– ಕಾಲ್ತುಳಿತದ ದುರಂತದಲ್ಲಿ ಮೃತರ ಸಂಖ್ಯೆ 12ಕ್ಕೆ ಏರಿಕೆ
ಅಮರಾವತಿ: ಆಂಧ್ರಪ್ರದೇಶದ ಶ್ರೀಕಾಕುಳಂನ ಕಾಶಿಬುಗ್ಗ (Srikakulam’s Kasibugga) ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ (Sri Venkateswara Temple) ಕಾಲ್ತುಳಿತ ಸಂಭವಿಸಿದೆ. ದುರಂತದಲ್ಲಿ ಮಕ್ಕಳೂ ಸೇರಿ 12 ಮಂದಿ ಭಕ್ತರು ಸಾವನ್ನಪ್ಪಿದ್ದಾರೆ. 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ನಡುವೆ ಕಾಲ್ತುಳಿತ ದುರಂತ ಸಂಭವಿಸಿದ ದೇವಾಲಯದ ಬಗ್ಗೆ ಇಂಟ್ರೆಸ್ಟಿಂಗ್ ವಿಚಾರವೊಂದು ಬೆಳಕಿಗೆ ಬಂದಿದೆ.
ಹೌದು.. ತಿರುಮಲ ಶ್ರೀವಾರಿ ದರ್ಶನ ಪಡೆಯಲು ಸಾಧ್ಯವಾಗಲಿಲ್ಲ ಅನ್ನೋ ಕಾರಣಕ್ಕೇ ಭಕ್ತನೊಬ್ಬ ಸ್ವಂತ ದೇಗುಲ ನಿರ್ಮಿಸಿದ್ರಂತೆ. ಈ ದೇವಾಲಯವನ್ನ ನಿರ್ಮಿಸಿದ್ದು ಯಾರು? ಹಿಂದಿನ ಕಥೆ ಏನು? ಎಂಬುದನ್ನು ತಿಳಿಯುವ ಕುತೂಹಲ ನಿಮಗಿದ್ದರೆ ಮುಂದೆ ಓದಿ…
ದೇವಾಲಯ ನಿರ್ಮಾಣವಾದ ಕಥೆ
ಶ್ರೀಕಾಕುಳಂ ಜಿಲ್ಲೆಯ ಹರಿಮುಕುಂದ ಪಾಂಡಾ (Harimukunda Pand) ಅವರು 13 ವರ್ಷಗಳ ಹಿಂದೆ ತಿರುಮಲ ಶ್ರೀವಾರಿ ದರ್ಶನಕ್ಕೆ ಬಂದಿದ್ದರು. ಗೋವಿಂದನ ನಾಮ ಜಪಿಸುತ್ತಾ, ಭಗವಂತನ ದರ್ಶನ ಪಡೆಯಲು ಗಂಟೆಗಟ್ಟಲೆ ಆರತಿಯೊಂದಿಗೆ ಸರತಿ ಸಾಲಿನಲ್ಲಿ ನಿಂತಿದ್ದರು. ಅಲ್ಲಿ ಸ್ವಲ್ಪ ಹೊತ್ತು ನಿಂತು ಆನಂದ ನಿಲಯದಲ್ಲಿ ಪ್ರತಿಷ್ಠಾಪಿಸಲ್ಪಟ್ಟ ಕಣ್ತುಂಬ ನೋಡಬಹುದು ಎಂಬ ಉತ್ಸಾಹದಲ್ಲಿದ್ದರು. ಆದರೆ ಶ್ರೀವಾರಿ ದರ್ಶನ ಭಾಗ್ಯ ಸಿಗಲೇ ಇಲ್ಲ. ಅಲ್ಲಿ ಕರ್ತವ್ಯದಲ್ಲಿದ್ದ ಭದ್ರತಾ ಸಿಬ್ಬಂದಿಯೊಬ್ಬ ಅವರನ್ನು ಪಕ್ಕಕ್ಕೆ ತಳ್ಳಿಬಿಟ್ಟರು. ತಾನು 80 ವರ್ಷದ ವೃದ್ಧ, ಅನಾರೋಗ್ಯದಿಂದ ಬಳಲುತ್ತಿರುವುದಾಗಿ ಹೇಳಿದ್ರೂ ಅವರ ಮಾತನ್ನ ಕೇಳಲೇ ಇಲ್ಲ. ಕೊನೆಗೆ ದರ್ಶನ ಸಿಗದೇ ನಿರಾಶೆಯಿಂದ ಹೊರಟುಬಿಟ್ಟರು.
ಮನೆಗೆ ಬಂದ ಬಳಿಕ ತಮ್ಮ ತಾಯಿ ಜೊತೆಗೆ ತಮಗಾದ ಕಹಿ ಅನುಭವ ಹಂಚಿಕೊಂಡ್ರು. ಬಳಿಕ ತಾವೇ ಸ್ವಂತ ದೇವಾಲಯ ನಿರ್ಮಾಣ ಮಾಡುವ ಮನಸ್ಸು ಮಾಡಿದ್ರು. ಹರಿಮುಕುಂದ ಪಾಂಡಾ ಅವರ ಕುಟುಂಬ ಶ್ರೀಕಾಕುಳಂ ಪಟ್ಟಣದ ಹೃದಯ ಭಾಗದಲ್ಲಿ ಸುಮಾರು 100 ಎಕ್ರೆ ಭೂಮಿಯನ್ನ ಹೊಂದಿತ್ತು. ಪಾಂಡಾಗರಿ ಉದ್ಯಾನ ಎಂದೇ ಖ್ಯಾತಿ ಪಡೆದಿತ್ತು. ಹಾಗಾಗಿ 12 ಎಕ್ರೆ 40 ಸೇಂಟ್ಸ್ ಪ್ರದೇಶದಲ್ಲಿ ಶ್ರೀ ವೆಂಕಟೇಶ್ವರ ಸ್ವಾಮಿ ದೇಗುಲ ನಿರ್ಮಾಣ ಮಾಡಿದ್ರು.
ತಿರುಮಲದ ಶ್ರೀವಾರಿ ದೇವಾಲಯಕ್ಕಿಂತ ಕಡಿಮೆಯಿಲ್ಲದ ರೀತಿಯಲ್ಲಿ ದೇವಾಲಯವನ್ನ ವಿನ್ಯಾಸಗೊಳಿಸಲಾಗಿದೆ. ಶ್ರೀದೇವಿ ಮತ್ತು ಭೂದೇವಿ ಅಮ್ಮವಾರಿಯ ವಿಗ್ರಹಗಳನ್ನ ಒಂದೇ ಶಿಲೆಯಲ್ಲಿ ಕೆತ್ತಲಾಗಿದೆ. ನವಗ್ರಹ ದೇವತೆಗಳ ಜೊತೆಗೆ, ಎಲ್ಲಾ ದೇವತೆಗಳ ವಿಗ್ರಹಗಳನ್ನು ಇಲ್ಲಿ ಪ್ರತಿಷ್ಠಾಪಿಸಲಾಗಿದೆ. ಹಬ್ಬಗಳ ಸಮಯದಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತರು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ.
ಕಾಶಿಬುಗ್ಗದ ಪಾಂಡಾ ಉದ್ಯಾನದಲ್ಲಿ ನಿರ್ಮಾಣಗೊಂಡಿರುವ ವಿಶಾಲ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯ ಈಗ ಸಾಕಷ್ಟು ಖ್ಯಾತಿ ಪಡೆದಿದೆ. ಇದೇ ದೇವಾಲಯದಲ್ಲಿ ಈಗ ಕಾಲ್ತುಳಿತ (Stampede) ಸಂಭವಿಸಿದಿ 12 ಮಂದಿ ಸಾವನ್ನಪ್ಪಿದ್ದಾರೆ.



