ನವದೆಹಲಿ: ದೆಹಲಿ ಮತ್ತು ಸುತ್ತಮುತ್ತಲಿನ ರಾಜ್ಯಗಳು ಮಾಲಿನ್ಯ ನಿಯಂತ್ರಣಕ್ಕೆ ಪ್ರಾಯೋಗಿಕ ಪರಿಹಾರಗಳೊಂದಿಗೆ ಮುಂದಿನ ವಿಚಾರಣೆಗೆ ಬರಬೇಕು. ಇಲ್ಲಿಯ ಜನರನ್ನು ಸಾಯಲು ನಾವು ಅನುಮತಿಸುವುದಿಲ್ಲ. ಮುಖ್ಯ ಕಾರ್ಯದರ್ಶಿಗಳು ಕ್ರಮಗಳನ್ನು ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಅವರನ್ನು ಕೋರ್ಟಿಗೆ ಕರೆಸಬೇಕಾಗುತ್ತದೆ ಎಂದು ಸುಪ್ರೀಂಕೋರ್ಟ್ (Supreme Court) ಎಚ್ಚರಿಕೆ ನೀಡಿದೆ.
ಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಅರ್ಜಿ ವಿಚಾರಣೆ ಮುಂದುವರಿಸಿದ ಸುಪ್ರೀಂಕೋರ್ಟ್, ಮಾಲಿನ್ಯ ನಿಯಂತ್ರಣಕ್ಕೆ ನೀವು ಬೇಕಾದುದನ್ನು ಮಾಡಿ, ನಾವು ಏನನ್ನೂ ಹೇಳುತ್ತಿಲ್ಲ ಅಥವಾ ಯಾವುದೇ ನಿರ್ದೇಶನವನ್ನು ನೀಡುತ್ತಿಲ್ಲ. ನೀವೂ ಏನು ಮಾಡದಿದ್ದರೆ ನಾವು ಏನಾದರೂ ಮಾಡಬೇಕಾಗುತ್ತದೆ ಎಂದು ಸರ್ಕಾರಗಳ ವಿರುದ್ಧ ಛೀಮಾರಿ ಹಾಕಿತು.
ಕೃಷಿ ತಾಜ್ಯ ಸುಡುವುದು ಮಾಲಿನ್ಯಕ್ಕೆ ಪ್ರಮುಖ ಕಾರಣವಾಗಿದೆ. ಅದು ಕೂಡಲೇ ನಿಲ್ಲಬೇಕು. ನಾವು ಮಧ್ಯಪ್ರವೇಶಿಸಿದ ನಂತರವೇ ಕೆಲಸಗಳು ಏಕೆ ನಡೆಯುತ್ತವೆ? ಸೂಕ್ತ ಕ್ರಮಗಳನ್ನು ಕೈಗೊಳ್ಳಲು ರಾಜ್ಯ ಸರ್ಕಾರಗಳಿಗೆ ಬಿಡುವುದಾಗಿ ನ್ಯಾಯಾಲಯ ಹೇಳಿದೆ. ಇದನ್ನೂ ಓದಿ: ಸುಮಲತಾ ಬೆಂಗಳೂರು ಉತ್ತರಕ್ಕೆ ಬಂದ್ರೆ ಸ್ವಾಗತ- ಸದಾನಂದಗೌಡ
ವಿಚಾರಣೆ ವೇಳೆ ದೆಹಲಿಯಲ್ಲಿ (New Delhi) ಜಾರಿ ಮಾಡಿದ್ದ ಸಮ ಬೆಸ ಯೋಜನೆ ಯಶಸ್ವಿಯಾಗಿದೆ ಎಂದು ಸರ್ಕಾರ ಹೇಳಿದೆ. ಬೆಸ-ಸಮ ಯೋಜನೆಯು ರಸ್ತೆ ದಟ್ಟಣೆಯನ್ನು ಕಡಿಮೆ ಮಾಡಿದೆ. ವಾಹನಗಳ ಹೊರಸೂಸುವಿಕೆಯನ್ನು ತಡೆಯುವಲ್ಲಿ ಯಶಸ್ವಿಯಾಗಿದೆ. ಸಾರ್ವಜನಿಕ ಸಾರಿಗೆಯ ಬಳಕೆಯಲ್ಲಿ ಹೆಚ್ಚಳಕ್ಕೆ ಕಾರಣವಾಗಿದೆ. ಜೊತೆಗೆ ಇಂಧನ ಬಳಕೆಯಲ್ಲಿ 15 ಪ್ರತಿಶತದಷ್ಟು ಇಳಿಕೆಯಾಗಿದೆ ಎಂದು ಮಾಹಿತಿ ನೀಡಿದೆ.
ಇದೇ ವೇಳೆ ಮಾಲಿನ್ಯ ನಿಯಂತ್ರಣಕ್ಕೆ ಕೃತಕ ಮಳೆ ಸುರಿಸುವ ಬಗ್ಗೆ ಮಾಹಿತಿ ನೀಡಿದೆ. ಕೃತಕ ಮಳೆ ಸುರಿಸಲು ಮೋಡ ಬಿತ್ತನೆಗೆ ರಾಜ್ಯ ಸರ್ಕಾರ ಸಿದ್ಧವಿದೆ. ಹಣಕಾಸು ಖರ್ಚು ಮಾಡಲು ತಯಾರಿದೆ. ಕೇಂದ್ರ ಸರ್ಕಾರವು ಈ ನಿರ್ಧಾರವನ್ನು ಬೆಂಬಲಿಸಿದರೆ ದೆಹಲಿ ಸರ್ಕಾರವು ನವೆಂಬರ್ 20 ರೊಳಗೆ ಮೊದಲ ಕೃತಕ ಮಳೆಗೆ ವ್ಯವಸ್ಥೆ ಮಾಡಬಹುದು ಎಂದು ಸರ್ಕಾರದ ಪರ ವಕೀಲರು ಹೇಳಿದರು.
ಮುಂದುವರಿದು ತಂತ್ರಜ್ಞಾನವನ್ನು ಬಳಸಲು ಅಗತ್ಯವಾದ ಅನುಮತಿಗಳು ಪಡೆಯುವುದು ಸಮಯ-ಸೂಕ್ಷ್ಮ ವಿಷಯವಾಗಿದೆ ಎಂದು ವಕೀಲರು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಕೋರ್ಟ್, ಇದರಲ್ಲಿ ನ್ಯಾಯಾಲಯ ಏಕೆ ಮಧ್ಯಪ್ರವೇಶಿಸಬೇಕು? ಅಗತ್ಯ ಅನುಮತಿಗಳನ್ನು ದೆಹಲಿ ಸರ್ಕಾರ ಪಡೆಯಬೇಕು ಎಂದು ಸೂಚಿಸಿತು.
ಅಮಿಕಸ್ ಅಪರಾಜಿತಾ ಸಿಂಗ್ ವಾದ ಮಂಡಿಸಿ, ಕೃಷಿ ತಾಜ್ಯ ಒಟ್ಟು ಮಾಲಿನ್ಯದ 24% ರಷ್ಟು ಕೊಡುಗೆ ನೀಡಿದರೆ, ಕಲ್ಲಿದ್ದಲು ಮತ್ತು ಹಾರುಬೂದಿ 17% ರಷ್ಟು ಮತ್ತು ವಾಹನಗಳು ಮಾಲಿನ್ಯದಿಂದ 16% ರಷ್ಟು ಮಾಲಿನ್ಯವಾಗುತ್ತಿದೆ ಎಂದು ಆರೋಪಿಸಿದರು. ಇದನ್ನೂ ಓದಿ: ದೆಹಲಿ ವಾಯುಮಾಲಿನ್ಯಕ್ಕೆ ಮೂಲ ಗೊತ್ತಿಲ್ಲ – ಆಪ್ ಸಚಿವೆ ವಿವಾದಾತ್ಮಕ ಹೇಳಿಕೆ
ಇದಕ್ಕೆ ಪ್ರತಿಕ್ರಿಯಿಸಿದ ಕೋರ್ಟ್, ಮಾಲಿನ್ಯದ ಮೂಲಗಳ ಬಗ್ಗೆ ಎಲ್ಲರಿಗೂ ಅರಿವಿದ್ದರೂ ಅವರು ನ್ಯಾಯಾಲಯದ ಮಧ್ಯಪ್ರವೇಶಕ್ಕಾಗಿ ಕಾಯುತ್ತಿದ್ದಾರೆ. ನಮ್ಮಲ್ಲಿ ಪ್ರತಿಯೊಂದು ಸಮಸ್ಯೆಗೂ ಪರಿಹಾರವಿದೆ. ಆದರೆ ಯಾರೂ ಏನನ್ನೂ ಮಾಡುತ್ತಿಲ್ಲ. ನಮಗೆ ಫಲಿತಾಂಶಗಳು ಬೇಕು, ನಾವು ತಜ್ಞರಲ್ಲ. ಆದರೆ ನಮಗೆ ಪರಿಹಾರಗಳು ಬೇಕು ಎಂದು ಚಾಟೀ ಬೀಸಿ ಪ್ರಕರಣದ ಮುಂದಿನ ವಿಚಾರಣೆಯನ್ನು ನವೆಂಬರ್ 21 ಕ್ಕೆ ನಿಗದಿಪಡಿಸಿತು.