ಸಾಕಷ್ಟು ಸದಭಿರುಚಿಯ ಚಿತ್ರಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿರುವ ಸಂದೇಶ್ ನಾಗರಾಜ್ ಅವರು ಅರ್ಪಿಸುವ, ಸಂದೇಶ್ ಎನ್ ನಿರ್ಮಾಣದ ಹಾಗೂ ಸೃಜನ್ ಲೋಕೇಶ್ (Srujan Lokesh) ನಾಯಕನಾಗಿ ನಟಿಸುವುದಲ್ಲದೆ, ಪ್ರಥಮ ಬಾರಿಗೆ ನಿರ್ದೇಶನವನ್ನು ಮಾಡುತ್ತಿರುವ ‘GST’ ಚಿತ್ರಕ್ಕೆ ಮಾತಿನ ಭಾಗದ ಚಿತ್ರೀಕರಣ ಮುಕ್ತಾಯವಾಗಿದೆ.
ಹಾಡುಗಳ ಚಿತ್ರೀಕರಣ ಮಾತ್ರ ಬಾಕಿಯಿದೆ. ಬೆಂಗಳೂರಿನಲ್ಲೇ, ಅದರಲ್ಲೂ ಅಭಿಮಾನ್ ಸ್ಟುಡಿಯೋದಲ್ಲಿ ನಿರ್ಮಿಸಲಾಗಿರುವ ಅದ್ದೂರಿ ಸೆಟ್ ನಲ್ಲೇ ಹೆಚ್ಚಿನ ಚಿತ್ರೀಕರಣ ನಡೆದಿದೆ. ಚಿತ್ರದ ಡಬ್ಬಿಂಗ್ ಸಹ ಸಂಪೂರ್ಣವಾಗಿದೆ.
ಈ ಚಿತ್ರದ ಮತ್ತೊಂದು ವಿಶೇಷವೆಂದರೆ ನಿರ್ಮಾಪಕ ಸಂದೇಶ್ ಅವರು ಈ ಚಿತ್ರದ ಪ್ರಮುಖಪಾತ್ರದಲ್ಲಿ ನಟಸಿದ್ದಾರೆ. ಅವರ ಪಾತ್ರ ಏನೆಂಬುದ್ದನ್ನು ನಿರ್ದೇಶಕ ಸೃಜನ್ ಗುಪ್ತವಾಗಿಟ್ಟಿದ್ದಾರೆ. ಇನ್ನು ಈ ಚಿತ್ರದಲ್ಲಿ ಗಿರಿಜಾ ಲೋಕೇಶ್, ಸೃಜನ್ ಲೋಕೇಶ್ ಹಾಗೂ ಸೃಜನ್ ಅವರ ಪುತ್ರ ಸುಕೃತ್ ಮೂರು ಜನ ಅಭಿನಯಿಸುತ್ತಿದ್ದಾರೆ.
ಅಜ್ಜಿ, ಮಗ ಹಾಗೂ ಮೊಮ್ಮಗ ಮೂರು ಜನರನ್ನು ಒಟ್ಟಿಗೆ ತೆರೆಯ ಮೇಲೆ ನೋಡಬಹುದು. ತಮ್ಮ ನಿರ್ದೇಶನದ ಮೊದಲ ಚಿತ್ರದಲ್ಲೇ ಸೃಜನ್ ತಮ್ಮ ತಾಯಿ ಹಾಗೂ ಮಗನಿಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಪರಿಶುದ್ಧ ಮನೋರಂಜನೆಯ ಕಥಾಹಂದರ ಹೊಂದಿರುವ GSTಗೆ, ಘೋಸ್ಟ್ ಇನ್ ಟ್ರಬಲ್ಎಂ ಬ ಅಡಿಬರಹವಿದೆ.
ಸೃಜನ್ ಲೋಕೇಶ್ ಅವರಿಗೆ ನಾಯಕಿಯಾಗಿ ರಜನಿ ಭಾರದ್ವಾಜ್ ನಟಿಸುತ್ತಿದ್ದಾರೆ. ಪ್ರಮೋದ್ ಶೆಟ್ಟಿ, ಗಿರಿಜಾ ಲೋಕೇಶ್, ಶೋಭ್ ರಾಜ್, ಶರತ್ ಲೋಹಿತಾಶ್ವ, ನಿವೇದಿತಾ, ಅರವಿಂದ್ ರಾವ್, ತಬಲ ನಾಣಿ, ರವಿಶಂಕರ್ ಗೌಡ, ವಿನೋದ್ ಗೊಬ್ಬರಗಾಲ, ಮಾಸ್ಟರ್ ಸುಕೃತ್ ಮುಂತಾದವರು ಈ ಸಿನಿಮಾದ ತಾರಾಬಳಗದಲ್ಲಿದ್ದಾರೆ. ಚಂದನ್ ಶೆಟ್ಟಿ ಸಂಗೀತ ನಿರ್ದೇಶನ ಹಾಗೂ ಗುಂಡ್ಲುಪೇಟೆ ಸುರೇಶ್ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ರಾಜಶೇಖರ್ ಸಂಭಾಷಣೆ ಬರೆದಿದ್ದಾರೆ. ತೇಜಸ್ವಿ ಕೆ ನಾಗ್ ಈ ಚಿತ್ರದ ಸಹ ನಿರ್ದೇಶಕರು.