ಹಾಸನ: ಪೈಪ್ ತುಂಬಿದ್ದ ಲಾರಿಗೆ ಟಿಟಿ ವಾಹನ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟಿರುವ ಘಟನೆ ಚನ್ನರಾಯಪಟ್ಟಣದ ಶೆಟ್ಟಿಹಳ್ಳಿ ಬಳಿ ನಡೆದಿದೆ.
ತಾಯಿ ಷಹಜಾತ್(35), ಹಾಗೂ ಮಗು ಉಮರ್(3) ಮೃತ ದುರ್ದೈವಿಗಳು. ಈ ಘಟನೆ ಇಂದು ಬೆಳಗಿನ ಜಾವ 5ಗಂಟೆ ಸುಮಾರಿಗೆ ನಡೆದಿದೆ. ಲಾರಿಗೆ ಟಿಟಿ ವಾಹನ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಟಿಟಿ ವಾಹನದಲ್ಲಿದ್ದ ತಾಯಿ ಹಾಗೂ ಮಗು ಸಾವನ್ನಪ್ಪಿದ್ದು, ಐವರು ಗಾಯಗೊಂಡಿದ್ದಾರೆ. ಗಾಯಗೊಂಡ ಐವರ ಪೈಕಿ ಟಿಟಿ ಚಾಲಕ ಶಫಿ ಎಂಬವರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಕೂಡಲೇ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಎಲ್ಲರೂ ಒಂದೇ ಕುಟುಂಬದವರಾಗಿದ್ದು, ಬೆಂಗಳೂರಿನ ಗೌರಿ ಪಾಳ್ಯ ನಿವಾಸಿಗಳಾಗಿದ್ದಾರೆ. ಇವರೆಲ್ಲರೂ ಹಾಸನದ ದರ್ಗಾವೊಂದಕ್ಕೆ ಹೊರಟಿದ್ದರು ಅಂತಾ ತಿಳಿದುಬಂದಿದೆ. ಈ ಕುರಿತಂತೆ ಚನ್ನರಾಯಪಟ್ಟಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸದ್ಯ ಲಾರಿ ಡ್ರೈವರ್ ಹಾಗೂ ಕ್ಲೀನರ್ ಇಬ್ಬರನ್ನೂ ಪೊಲೀಸರು ವಶಕ್ಕೆ ತೆಗೆದುಕೊಂಡು ತನಿಖೆ ನಡೆಸುತ್ತಿದ್ದಾರೆ.