ಕರಾವಳಿಯಂತೆ ಶಿವಮೊಗ್ಗದಲ್ಲಿಯೂ ಸಾಕಷ್ಟು ಅದ್ಭುತ ಪ್ರವಾಸಿ ತಾಣಗಳಿವೆ. ಅವುಗಳಲ್ಲಿ ಆಗುಂಬೆ ಘಾಟ್ ಕೂಡ ಒಂದು. ಇದು ಭಾರತದಲ್ಲಿ ಅತಿ ಹೆಚ್ಚು ಮಳೆ ಬೀಳುವ ಸ್ಥಳಗಳಲ್ಲಿ ಒಂದಾಗಿದ್ದು, ಈ ಹಿನ್ನೆಲೆಯಲ್ಲಿ ಆಗುಂಬೆಯನ್ನು ದಕ್ಷಿಣದ ಚಿರಾಪುಂಜಿ ಎಂದೂ ಕರೆಯುತ್ತಾರೆ. ಚಾರಣಪ್ರಿಯರಿಗೆ ಹೇಳಿ ಮಾಡಿಸಿದ ಜಾಗ ಈ ಆಗುಂಬೆ ಘಾಟ್. ಹೀಗಾಗಿ ಪ್ರಕೃತಿಯ ಈ ಸೌಂದರ್ಯವನ್ನು ಸವಿಯಲು ನೀವು ಈ ಸ್ಥಳಕ್ಕೆ ಭೇಟಿ ನೀಡಲೇಬೇಕು. ಈ ಸ್ಥಳಕ್ಕೆ ನೀವು ಒಂದು ಬಾರಿ ಭೇಟಿ ಕೊಟ್ಟರೆ ಮತ್ತೆ ಮತ್ತೆ ಹೋಗಬೇಕು ಎನ್ನುವ ಅದ್ಭುತ ಸ್ಥಳ ಇದಾಗಿದೆ.
ಆಗುಂಬೆ ಘಾಟ್ ಎಲ್ಲಿದೆ?: ಪಶ್ಚಿಮ ಘಟ್ಟದಲ್ಲಿರುವ ಆಗುಂಬೆ ಘಾಟ್ ಉಡುಪಿ ಜಿಲ್ಲೆ ಮತ್ತು ಶಿವಮೊಗ್ಗ ಜಿಲ್ಲೆಗಳನ್ನು ಸಂಪರ್ಕಿಸುತ್ತದೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಲ್ಲಿ ಈ ಪ್ರವಾಸಿ ಸ್ಥಳ ಬರುತ್ತದೆ. ಇಲ್ಲಿನ ಪ್ರಕೃತಿ ಸೌಂದರ್ಯ ಎಂಥವರನ್ನೂ ಮಂತ್ರಮುಗ್ಧರನ್ನಾಗಿಸುತ್ತದೆ. ಆಗುಂಬೆಯು ಸೂರ್ಯಾಸ್ತ, ಟ್ರಕ್ಕಿಂಗ್, ಫೋಟೋಗ್ರಫಿ, ವಾತಾವರಣ, ರಾಜ ನಾಗರಹಾವಿನ ಸಂಶೋಧನಾ ಕೇಂದ್ರ ಹಾಗೂ ಔಷಧೀಯ ಸಸ್ಯಗಳಿಗೆ ಹೆಸರುವಾಸಿಯಾಗಿದೆ. ಎಲ್ಲದಕ್ಕಿಂತಲೂ ಮುಖ್ಯವಾಗಿ ಸಂಜೆಯ ವೇಳೆ ಸೂರ್ಯಾಸ್ತವಾಗುವ ದೃಶ್ಯವನ್ನು ಕಾಣಲು ಸಾವಿರಾರು ಮಂದಿ ಇಲ್ಲಿಗೆ ಆಗಮಿಸುತ್ತಾರೆ. ಮಳೆಗಾಲದಲ್ಲಿ ಕಾದು ಕುಳಿತು ಸೂರ್ಯಾಸ್ತವನ್ನು ಕಣ್ತುಂಬಿಕೊಳ್ಳುವುದೇ ಸಡಗರವಾಗಿರುತ್ತದೆ. ಹೆಚ್ಚಿನ ಪ್ರವಾಸಿಗರು ಆಗುಂಬೆಯನ್ನು ಅದರ ಕಾಡುಗಳ ಮೂಲಕ ಚಾರಣ ಮಾಡಲು ಅಥವಾ ಜಲಪಾತಗಳನ್ನು ವೀಕ್ಷಿಸಲು ಭೇಟಿ ನೀಡುತ್ತಾರೆ.
Advertisement
Advertisement
ತಲುಪುವುದು ಹೇಗೆ?: ಆಗುಂಬೆ ಘಾಟ್‍ಗೆ ತೆರಳಲು ವಿಮಾನದಲ್ಲಿ ಬರುವವರಾದರೆ ನೀವು ಮಂಗಳೂರು ವಿಮಾನ ನಿಲ್ದಾಣಕ್ಕೆ ಬರಬೇಕು. ನಂತರ ಅಲ್ಲಿಂದ ಬಸ್ಸಿನ ಮೂಲಕ ಸುಮಾರು 100 ಕಿ.ಮೀ ದೂರ ಸಾಗಿದರೆ ಆಗುಂಬೆ ಘಾಟ್ (Agumbe Ghat) ಸಿಗುತ್ತದೆ. ಇನ್ನು ರೈಲಿನ ಮೂಲಕ ಬರುವವರಾದರೆ ಮಂಗಳೂರು ಮತ್ತು ಶಿವಮೊಗ್ಗ ಹತ್ತಿರದ ರೈಲು ನಿಲ್ದಾಣಗಳಿವೆ. ಇದನ್ನೂ ಓದಿ: ಪ್ರಕೃತಿ ರಮಣೀಯ ನರಹರಿ ಪರ್ವತದ ಸೌಂದರ್ಯ ಸವಿಯಲು ನೀವೂ ಭೇಟಿ ಕೊಡಿ
Advertisement
ಭೇಟಿ ನೀಡಬೇಕಾದ ಪ್ರಮುಖ ಸ್ಥಳಗಳು: ಆಗುಂಬೆಯು ಕರ್ನಾಟಕದ ಒಂದು ಗಿರಿಧಾಮವಾಗಿದ್ದು, ಇದು ಹಚ್ಚ ಹಸಿರಿನ ಜೊತೆಗೆ ಬೆರಗುಗೊಳಿಸುವ ಸೂರ್ಯಾಸ್ತಗಳಿಗೆ ಹೆಸರುವಾಸಿಯಾಗಿದೆ. ವಾರಾಂತ್ಯದಲ್ಲಿ ಸ್ನೇಹಿತರು ಅಥವಾ ಕುಟುಂಬದೊಂದಿಗೆ ವಿಹಾರಕ್ಕೆ ಭೇಟಿ ನೀಡಲು ಇದು ಸೂಕ್ತ ಸ್ಥಳವಾಗಿದೆ. ಆಗುಂಬೆಯ ಜೊತೆಗೆ, ನೀವು ಭೇಟಿ ನೀಡಬಹುದಾದ ಕುಂದಾದ್ರಿ ಬೆಟ್ಟಗಳು, ಶೃಂಗೇರಿ ಮತ್ತು ಕುಪ್ಪಳ್ಳಿಯಂತಹ ಅನೇಕ ಹತ್ತಿರದ ಆಕರ್ಷಣೆಗಳಿವೆ. ಈ ಸ್ಥಳಗಳು ಅದ್ಭುತ ನೋಟಗಳು, ದೇವಾಲಯಗಳು, ಜಲಪಾತಗಳು, ವನ್ಯಜೀವಿಗಳು ಮತ್ತು ಸಾಹಸ ಚಟುವಟಿಕೆಗಳನ್ನು ನೀಡುತ್ತವೆ.
Advertisement
ಇದರ ಜೊತೆಗೆ ಗೋಪಾಲಕೃಷ್ಣ ದೇವಾಲಯ, ಸನ್ಸೆಟ್ ಪಾಯಿಂಟ್ ಗಳಿಗೆ ಭೇಟಿ ನೀಡಿದರೆ ನಿಮಗೆ ಅದ್ಭುತ ಅನುಭವ ಸಿಗುವುದರಲ್ಲಿ ಎರಡು ಮಾತಿಲ್ಲ. ಇದರ ಜೊತೆಗೆ ಒಂದಷ್ಟು ಜಲಪಾತಗಳಿಗೂ ಭೇಟಿ ಕೊಟ್ಟು ಎಂಜಾಯ್ ಮಾಡಬಹುದು. ಅವುಗಳೆಂದರೆ ಕುಂಚಿಕಲ್ ಜಲಪಾತ, ಬರ್ಕಾನ ಜಲಪಾತ, ಒನಕೆ ಅಬ್ಬಿ ಜಲಪಾತ, ಜೋಗಿಗುಂಡಿ ಹಾಗೂ ಕೂಡ್ಲು ತೀರ್ಥ ಜಲಪಾತ.
ಇಷ್ಟು ಮಾತ್ರವಲ್ಲದೇ ಆಗುಂಬೆಯಲ್ಲಿ ನಾರಿಷ್ಮ ಪರ್ವತ ಅನ್ನುವ ಎತ್ತರದ ಶಿಖರವಿದೆ. ಕೆಲಸದ ಜಂಜಾಟದಲ್ಲಿದ್ದವರು ಮನಸ್ಸಿಗೆ ಏಕಾಂತವನ್ನು ಬಯಸುವವರು ಹಾಗೂ ವಿಶ್ರಾಂತಿ ತೆಗೆದುಕೊಳ್ಳಬೆಕೆಂಬ ಬಯಕೆ ಇರುವವರಿಗೆ ಈ ಚಾರಣವು ಬಹಳಷ್ಟು ಮುದ ನೀಡುತ್ತದೆ. ಇದು ಎತ್ತರದ ಹುಲ್ಲುಗಾವಲು ಮತ್ತು ದಟ್ಟವಾದ ಅರಣ್ಯ ಪ್ರದೇಶವನ್ನು ಹೊಂದಿದೆ. ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಒಳಗೆ ಹಲವಾರು ಬಗೆಯ ಪಕ್ಷಿಗಳು ಮತ್ತು ಇತರ ಪ್ರಾಣಿಗಳನ್ನು ನೋಡಬಹುದು.
ಸ್ವರ್ಗದ ಅನುಭವ: ನೀವು ಕಾಡಿನೊಳಗೆ ಹೋಗುತ್ತಿದ್ದಂತೆಯೇ ನಿಮಗೆ ಸ್ವರ್ಗದ ಅನುಭವಾಗುತ್ತದೆ. ಸುತ್ತಮುತ್ತಲೂ ಹಚ್ಚ ಹಸುರಿನಿಂದ ಕಂಗೊಳಿಸುವ ಮರಗಳು, ಪಕ್ಷಿಗಳ ಕೂಗು.. ಅಲ್ಲಲ್ಲಿ ಝುಳು ಝುಳು ನೀರಿನ ಶಬ್ಧ ಇವೆಲ್ಲವೂ ನಿಮ್ಮ ಮನಸ್ಸಿನ ಭಾರವನ್ನು ಇಳಿಯುವಂತೆ ಮಾಡುತ್ತವೆ. ಈ ಜಾಡು ನಿಮ್ಮನ್ನು ದಟ್ಟವಾದ ಕಾಡುಗಳ ಮೂಲಕ ಕರೆದೊಯ್ಯುತ್ತದೆ. ಹೀಗೆ ಸಾಗುವಾಗ ಕೆಲವರು ವಿವಿಧ ಸಸ್ಯ ಮತ್ತು ಪ್ರಾಣಿಗಳನ್ನು ವೀಕ್ಷಿಸಬಹುದು, ಇನ್ನೂ ಕೆಲವರು ದಾರಿಯಲ್ಲಿರುವ ಜಲಪಾತಗಳಲ್ಲಿ ಆನಂದಿಸಬಹುದು ಅಥವಾ ವಿಶ್ರಾಂತಿ ಪಡೆಯಬಹುದು.
ಕೊನೆಯದಾಗಿ ನೀವು ಸೂರ್ಯಾಸ್ತದ ಸ್ಥಳಕ್ಕೆ ಗಿರಿಧಾಮಕ್ಕೆ ಚಾರಣ ಮಾಡಬಹುದು. ನೀವು ಹೋಗುವ ಸಂದರ್ಭದಲ್ಲಿ ಮಂಜು ಕಡಿಮೆ ಇದ್ದರೆ ಅರಬ್ಬಿ ಸಮುದ್ರದ ಸುಂದರವಾದ ದೂರದ ನೋಟವನ್ನು ಸವಿಯಬಹುದು. ಇಲ್ಲಿ ವಿಶ್ರಾಂತಿಯನ್ನು ಪಡೆದುಕೊಳ್ಳಬಹುದು. ಪ್ರಶಾಂತವಾದ ವಾತಾವರಣದ ನಡುವೆ ಕುಳಿತು ಅದ್ಭುತ ನೋಟಗಳು ನಿಮ್ಮನ್ನೇ ನೀವು ಮರೆಯುಂತೆ ಮಾಡುತ್ತದೆ.
ಉತ್ತಮ ಸಮಯ: ಆಗುಂಬೆಗೆ ನೀವು ಯಾವಾಗ ಬೇಕಾದರೂ ಭೇಟಿ ಕೊಡಬಹುದು. ಯಾಕೆಂದರೆ ಈ ಸ್ಥಳ ತಂಪಾದ ವಾತಾವರಣವನ್ನು ಹೊಂದಿದೆ. ಮಳೆಗಾಲ ಮತ್ತು ಚಳಿಗಾಲವು ಆಗುಂಬೆಗೆ ಭೇಟಿ ನೀಡಲು ಉತ್ತಮ ತಿಂಗಳುಗಳಾಗಿವೆ. ಈ ಸಮಯದಲ್ಲಿ ಪ್ರಕೃತಿ ವಿಸ್ಮಯವನ್ನು ನೀವು ಆನಂದಿಸಬಹುದು. ಅಕ್ಟೋಬರ್‍ನಿಂದ ಫೆಬ್ರವರಿ ನಡುವೆ ಯಾವಾಗ ಬೇಕಾದರೂ ಭೇಟಿ ನೀಡಬಹುದು, ಇದು ಸರಾಸರಿ ಮಾನ್ಸೂನ್ ಋತುವಾಗಿದೆ, ಇದು ಸೌಮ್ಯವಾದ ಮತ್ತು ಶುಷ್ಕ ಋತುವಾಗಿದ್ದು, ಪಾದಯಾತ್ರೆಗೆ ಸೂಕ್ತವಾಗಿದೆ.