಾಯಕ ಮತ್ತು ಪವಾರ್ ಅವರ ವೈಯಕ್ತಿಕ ಭದ್ರತಾ ಅಧಿಕಾರಿ ಸೇರಿದ್ದಾರೆ.
ಇತಿಹಾಸದಲ್ಲಿ ಈ ಹಿಂದೆಯೂ ಹಲವು ಬಾರಿ ಭಾರತವೂ (India) ಸೇರಿದಂತ ಜಗತ್ತಿನ ವಿವಿಧೆಡೆ ಭೀಕರ ವಿಮಾನ ದುರಂತಗಳು ಸಂಭವಿಸಿದ್ದು, ಈ ಪೈಕಿ ಟಾಪ್-12 ಘೋರ ವಿಮಾನ ದುರಂತಗಳ ಕುರಿತಾದ ಮಾಹಿತಿಯನ್ನ ಇಲ್ಲಿ ಪಟ್ಟಿ ಮಾಡಲಾಗಿದೆ. ಅವುಗಳತ್ತ ಚಿತ್ತ ಹರಿಸೋಣ…
1. ಟೆನೆರಿಫ್ ವಿಮಾನ ದುರಂತದಲ್ಲಿ 583 ಸಾವು
ಸ್ಪೇನ್‌ನ ದ್ವೀಪ ನಗರಿ ಟೆನೆರಿಫ್‌ನಲ್ಲಿ ಮಾರ್ಚ್ 27, 1977ರಂದು ಸಂಭವಿಸಿದ ಭೀಕರ ನಾಗರಿಕ ವಿಮಾನ ದುರಂತವು, ಮಾನವ ಇತಿಹಾಸದಲ್ಲೇ ದಾಖಲಾದ ಅತ್ಯಂತ ಘೋರ ವಿಮಾನ ಅಪಘಾತ ಎಂದು ಕುಖ್ಯಾತಿ ಪಡೆದಿದೆ. ಈ ದುರ್ಘಟನೆಯಲ್ಲಿ ಬರೋಬ್ಬರಿ 583 ಜನ ಸಾವಿಗೀಡಾಗಿದ್ದರು. KLM ಬೋಯಿಂಗ್ 747 ವಿಮಾನವು ಸ್ಪೇನ್‌ನ ಲಾಸ್ ರೋಡಿಯೊಸ್ ವಿಮಾನ ನಿಲ್ದಾಣದಲ್ಲಿ ನಿಂತಿದ್ದ ಟ್ಯಾಕ್ಸಿ, ಪ್ಯಾನ್ ಅಮೇರಿಕನ್ ವರ್ಲ್ಡ್ ಏರ್‌ವೇಸ್ (Pan Am) ವಿಮಾನ 747 ಗೆ ಡಿಕ್ಕಿ ಹೊಡೆದಿತ್ತು. ಈ ಅಪಘಾತದಲ್ಲಿ KLM ವಿಮಾನದಲ್ಲಿದ್ದ ಎಲ್ಲಾ 234 ಜನರು ಮತ್ತು ಪ್ಯಾನ್ ಆಮ್ ವಿಮಾನದಲ್ಲಿದ್ದ 396ರ ಪ್ರಯಾಣಿಕರ ಪೈಕಿ 335 ಜನರ ಅಸುನೀಗಿದ್ದರು. KLM ವಿಮಾನದ ಪೈಲಟ್ ಟೇಕ್ ಆಫ್‌ಗೆ ಕ್ಲಿಯರನ್ಸ್ ದೊರೆತಿದೆ ಎಂಬ ತಪ್ಪು ಕಲ್ಪನೆಯೇ ದುರಂತಕ್ಕೆ ಕಾರಣ ಎಂಬುದು ತನಿಖೆಯಿಂದ ತಿಳಿದುಬಂದಿತ್ತು.
2. ಜಪಾನ್ ಏರ್‌ಲೈನ್ಸ್ ವಿಮಾನ ದುರಂತ
ಜಪಾನ್ ಏರ್‌ಲೈನ್ಸ್ ಫ್ಲೈಟ್ 123 1985 ರಂದು ಪತನಗೊಂಡಿತು. ಈ ದುರ್ಘಟನೆಯಲ್ಲಿ ಬರೋಬ್ಬರಿ 520 ಪ್ರಯಾಣಿಕರು ಸಾವನ್ನಪ್ಪಿದ್ದರು. ಈ ಅಪಘಾತವು ಒಂದೇ ವಿಮಾನದ ಅತಿ ಹೆಚ್ಚು ಪ್ರಯಾಣಿಕರು ಸಾವಿಗೀಡಾದ ಕುಖ್ಯಾತಿಯನ್ನ ಹೊಂದಿದೆ. ಬೋಯಿಂಗ್ 747 ವಿಮಾನದ ಹಿಂಬದಿಯಲ್ಲಿ ಸಂಭವಿಸಿದ ಸ್ಫೋಟದಿಂದಾಗಿ ಈ ದುರ್ಘಟನೆ ಸಂಭವಿಸಿತ್ತು. ಸ್ಫೋಟದ ರಭಸಕ್ಕೆ ವಿಮಾನದ ಎಲ್ಲಾ ಹೈಡ್ರಾಲಿಕ್ ರೆಕ್ಕೆಗಳು ಕಳಚಿದ ಪರಿಣಾಮ, ವಿಮಾನವು ಪರ್ವತಕ್ಕೆ ಅಪ್ಪಳಿಸಿತ್ತು. ಪರಿಣಾಮವಾಗಿ ವಿಮಾನದಲ್ಲಿದ್ದ 15 ಸಿಬ್ಬಂದಿ ಮತ್ತು 509 ಪ್ರಯಾಣಿಕರ ಪೈಕಿ 505 ಜನ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಆದಾಗ್ಯೂ ರಕ್ಷಣಾ ಕಾರ್ಯಾಚರಣೆ ಸಿಬ್ಬಂದಿ ನಾಲ್ವರು ಪ್ರಯಾಣಿಕರನ್ನು ರಕ್ಷಿಸಿದ್ದು ವಿಶೇಷವಾಗಿತ್ತು.
3. ದೆಹಲಿಗೆ ಸಮೀಪದ ಚಾರ್ಖಿಯಲ್ಲಿ ಕಝಕಿಸ್ತಾನ್ ವಿಮಾನ ಪತನ
ನವೆಂಬರ್ 12, 1996ರಂದು, ಸೌದಿಯ ಫ್ಲೈಟ್ 763 ವಿಮಾನವು, ಕಝಾಕಿಸ್ತಾನ್ ಏರ್‌ಲೈನ್ಸ್ ಫ್ಲೈಟ್ 1907ಕ್ಕೆ ಆಗಸದಲ್ಲೇ ಡಿಕ್ಕಿ ಹೊಡೆದಿತ್ತು. ಭಾರತದ ದೆಹಲಿ ಬಳಿಯ ಚಾರ್ಖಿ ದಾದ್ರಿ ವಾಯುಪ್ರದೇಶದಲ್ಲಿ ಈ ದುರಂತ ಸಂಭವಿಸಿತ್ತು. ಕಝಕಿಸ್ತಾನ್ ಏರ್‌ಲೈನ್ಸ್ ವಿಮಾನದ ಪೈಲಟ್ ನಿಗದಿತ ಎತ್ತರಕ್ಕಿಂತ ಕೆಳಗೆ ಹಾರಾಟ ನಡೆಸಿದ್ದೇ ಈ ಭೀಕರ ದುರಂತಕ್ಕೆ ಕಾರಣವಾಗಿತ್ತು.
ಡಿಕ್ಕಿಯ ಪರಿಣಾಮವಾಗಿ ಸಿಬ್ಬಂದಿಯೂ ಸೇರಿದಂತೆ ಎರಡೂ ವಿಮಾನಗಳಲ್ಲಿದ್ದ ಒಟ್ಟು 349 ಜನ ಅಸುನೀಗಿದ್ದರು. ಈ ದುರ್ಘಟನೆಯ ವಿಸ್ತೃತ ತನಿಖೆ ನಡೆಸಿದ್ದ ರಮೇಶ್ ಚಂದ್ರ ಲಹೋಟಿ ನೇತೃತ್ವದ ಆಯೋಗವು, ವಿಮಾನ ನಿಲ್ದಾಣದ ಸಮೀಪ ಹಾರಾಟ ನಡೆಸುವ ವಿಮಾನಗಳ ನಡುವಿನ ದೂರ, ಎತ್ತರ ಹಾಗೂ ಸಂವಹನಕ್ಕೆ ಸಂಬಂಧಿಸಿದಂತೆ ಹಲವಾರು ಮಹತ್ವದ ಬದಲಾವಣೆಗಳನ್ನು ಸೂಚಿಸಿತ್ತು.
4. ಟರ್ಕಿಶ್ ಏರ್‌ಲೈನ್ಸ್ ದುರಂತಕ್ಕೆ 346 ಸಾವು
1974ರ ಮಾರ್ಚ್ 3 ರಂದು ಟರ್ಕಿಶ್ ಏರ್‌ಲೈನ್ಸ್ ಫ್ಲೈಟ್ 981 ವಿಮಾನವು ಫ್ರಾನ್ಸ್‌ನ ಪ್ಯಾರಿಸ್ ಸಮೀಪ ಅಪಘಾತಕ್ಕೀಡಾಯಿತು. ಓರ್ಲಿ ವಿಮಾನ ನಿಲ್ದಾಣದಿಂದ ಟೇಕ್‌ಆಫ್ ಆದ ಸ್ವಲ್ಪ ಸಮಯದಲ್ಲೇ ಈ ವಿಮಾನವು ಪತನಗೊಂಡಿತ್ತು. ವಿಮಾನದಲ್ಲಿದ್ದ ಎಲ್ಲಾ 346 ಪ್ರಯಾಣಿಕರು ಸಾವನ್ನಪ್ಪಿದ್ದರು. ಹಾರಾಟದ ಸಂದರ್ಭದಲ್ಲಿ ಕಾರ್ಗೋ ಬಾಗಿಲು ತೆರೆದುಕೊಂಡಿದ್ದೇ ದುರಂತಕ್ಕೆ ಕಾರಣ ಎಂಬುದು ತನಿಖೆಯಿಂದ ದೃಢಪಟ್ಟಿತ್ತು.
5. ಏರ್ ಇಂಡಿಯಾ ದುರಂತ
1985 ರ ಜೂನ್ 23 ರಂದು, ಏರ್ ಇಂಡಿಯಾ ಫ್ಲೈಟ್ 182, ಟೊರೊಂಟೊ ಮತ್ತು ಮಾಂಟ್ರಿಯಲ್‌ನಿಂದ ಲಂಡನ್ ಮಾರ್ಗವಾಗಿ ದೆಹಲಿಗೆ ಪ್ರಯಾಣಿಸುತ್ತಿತ್ತು. ಬೋಯಿಂಗ್ 747 ವಿಮಾನದ ಕಾರ್ಗೋ ಹೋಲ್ಡ್‌ನಲ್ಲಿ ಬಾಂಬ್ ಸ್ಫೋಟಗೊಂಡ ಪರಿಣಾಮ ಐರ್ಲೆಂಡ್‌ನ ನೈಋತ್ಯ ಕರಾವಳಿಯಲ್ಲಿ ಪತನಗೊಂಡಿತ್ತು. ಈ ಅಪಘಾತದಲ್ಲಿ 307 ಪ್ರಯಾಣಿಕರು ಮತ್ತು 22 ಸಿಬ್ಬಂದಿ ಸೇರಿದಂತೆ ವಿಮಾನದಲ್ಲಿದ್ದ ಎಲ್ಲಾ 329 ಜನರು ಸಾವನ್ನಪ್ಪಿದ್ದರು.
6. ಸೌದಿ ಏರ್‌ಲೈನ್ಸ್‌ನ ಘೋರ ದುರಂತ
1980 ರ ಆಗಸ್ಟ್ 19 ರಂದು, ಸೌದಿ ಅರೇಬಿಯನ್ ಏರ್‌ಲೈನ್ಸ್ ಫ್ಲೈಟ್ 163 ಭೀಕರ ಅಪಘಾತಕ್ಕೆ ತುತ್ತಾಗಿತ್ತು. ವಿಮಾನದ ಬ್ಯಾಗೇಜ್ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ರಿಯಾದ್‌ನಲ್ಲಿ ವಿಮಾನವನ್ನ ಇಳಿಸಬೇಕಾಯಿತು. ಆದರೆ ಅಷ್ಟರಲ್ಲಿ ಬೆಂಕಿಯು ಸೀಲಿಂಗ್ ಮೂಲಕ ಪ್ರಯಾಣಿಕರಿದ್ದ ಕ್ಯಾಬಿನ್‌ಗೆ ಹರಡಿತು. ಸಿಬ್ಬಂದಿ ವಿಮಾನವನ್ನ ಸುರಕ್ಷಿತವಾಗಿ ಇಳಿಸಿದರೂ, ತೀವ್ರ ಹೊಗೆಯಿಂದ ಎಲ್ಲಾ 301 ಪ್ರಯಾಣಿಕರು ಮತ್ತು ಸಿಬ್ಬಂದಿ ಪ್ರಜ್ಞೆ ಉಸಿರುಗಟ್ಟಿ ಸಾವನ್ನಪ್ಪಿದ್ದರು. ಬಳಿಕ ವಿಮಾನಕ್ಕೆ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಕರಕಲಾಗಿತ್ತು. ಇದೂ ಕೂಡ ಮಾನವ ನಾಗರಿಕತೆಯ ಅತ್ಯಂತ ಘೋರ ವಿಮಾನ ದುರಂತ ಎಂದು ಇತಿಹಾಸದಲ್ಲಿ ದಾಖಲಾಗಿದೆ.
7. ಉಗ್ರರ ದಾಳಿಗೆ ಮಲೇಷ್ಯಾದಲ್ಲಿ 298 ಬಲಿ
2014 ರ ಜುಲೈ 17 ರಂದು, ಮಲೇಷ್ಯಾ ಏರ್‌ಲೈನ್ಸ್ ಫ್ಲೈಟ್ 17ನ್ನು, ಆಮ್‌ಸ್ಟರ್‌ಡ್ಯಾಮ್‌ನಿಂದ ಕೌಲಾಲಂಪುರ್‌ಗೆ ತೆರಳುತ್ತಿದ್ದ ಮಾರ್ಗ ಮಧ್ಯೆ ಪೂರ್ವ ಉಕ್ರೇನ್ ಮೇಲೆ ಹೊಡೆದುರುಳಿಸಲಾಗಿತ್ತು. 283 ಪ್ರಯಾಣಿಕರು ಮತ್ತು 15 ಸಿಬ್ಬಂದಿ ಸೇರಿದಂತೆ ವಿಮಾನದಲ್ಲಿದ್ದ ಎಲ್ಲಾ 298 ಜನರು ಈ ದುರಂತದಲ್ಲಿ ತಮ್ಮ ಪ್ರಾಣ ಕಳೆದುಕೊಂಡಿದ್ದರು. ಪ್ರತ್ಯೇಕತಾವಾದಿ ಉಗ್ರಗಾಮಿ ಸಂಘಟನೆಯ ನಾಯಕ ಇಗೊರ್ ಗಿರ್ಕಿನ್ ಮೊದಲು ಈ ದಾಳಿಯ ಹೊಣೆ ಹೊತ್ತುಕೊಂಡಿದ್ದನಾದರೂ, ನಂತರ ತನ್ನ ಪೋಸ್ಟ್‌ನ್ನು ಸಾಮಾಜಿಕ ಜಾಲತಾಣಗಳಿಂದ ತೆಗೆದು ಹಾಕಿದ್ದ.
8. ತಪ್ಪು ಗ್ರಹಿಕೆಯಿಂದ ಇರಾನ್ ಏರ್ ಫ್ಲೈಟ್ 655
1988 ರ ಜುಲೈ 3 ರಂದು ಇರಾನ್ ಏರ್ ಫ್ಲೈಟ್ 655 ಅನ್ನು, ಅಮೆರಿಕದ ನೌಕಾಪಡೆಯ ಮಾರ್ಗದರ್ಶಿ ಕ್ಷಿಪಣಿ ಕ್ರೂಸರ್ ಯುಎಸ್‌ಎಸ್ ವಿನ್ಸೆನ್ನೆಸ್ ಸಹಾಯದಿಂದ ಹೊಡೆದುರುಳಿಸಲಾಗಿತ್ತು. ಹಾರ್ಮುಜ್ ಜಲಸಂಧಿಯ ವಾಯುಪ್ರದೇಶದ ಬಳಿ ಈ ನಾಗರಿಕ ವಿಮಾನದ ಮೇಲೆ ದಾಳಿ ಮಾಡಲಾಗಿತ್ತು. ಈ ದಾಳಿಯಿಂದಾಗಿ ವಿಮಾನದಲ್ಲಿದ್ದ ಎಲ್ಲಾ 290 ಜನರು ಸಾವನ್ನಪ್ಪಿದ್ದರು. ಈ ನಾಗರಿಕ ವಿಮಾನವನ್ನು ಇರಾನ್‌ನ ಫೈಟರ್ ಜೆಟ್ ಎಂಬ ಯುಎಸ್ಎಸ್ ವಿನ್ಸೆನ್ನೆಸ್‌ನ ಸಿಬ್ಬಂದಿಯ ತಪ್ಪು ಗ್ರಹಿಕೆಯೇ ಈ ದುರಂತಕ್ಕೆ ಕಾರಣ ಎಂಬುದು ತನಿಖೆಯಿಂದ ತಿಳಿದು ಬಂದಿತ್ತು.
8. ಇರಾನ್ ಏರ್ ಫ್ಲೈಟ್ 655
ಜುಲೈ 3, 1988ರಂದು, ಇರಾನ್ ಏರ್ ಫ್ಲೈಟ್ 655 ಅನ್ನು, ಅಮೆರಿಕದ ನೌಕಾಪಡೆಯ ಮಾರ್ಗದರ್ಶಿ ಕ್ಷಿಪಣಿ ಕ್ರೂಸರ್ ಯುಎಸ್‌ಎಸ್ ವಿನ್ಸೆನ್ನೆಸ್ ಸಹಾಯದಿಂದ ಹೊಡೆದುರುಳಿಸಲಾಗಿತ್ತು.ಹಾರ್ಮುಜ್ ಜಲಸಂಧಿಯ ವಾಯುಪ್ರದೇಶದ ಬಳಿ ಈ ನಾಗರಿಕ ವಿಮಾನದ ಮೇಲೆ ದಾಳಿ ಮಾಡಲಾಗಿತ್ತು. ಈ ದಾಳಿಯಿಂದಾಗಿ ವಿಮಾನದಲ್ಲಿದ್ದ ಎಲ್ಲಾ 290 ಜನರು ಸಾವನ್ನಪ್ಪಿದ್ದರು. ಈ ನಾಗರಿಕ ವಿಮಾನವನ್ನು ಇರಾನ್‌ನ ಫೈಟರ್ ಜೆಟ್ ಎಂಬ ಯುಎಸ್ಎಸ್ ವಿನ್ಸೆನ್ನೆಸ್‌ನ ಸಿಬ್ಬಂದಿಯ ತಪ್ಪು ಗ್ರಹಿಕೆಯೇ ಈ ದುರಂತಕ್ಕೆ ಕಾರಣ ಎಂಬುದು ತನಿಖೆಯಿಂದ ತಿಳಿದು ಬಂದಿತ್ತು.
9. 2020 ಕೋಝಿಕ್ಕೋಡ್ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಅಪಘಾತ
2020ರ ಆಗಸ್ಟ್ 7ರಂದು, ಕೋಝಿಕ್ಕೋಡ್ (ಕ್ಯಾಲಿಕಟ್) ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಫ್ಲೈಟ್ IX-1344 ಭೀಕರ ಅಪಘಾತಕ್ಕೀಡಾಯಿತು. ವಂದೇ ಭಾರತ್ ಮಿಷನ್ ಭಾಗವಾಗಿ ದುಬೈನಿಂದ ಭಾರತಕ್ಕೆ ಹಿಂದಿರುಗುತ್ತಿದ್ದ ಈ ವಿಮಾನದಲ್ಲಿ 190 ಪ್ರಯಾಣಿಕರು ಮತ್ತು ಸಿಬ್ಬಂದಿ ಇದ್ದರು. ಮಳೆ ಮತ್ತು ಕಳಪೆ ಹವಾಮಾನದ ನಡುವೆ ಟೇಬಲ್‌ಟಾಪ್ ರನ್‌ವೇನಲ್ಲಿ ಲ್ಯಾಂಡ್ ಆಗುತ್ತಿರುವಾಗ, ವಿಮಾನವು ನಿಯಂತ್ರಣ ತಪ್ಪಿ 30 ಅಡಿ ಆಳದ ಕಂದಕಕ್ಕೆ ಜಾರಿತು. ತೀವ್ರ ಹೊಡೆತದಿಂದ ವಿಮಾನ ಎರಡು ಭಾಗಗಳಾಗಿ ಮುರಿಯಿತು. ಈ ಭೀಕರ ಅಪಘಾತದಲ್ಲಿ 18 ಜನರು ಪ್ರಾಣ ಕಳೆದುಕೊಂಡರು. ಹಾಗೂ ಹಲವಾರು ಮಂದಿ ಗಂಭೀರವಾಗಿ ಗಾಯಗೊಂಡರು. ತನಿಖೆ ಪ್ರಕಾರ, ಈ ಘಟನೆಗೆ ಕಳಪೆ ಹವಾಮಾನ ಮತ್ತು ಸವಾಲಿನ ರನ್‌ವೇ ಪರಿಸ್ಥಿತಿಗಳು ಕಾರಣವಾಗಿವೆ. ಈ ಘಟನೆ, ಭಾರತದಲ್ಲಿನ ಟೇಬಲ್‌ಟಾಪ್ ವಿಮಾನ ನಿಲ್ದಾಣಗಳ ಸುರಕ್ಷತೆ ಮತ್ತು ತುರ್ತು ನಿರ್ವಹಣಾ ವ್ಯವಸ್ಥೆಗಳ ಕುರಿತು ಮತ್ತೊಮ್ಮೆ ಗಂಭೀರ ಚರ್ಚೆಗೆ ಕಾರಣವಾಯಿತು.
10. ಮಂಗಳೂರು ವಿಮಾನ ದುರಂತ
ಮೇ 22, 2010ರಂದು ಏರ್ ಇಂಡಿಯಾ ವಿಮಾನವು ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಅಪಘಾತಕ್ಕೀಡಾಗಿತ್ತು. ಈ ದುರಂತದಲ್ಲಿ 166 ಜನ ಪ್ರಯಾಣಿಕರು ಅಸುನೀಗಿದ್ದರು. ಅಲ್ಲದೇ ಎಂಟು ಪ್ರಯಾಣಿಕರು ಆಶ್ಚರ್ಯಕರ ರೀತಿಯಲ್ಲಿ ಬದುಕುಳಿದಿದ್ದರು. ಇದು ಕರ್ನಾಟಕದಲ್ಲಿ ನಡೆದ ಅತೀ ಘೋರ ವಾಯು ದುರಂತ ಎಂಬ ಕುಖ್ಯಾತಿಯನ್ನು ಪಡೆದಿದೆ. ದುರ್ಗಮ ಪ್ರದೇಶದಲ್ಲಿ ಲ್ಯಾಂಡಿಂಗ್ ಸಮಯದಲ್ಲಿ ಪಾಲಿಸಬೇಕಾದ ನಿಯಮಗಳ ಬಗ್ಗೆ ಪೈಲಟ್ ನಿರ್ಲಕ್ಷ್ಯ ಮಾಡಿದ್ದರಿಂದ ಟೇಬಲ್‌ಟಾಪ್ ಪರ್ವತದ ಬಯಲಿಗೆ ಬಿದ್ದು ಅಪಘಾತಕ್ಕೆ ಕಾರಣವಾಯಿತು. ಟೇಬಲ್‌ಟಾಪ್ ರನ್‌ವೇ ಎಂಬುದು ಅದರ ಸುತ್ತಲೂ ಇಳಿಜಾರಿನಿಂದ ಆವೃತವಾಗಿರುವ ಪರ್ವತದ ಮೇಲಿರುವ ರನ್‌ವೇ ಆಗಿದ್ದು, ಇಂತಹ ಸ್ಥಳಗಳಲ್ಲಿ ಇಳಿಯುವಾಗ ಪೈಲಟ್‌ಗಳಿಗೆ ಹೆಚ್ಚಿನ ಎಚ್ಚರಿಕೆ ಅಗತ್ಯವಿರುತ್ತದೆ. ಈ ದುರ್ಘಟನೆ ನಂತರ, ಭಾರತದಲ್ಲಿ ಟೇಬಲ್‌ಟಾಪ್ ರನ್‌ವೇಗಳ ಸುರಕ್ಷತೆ ಕುರಿತಂತೆ ತೀವ್ರ ಚರ್ಚೆ ಆರಂಭವಾಯಿತು ಮತ್ತು ಹಲವು ತಾಂತ್ರಿಕ ಸುಧಾರಣೆ ಆರಂಭವಾಯಿತು.
11. ಅಹಮದಾಬಾದ್ ಏರ್ ಇಂಡಿಯಾ ದುರಂತ
2025ರ ಜೂನ್‌ನಲ್ಲಿ ಸಂಭವಿಸಿದ ಏರ್ ಇಂಡಿಯಾ (AI-171) ವಿಮಾನ ದುರಂತವು ಅಹಮದಾಬಾದ್‌ನಿಂದ ಲಂಡನ್‌ಗೆ ತೆರಳುತ್ತಿದ್ದ ಬೋಯಿಂಗ್ 787-8 ಡ್ರೀಮ್‌ಲೈನರ್ ಟೇಕ್-ಆಫ್ ಆದ ಕೆಲವೇ ಸೆಕೆಂಡ್‌ಗಳಲ್ಲಿ ಇಂಧನ ಪೂರೈಕೆ ಸ್ಥಗಿತಗೊಂಡು ಸಂಭವಿಸಿದ ಭೀಕರ ಅಪಘಾತವಾಗಿದೆ. ಈ ದುರಂತದಲ್ಲಿ 241ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ತನಿಖೆಗಳು ಡ್ಯುಯಲ್-ಎಂಜಿನ್ ವೈಫಲ್ಯದ ಸಾಧ್ಯತೆಯನ್ನು ಪರಿಶೀಲಿಸುತ್ತಿದ್ದು, ಇದನ್ನು ಭಾರತದ ವಿಮಾನಯಾನ ಇತಿಹಾಸದ ಪ್ರಮುಖ ದುರಂತವೆಂದು ಪರಿಗಣಿಸಲಾಗಿದೆ.
12. ನೇಪಾಳ ವಿಮಾನ ಅಪಘಾತ
2023 ರ ಜನವರಿ 15 ರಂದು ಸುಮಾರು 72 ಪ್ರಯಾಣಿಕರನ್ನ ಕರೆದೊಯ್ಯುತ್ತಿದ್ದ ನಾಗರಿಕ ವಿಮಾನವೊಂದು, ನೇಪಾಳದ ಪೋಖರಾದಲ್ಲಿ ಅಪಘಾತಕ್ಕೀಡಾಗಿತ್ತು. ಯೇತಿ ಏರ್‌ಲೈನ್ಸ್ ವಿಮಾನವು ಲ್ಯಾಂಡಿಂಗ್ ಆಗುವ ಕೇವಲ 10 ಸೆಕೆಂಡ್‌ಗಳ ಮುಂಚೆ ಅಪಘಾತಕ್ಕೀಡಾಗಿತ್ತು. ಈ ದುರಂತದಲ್ಲಿ ವಿಮಾನದಲ್ಲಿದ್ದ ಎಲ್ಲಾ 72 ಪ್ರಯಾಣಿಕರು ಸಾವನ್ನಪ್ಪಿದ್ದರು.








