ಸೂರ್ಯ ವಸಿಷ್ಠ ನಿರ್ದೇಶನದ `ಸಾರಾಂಶ’ (Saramsha) ಚಿತ್ರ ಇದೇ ಫೆಬ್ರವರಿ 15ರಂದು ತೆರೆಗಾಣಲಿದೆ. ಈಗಾಗಲೇ ಸಿನಿಮಾ, ಧಾರಾವಾಹಿಗಳಲ್ಲಿ ನಟನಾಗಿ ಪರಿಚಿತರಾಗಿರುವ ಸೂರ್ಯ ವಸಿಷ್ಠ (Surya Vasishta) ಸಾರಾಂಶದ ಮೂಲಕ ನಿರ್ದೇಶಕನಾಗಿ ಆಗಮಿಸುತ್ತಿದ್ದಾರೆ. ಕೆಲ ದಿನಗಳ ಹಿಂದೆ ಬಿಡುಗಡೆಗೊಂಡಿರುವ ಟ್ರೈಲರ್ ನಲ್ಲಿಯೇ ಕಥೆಯ ವಿಶೇಷತೆ, ಅದಕ್ಕೆ ಹೊಸೆದುಕೊಂಡಿರುವ ಭಾವತೀವ್ರತೆ ಸೇರಿದಂತೆ ಎಲ್ಲವೂ ಹೊಸತನದೊಂದಿಗೆ ಪ್ರೇಕ್ಷಕರನ್ನು ಮುಟ್ಟಿವೆ. ಇದೊಂದು ಬೇರೆಯದ್ದೇ ತೆರನಾದ ಕಥನವಿರಬಹುದೆಂಬ ನಿಖರ ಅಂದಾಜು ನೋಡುಗರಿಗೆ ಸಿಕ್ಕಿದೆ. ಈ ಹಂತದಲ್ಲಿ ಇಂಥಾದ್ದೊಂದು ಕಥೆ ಹುಟ್ಟಿದ ಬಗೆ ಹಾಗೂ ಅದರ ಆಸುಪಾಸಿನ ಒಂದಷ್ಟು ಸೂಕ್ಷ್ಮ ವಿಚಾರಗಳನ್ನು ಸೂರ್ಯ ಹಂಚಿಕೊಂಡಿದ್ದಾರೆ.
Advertisement
2008ರ ಸುಮಾರಿಗೆ ಜೋಗುಳ ಧಾರಾವಾಹಿಯ ಮೂಲಕ ನಟನಾಗಿ ವೃತ್ತಿ ಬದುಕು ಆರಂಭಿಸಿದ್ದವರು ಸೂರ್ಯ ವಸಿಷ್ಠ. ಓರ್ವ ನಟನಾಗಿ ಹಲವು ಹಂತಗಳನ್ನು ದಾಟಿ ಬಂದಿರುವ ಸೂರ್ಯ ಕಿರುತೆರೆ ಪ್ರೇಕ್ಷಕರು ಸದಾ ನೆನಪಲ್ಲಿಟ್ಟುಕೊಳ್ಳುವಂಥಾ ಪಾತ್ರಗಳಿಗೂ ಜೀವ ತುಂಬಿದ್ದಾರೆ. ಭಾರೀ ಜನಪ್ರಿಯತೆ ಪಡೆದಿದ್ದ `ಸಾಯಿಬಾಬಾ’ ಧಾರಾವಾಹಿಯಲ್ಲಿ ಸಾಯಿಬಾಬಾ ಪಾತ್ರವನ್ನು ಆವಾಹಿಸಿಕೊಂಡು ನಟಿಸಿದ್ದವರು ಸೂರ್ಯ ವಸಿಷ್ಠ. ಆ ಪಾತ್ರವನ್ನು ಈವತ್ತಿಗೂ ಜನ ನೆನಪಲ್ಲಿಟ್ಟುಕೊಂಡಿದ್ದಾರೆ. ಹೀಗೆ ನಟನಾಗಿ ನೆಲೆ ಕಂಡುಕೊಳ್ಳುವ ಇರಾದೆ, ಛಾತಿ ಇದ್ದರೂ ಕೂಡಾ ಸಿನಿಮಾದ ಒಳ ಹೊರಗಿನ ಬಗ್ಗೆ ಅತೀವ ಆಸಕ್ತಿ ಇದ್ದುದರಿಂದ ನಿರ್ದೇಶನ ವಿಭಾಗ ಅವರನ್ನು ತೀವ್ರವಾಗಿ ಆಕರ್ಷಿಸಿತ್ತು. ಇದರ ಭಾಗವಾಗಿಯೇ `ತಮಸ್ಸು’ ಚಿತ್ರಕ್ಕೆ ಸಹಾಯಕ ನಿರ್ದೇಶಕರಾಗಿ ಸೇರ್ಪಡೆಗೊಂಡಿದ್ದರಂತೆ. ಹಾಗೆ ತಮಸ್ಸು ಚಿತ್ರದ ಭಾಗವಾಗಿ, ಅದರ ಕಾಸ್ಟಿಂಗ್ ಕಾರ್ಯ ನಡೆಯುತ್ತಿದ್ದ ಘಳಿಗೆಯಲ್ಲಿಯೇ ಸೂರ್ಯ ವಸಿಷ್ಠರೊಳಗೆ ಹಲವು ಭಾವಗಳ ಗುಂಗೀಹುಳ ಮಾರ್ಧನಿಸಲಾರಂಭಿಸಿತ್ತು. ಕಥೆ ಮತ್ತು ಪಾತ್ರಗಳು ಅವರೊಳಗೆ ಮುಖಾಮುಖಿಯಾಗಿ ಹೊಸಾ ಸಂಘರ್ಷವನ್ನೇ ಹುಟ್ಟುಹಾಕಿ ಬಿಟ್ಟಿದ್ದವು.
Advertisement
Advertisement
ಅದರ ಬಗ್ಗೆ ಆಳವಾಗಿ ಆಲೋಚಿಸಿದಾಗ ಕಥೆಗಾರನಿಂದ ಪಾತ್ರವೋ, ಪಾತ್ರದಿಂದ ಕಥೆಗಾರನೋ ಎಂಬಂಥಾ ಸೂಕ್ಷ್ಮ ಎಳೆಯೊಂದು ಆವಿರ್ಭವಿಸಿತ್ತು. ಅದರ ಗುಂಗು ಹತ್ತಿಸಿಕೊಂಡು, ವರ್ಷಾಂತರಗಳ ಕಾಲ ಪ್ರಯತ್ನಿಸಿದ ಫಲವಾಗಿಯೇ `ಸಾರಾಂಶ’ ಕಥೆ ಸಿದ್ಧಗೊಂಡಿತ್ತಂತೆ. ಅದಾದ ನಂತರ ಲೂಸಿಯಾ, ಯೂ ಟರ್ನ್, ಗಂಟುಮೂಟೆ ಮುಂತಾದ ಸಿನಿಮಾಗಳಲ್ಲಿ ಕಾರ್ಯ ನಿರ್ವಹಿಸಿದ್ದರೂ ಸಾರಾಂಶ ಕಥೆ ಮಾತ್ರ ಕಾಡುತ್ತಲೇ ಇತ್ತು. ಈ ಬಗ್ಗೆ ಸ್ನೇಹಿತರ ಬಳಿ ಹೇಳಿಕೊಂಡಾಗ ಅವರ ಮನಸಲ್ಲಿದ್ದದ್ದು ಬೇರೆಯವರಿಂದ ಈ ಕಥೆಯನ್ನು ನಿರ್ದೇಶನ ಮಾಡಿಸಬೇಕೆಂಬ ಯೋಚನೆ. ಆದರೆ, ಬೇರೆ ಯಾರೇ ನಿರ್ದೇಶನ ಮಾಡಿದರೂ ಅದರ ಸೂಕ್ಷ್ಮ ಎಳೆಗಳನ್ನು ದೃಷ್ಯಕ್ಕೆ ಅಳವಡಿಸೋದು ಕಷ್ಟ, ನೀವೇ ಮಾಡಿದರೆ ಚೆನ್ನ ಎಂಬ ನಿಖರ ಅಭಿಪ್ರಾಯ ಸ್ನೇಹಿತರ ಕಡೆಯಿಂದ ಬಂದಿತ್ತಂತೆ.
Advertisement
ಇಂಥಾದ್ದೊಂದು ಸಲಹೆ ಬಂದಾಗ ನಿರ್ದೇಶನ ಮಾಡಲು ಅರ್ಹನಾ ಎಂಬ ಪ್ರಶ್ನೆಯನ್ನು ತಮಗೆ ತಾವೇ ಕೇಳಿಕೊಂಡಿದ್ದ ಸೂರ್ಯ, ಆ ನಂತರ ಅದಕ್ಕಾಗಿ ಬೇಕಾದ ಸರ್ವ ತಾಲೀಮುಗಳನ್ನೂ ನಡೆಸಿದ ನಂತರವಷ್ಟೇ ನಿರ್ದೇಶನದ ಅಖಾಡಕ್ಕಿಳಿದಿದ್ದರು. ಈ ಮೂಲಕ ಕಂಪ್ಯೂಟರ್ ಸೈನ್ಸ್ ನಲ್ಲಿ ಇಂಜಿನಿಯರಿಂಗ್ ಮುಗಿಸಿಕೊಂಡು, ನಟನಾಗೋ ದಾರಿ ಆಯ್ದುಕೊಂಡಿದ್ದ ಸೂರ್ಯ ವಸಿಷ್ಠ, ಅಚಾನಕ್ಕಾಗಿ ನಿರ್ದೇಶಕನ ಅವತಾರವೆತ್ತಿದ್ದರು. ಅವರ ಪ್ರತಿಭೆ, ಕಸುಬುದಾರಿಕೆಯ ಮೇಲೆ ನಂಬಿಕೆಯಿಟ್ಟೇ ರವಿ ಕಶ್ಯಪ್ ಮತ್ತು ಆರ್.ಕೆ ನಲ್ಲಮ್ ಅವರುಗಳು ಸಾರಾಂಶ ಚಿತ್ರವನ್ನು ನಿರ್ಮಾಣ ಮಾಡಲು ಒಪ್ಪಿಕೊಂಡಿದ್ದರು. ಇದೀಗ ಅತ್ಯಂತ ಅಚ್ಚುಕಟ್ಟಾಗಿ ಈ ಸಿನಿಮಾವನ್ನು ರೂಪಿಸಿದ್ದಾರೆಂಬ ಮೆಚ್ಚುಗೆ ನಿರ್ಮಾಪಕರಲ್ಲಿದೆ.
ಆ ಮೆಚ್ಚುಗೆ ಟ್ರೈಲರ್ ಹಾಗೂ ಹಾಡುಗಳ ಮೂಲಕ ಈಗಾಗಲೇ ಪ್ರೇಕ್ಷಕರ ವಲಯಕ್ಕೂ ಕೂಡಾ ಹಬ್ಬಿಕೊಂಡಿದೆ. ಇನ್ನೇನು ಸಾರಾಂಶ ಬಿಡುಗಡೆಯ ದಿನಗಳೂ ಹತ್ತಿರಾಗುತ್ತಿವೆ. ಇದರ ಬಹುಮುಖ್ಯ ಪಾತ್ರವೊಂದನ್ನು ಖುದ್ದು ಸೂರ್ಯ ವಸಿಷ್ಠ ಅವರೇ ನಿಭಾಯಿಸಿದ್ದಾರೆ. ಇವರೊಂದಿಗೆ ದೀಪಕ್ ಸುಬ್ರಮಣ್ಯ, ಶ್ರುತಿ ಹರಿಹರನ್, ಶ್ವೇತಾ ಗುಪ್ತ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ರವಿ ಕಶ್ಯಪ್ ಮತ್ತು ಆರ್.ಕೆ ನಲ್ಲಮ್ ವಿಭಾ ಕಶ್ಯಪ್ ಪೆÇ್ರಡಕ್ಷನ್ಸ್ ಮತ್ತು ಕ್ಲಾಪ್ ಬೋರ್ಡ್ ಪೆÇ್ರಡಕ್ಷನ್ ಮೂಲಕ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಆಸಿಫ್ ಕ್ಷತ್ರಿಯಾ, ರವಿ ಭಟ್, ರಾಮ್ ಮಂಜುನಾಥ್, ಸತೀಶ್ ಕುಮಾರ್, ಪೃಥ್ವಿ ಬನವಾಸಿ ಮುಂತಾದವರ ತಾರಾಗಣ, ಉದಿತ್ ಹರಿತಾಸ್ ಸಂಗೀತ ನಿರ್ದೇಶನ, ಅಪರಾಜಿತ್ ಹಿನ್ನೆಲೆ ಸಂಗೀತ ಮತ್ತು ಪ್ರದೀಪ್ ನಾಯಕ್ ಸಂಕಲನ ಈ ಚಿತ್ರಕ್ಕಿದೆ. ಸಾರಾಂಶದ ಮೂಲಕ ಅನಂತ್ ಭಾರದ್ವಾಜ್ ಎಂಬ ಪ್ರತಿಭಾನ್ವಿತ ಛಾಯಾಗ್ರಾಹಕ ಪರಿಚಯವಾಗುತ್ತಿದ್ದಾರೆ. ಸಾರಾಂಶ ಇದೇ ತಿಂಗಳ 15ರಂದು ತೆರೆಗಾಣಲಿದೆ.