ಸೂರ್ಯ ವಸಿಷ್ಠ ನಿರ್ದೇಶನದಲ್ಲಿ ಮೂಡಿ ಬಂದಿರುವ `ಸಾರಾಂಶ’ (Saramsha) ಚಿತ್ರ ಇದೇ ತಿಂಗಳ 15ರಂದು ಬಿಡುಗಡೆಗೊಳ್ಳಲಿದೆ. ಇದುವರೆಗೂ ಕ್ರಿಯಾಶೀಲ ಹಾದಿಯಲ್ಲಿ ಪ್ರೇಕ್ಷಕರನ್ನು ಆವರಿಸಿಕೊಳ್ಳುತ್ತಾ ಸಾಗಿ ಬಂದಿರುವ ಈ ಸಿನಿಮಾ ಭಿನ್ನ ಜಾಡಿನದ್ದೆಂಬುದು ಈಗಾಗಲೇ ಋಜುವಾತಾಗಿ ಬಿಟ್ಟಿದೆ. ಚಿತ್ರರಂಗದ ಜೀವಂತಿಕೆಯ ದೃಷ್ಟಿಯಿಂದ ಸಾರಾಂಶದಂಥಾ ಸೂಕ್ಷ್ಮ ಕಥಾನಕಗಳು ಆಗಾಗ ದೃಷ್ಯರೂಪ ಧರಿಸಿ ಗೆಲ್ಲುತ್ತಿರಬೇಕು. ಆದರೆ, ಸದಾ ಕಾಲವೂ ಕಮರ್ಶಿಯಲ್ ಹಾದಿಯಲ್ಲಿ ಹೆಜ್ಜೆಯೂರುತ್ತಾ, ಅದರ ಆಚೀಚೆ ದೃಷ್ಟಿ ಹರಿಸೋ ಔಚಿತ್ಯ ಹೊಂದಿರೋ ನಿರ್ಮಾಪಕರ ಸಂಖ್ಯೆ ತೀರಾ ವಿರಳ. ಸಹನೀಯ ಸಂಗತಿಯೆಂದರೆ, ಅಂಥವರ ಸಂತೆಯಲ್ಲೂ ಸದಭಿರುಚಿಯ ಕಥನಗಳಿಗೆ ಕಣ್ಣಾಗುತ್ತಾ, ಹೊಸಬರ ಬೆನ್ತಟ್ಟಿ ಪ್ರೋತ್ಸಾಹಿಸೋ ಗುಣದ ನಿರ್ಮಾಪಕರಿದ್ದಾರೆ; ಅದಕ್ಕೆ ತಾಜಾ ಉದಾಹರಣೆಯಂತಿರುವವರು ಸಾರಾಂಶ ಚಿತ್ರದ ನಿರ್ಮಾಪಕ ರವಿ ಕಶ್ಯಪ್ (Ravi Kashyap) ಮತ್ತು ಅವರೊಂದಿಗೆ ಕೈ ಜೋಡಿಸಿರುವ ಆರ್.ಕೆ ನಲ್ಲಮ್.
Advertisement
ಸೂರ್ಯ ವಸಿಷ್ಠ ಕನಸಿನ ಕೂಸಿನಂಥಾ `ಸಾರಾಂಶ’ ಚಿತ್ರದ ಪ್ರಧಾನ ನಿರ್ಮಾಪಕ ರವಿ ಕಶ್ಯಪ್ ಕನ್ನಡ ಚಿತ್ರಪ್ರೇಮಿಗಳ ಪಾಲಿಗೆ ಪರಿಚಿತರು. ಲೂಸಿಯಾ ಕಾಲದಿಂದಲೂ ನಿರ್ಮಾಪಕನಾಗಿ ತನ್ನದು ಭಿನ್ನ ಪಥ ಎಂಬುದನ್ನು ಸಾಬೀತು ಪಡಿಸಿದ್ದವರು ರವಿ ಕಶ್ಯಪ್. ಕಥೆಯೊಂದರ ಒಳ ಹೂರಣವನ್ನು ಒಂದೇ ಸಲಕ್ಕೆ ಗ್ರಹಿಸುವ, ಕಥೆಯೊಂದು ದೃಷ್ಯರೂಪ ಧರಿಸಿದಾಗ ಅದರ ಪರಿಣಾಮ ಹೇಗಿದ್ದೀತೆಂದು ನಿಖರವಾಗಿ ಅಂದಾಜಿಸಬಲ್ಲ ಗುಣ ಹೊಂದಿರುವ ರವಿ ಕಶ್ಯಪ್ ಅವರಿಗೆ ಹೊಸಬರೆಂದರೆ ತುಸು ಹೆಚ್ಚೇ ಪ್ರೀತಿ. ತಾಜಾ ಹರಿವೆಂಬುದು ಅಂಥಾ ಹೊಸಬರಿಂದಲೇ ಹುಟ್ಟಲು ಸಾಧ್ಯ ಎಂಬ ಗಾಢ ನಂಬಿಕೆ ಅದಕ್ಕೆ ಕಾರಣ.
Advertisement
Advertisement
ಸಾರಾಂಶ ಕಥೆಯನ್ನು ಸೂರ್ಯ ವಸಿಷ್ಠ ಮೊದಲು ಹೇಳಿದಾಗಲೇ ರವಿ ಕಶ್ಯಪ್ ಪಾಲಿಗದು ಹಿಡಿಸಿತ್ತಂತೆ. ಆ ಕ್ಷಣವೇ ಅದರ ಭಾವನಾತ್ಮಕ ಸಂಗತಿಗಳಿಗೆ ಕನೆಕ್ಟಾಗಿದ್ದ ರವಿ ತಾವೇ ನಿರ್ಮಾಣ ಮಾಡಲು ಒಪ್ಪಿಕೊಂಡಿದ್ದರಂತೆ. ಆಗ ಅವರಿಗೆ ನಿರ್ಮಾಣದಲ್ಲಿ ಸಾಥ್ ಕೊಟ್ಟವರು ಆರ್.ಕೆ ನಲ್ಲಮ್. ಒಟ್ಟಾರೆ ಕಥಾ ಹಂದರ ಕೇಳಿದ ನಲ್ಲಮ್ ಕೂಡಾ ಚಕಿತಗೊಂಡು ಒಪ್ಪಿಗೆ ಸೂಚಿಸಿದ್ದರು. ರವಿ ಕಶ್ಯಪ್ ಅವರಂತೆಯೇ ಸದಭಿರುಚಿ ಹೊಂದಿರುವ ಆರ್.ಕೆ ನಲ್ಲಮ್ ಕೂಡಾ ಹೊಸಾ ಪ್ರಯತ್ನಗಳಿಗೆ ಬೆನ್ತಟ್ಟಿ ಪ್ರೋತ್ಸಾಹಿಸುವ ಗುಣ ಹೊಂದಿರುವವರು. ಇವರಿಬ್ಬರೂ ಸೇರಿಕೊಂಡು ಯಾವುದಕ್ಕೂ ಒಂದಿನಿತೂ ಕೊರತೆಯಾಗದಂತೆ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಮಾತಿಗೆ ತಕ್ಕುದಾಗಿ ಈ ಸಿನಿಮಾವನ್ನು ಮಾಡಿ ಮುಗಿಸಿರುವ ಸೂರ್ಯ ವಸಿಷ್ಠ ಸಾರಥ್ಯದ ಚಿತ್ರತಂಡದ ಬಗ್ಗೆ ಈ ನಿರ್ಮಾಪಕದ್ವಯರಲ್ಲೊಂದು ಮೆಚ್ಚುಗೆ ಇದೆ.
Advertisement
ರವಿ ಕಶ್ಯಪ್ ಪವನ್ ಕುಮಾರ್ ನಿರ್ದೇಶನದ ಲೂಸಿಯಾ ಚಿತ್ರದ ಮುಖ್ಯ ನಿರ್ಮಾಪಕರುಗಳಲ್ಲಿ ಒಬ್ಬರಾಗಿದ್ದವರು. ಲೂಸಿಯಾ ಮೂಲಕ ಶ್ರುತಿ ಹರಿಹರನ್ ಹಾಗೂ ನೀನಾಸಂ ಸತೀಶ್ ಮುನ್ನೆಲೆಗೆ ಬಂದದ್ದರ ಹಿಂದೆಯೂ ರವಿ ಕಶ್ಯಪ್ ಇದ್ದಾರೆ. ಲೂಸಿಯಾ ಪವನ್ ಕುಮಾರ್ ರವರ ಎರಡನೇ ಚಿತ್ರವಾಗಿದ್ದರೂ ಆ ಸಮಯದಲ್ಲಿ ಅದೊಂದು ಹೊಸ ಪ್ರಯೋಗವೂ, ಪ್ರಯತ್ನವೂ ಆಗಿತ್ತು. ಆದರೂ ಕೂಡಾ ಯಾವುದೇ ಹಿಂಜರಿಕೆಯಿಲ್ಲದೆ ಕೈ ಜೋಡಿಸಿದ್ದರು. ಇದಲ್ಲದೇ ಲೂಸಿಯಾ ಚಿತ್ರವನ್ನು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಸ್ವತಃ ರವಿ ವಿತರಿಸಿದ್ದರು. ಈ ಮೂಲಕ ಕನ್ನಡ ಚಿತ್ರಗಳ ಮಾರುಕಟ್ಟೆ ವಿಸ್ತರಿಸಿ, ಹೊಸಾ ಸಾಧ್ಯತೆಗಳು ತೆರೆದುಕೊಳ್ಳುವಂತೆ ಮಾಡಿದ ಕೀರ್ತಿಯೂ ರವಿ ಕಶ್ಯಪ್ ಅವರಿಗೆ ಸಲ್ಲುತ್ತದೆ. ಹೊಸಬರು ತಮ್ಮ ಬಳಿ ಬಂದರೆ, ಅವರೊಳಗೆ ತಾಜಾತನ ಹೊಂದಿರೋ ಪ್ರಯೋಗಾತ್ಮಕ ಗುಣದ ಸರಕಿದ್ದರೆ ನಿರ್ಮಾಣಕ್ಕೆ ಮುಂದಾಗುವ ಮನಃಸ್ಥಿತಿ ರವಿ ಕಶ್ಯಪ್ ಅವರದ್ದು. ಅವರಿಗೆ ಸರಿಯಾದ ಜೋಡಿಯಂತೆ ಈಗೊಂದಷ್ಟು ಕಾಲದಿಂದ ಸಾಥ್ ಕೊಡುತ್ತಿರುವವರು ಆರ್.ಕೆ ನಲ್ಲಮ್. ರವಿ ಕಶ್ಯಪ್ ಈ ಹಿಂದೆ ಆಕಾಶ್ ಶ್ರೀವತ್ಸ ನಿರ್ದೇಶನದ ಬದ್ಮಾಶ್ ಎಂಬ ಚಿತ್ರವನ್ನು ನಿರ್ಮಾಣ ಮಾಡಿದ್ದರು. ಆ ಕಾಲಕ್ಕೆ ಆಕಾಶ್ ಹೊಸಾ ಹುಡುಗ. ಡಾಲಿ ಧನಂಜಯ್ ಕೂಡಾ ಹೆಚ್ಚೂಕಮ್ಮಿ ಹೊಸಬರೆ. ಆದರೂ ಅವರ ಮೇಲೆ ನಂಬಿಕೆಯಿಟ್ಟು ಹಣ ಹೂಡಿದ್ದರು. ಈ ಇಬ್ಬರು ಪ್ರತಿಭೆಗಳು ಬೆಳಕಿಗೆ ಬರಲು ಪ್ರೋತ್ಸಾಹ ನೀಡಿದ್ದರು. ಇದೀಗ ಆಕಾಶ್ ಶ್ರೀವತ್ಸ ರಮೇಶ್ ಅರವಿಂದ್ ನಾಯಕತ್ವದ `ದೈಜಿ’ ಎಂಬ ಚಿತ್ರಕ್ಕೆ ಕೈ ಹಾಕಿದ್ದಾರೆ. ರವಿ ಕಶ್ಯಪ್ ನಿರ್ಮಾಪಕರಾಗಿ ಬೆನ್ನೆಲುಬಾಗಿ ನಿಂತಿದ್ದಾರೆ. ಕೇವಲ ತಮ್ಮ ಸಿನಿಮಾಗಳು ಮಾತ್ರವಲ್ಲದೇ, ಬೇರೆ ನಿರ್ಮಾಪಕರಿಗೂ ಕೂಡಾ ಬೆಂಬಲವಾಗಿ ನಿಲ್ಲುವ ಗುಣವೂ ರವಿ ಕಶ್ಯಪ್ ಅವರಲ್ಲಿದೆ.
ಈಗ್ಗೆ ಹದಿನೈದು ವರ್ಷಗಳಿಂದೀಚೆಗೆ ಅಮೆರಿಕಾದಲ್ಲಿ ಸಿನಿಮಾ ವಿತರಕರಾಗಿ ಕಾರ್ಯ ನಿರ್ವಹಿಸುತ್ತಿರುವ ರವಿ ಕಶ್ಯಪ್ ಪಾಲಿಗೆ ಕ್ರಿಯೇಟಿವ್ ಜಗತ್ತಿನ ಇಂಚಿಂಚೂ ಪರಿಚಿತ. ವಿದೇಶದಲ್ಲಿದ್ದರೂ ಕನ್ನಡ ಸಿನಿಮಾ ರಂಗದ ಮೇಲೆ ದೊಡ್ಡ ಕನಸಿಟ್ಟುಕೊಂಡಿರುವ ರವಿ ಕಶ್ಯಪ್ ಅವರಿಗೆ ಆರ್.ಕೆ ನಲ್ಲಮ್ ಕೂಡಾ ಜೊತೆಯಾಗಿ ಸಾಗುತ್ತಿದ್ದಾರೆ. ಜಾಲಿ ಹಿಟ್ಸ್ ಎಂಬ ಸಂಸ್ಥೆಯ ಕಡೆಯಿಂದ ಯು ಟರ್ನ್, ಅನೂಪ್ ಭಂಡಾರಿ ನಿರ್ದೇಶನದ ರಂಗಿತರಂಗ, ಕಿರಿಕ್ ಪಾರ್ಟಿ, ಪುನೀತ್ ರಾಜ್ ಕುಮಾರ್ ಅಭಿನಯಿಸಿದ್ದ ರಾಜಕುಮಾರ, ರಾಜ್ ಬಿ ಶೆಟ್ಟಿ ನಿರ್ದೇಶನದ ಒಂದು ಮೊಟ್ಟೆಯ ಕಥೆ ಮುಂತಾದ ಅನೇಕ ಚಿತ್ರಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿತರಿಸಿ ಸೈ ಅನ್ನಿಸಿಕೊಂಡಿದ್ದಾರೆ. ಆರಂಭದಲ್ಲಿ ಸಾರಾಂಶ ಕಥೆ ಕೇಳಿದಾಗ ಅಂದುಕೊಂಡದ್ದಕ್ಕಿಂತ ಅಚ್ಚುಕಟ್ಟಾಗಿ ಒಂದಿಡೀ ಸಿನಿಮಾ ಮೂಡಿ ಬಂದಿದೆ ಎಂಬ ತೃಪ್ತಿ ರವಿ ಕಶ್ಯಪ್ ಮತ್ತು ಆರ್.ಕೆ ನಲ್ಲಮ್ ಅವರಲ್ಲಿದೆ. ಪ್ರೇಕ್ಷಕರು ಕೊಂಚ ಪ್ರೀತಿ ತೋರಿಸಿದರೆ, ಸಾರಾಂಶದ ಪ್ರಭೆ ದೊಡ್ಡ ಮಟ್ಟಕ್ಕೆ ತಲುಪಿಕೊಳ್ಳಲಿದೆ ಎಂಬ ನಂಬಿಕೆಯೂ ಅವರಲ್ಲಿದೆ.
ಸಾರಾಂಶದ್ದು ಎಲ್ಲರಿಗೂ ಇಷ್ಟವಾಗಬಲ್ಲ ಕಥೆ. ಅದು ಎಲ್ಲ ವರ್ಗದ ಪ್ರೇಕ್ಷಕರನ್ನೂ ಪ್ರಭಾವಿಸಲಿದೆ ಎಂಬ ನಿರೀಕ್ಷೆಯೂ ರವಿ ಕಶ್ಯಪ್ ಅವರಲ್ಲಿದೆ. ಇನ್ನುಳಿದಂತೆ, ಸಂಗೀತ, ತಾಂತ್ರಿಕತೆ ಸೇರಿದಂತೆ ಎಲ್ಲ ವಿಭಾಗಗಳಲ್ಲಿಯೂ ಸಾರಾಂಶ ಕೊರತೆಯಿಲ್ಲದಂತೆ ರೂಪುಗೊಂಡಿದೆ. ಅದು ಮಾತ್ರವಲ್ಲದೇ, ನಟನೆಯ ವಿಚಾರದಲ್ಲಿಯೂ ಕೂಡಾ ನಿರ್ಮಾಪಕರಲ್ಲೊಂದು ಬೆರಗಿದೆ. ಸೂರ್ಯ ವಸಿಷ್ಠ ನಿರ್ದೇಶಕರಾಗಿ ಮಾತ್ರವಲ್ಲದೆ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಅವರೂ ಸೇರಿದಂತೆ ಶ್ರುತಿ ಹರಿಹರನ್, ದೀಪಕ್ ಸುಬ್ರಮಣ್ಯ, ಶ್ವೇತಾ ಗುಪ್ತ ಮುಂತಾದ ಕಲಾವಿದರೆಲ್ಲ ಅತ್ಯಂತ ಸಹಜವಾಗಿ ನಟಿಸಿದ್ದಾರೆಂಬ ತುಂಬು ಮೆಚ್ಚುಗೆ ನಿರ್ಮಾಪಕರದ್ದು. ಇಂಥಾ ಅನಿಸಿಕೆಗಳೆಲ್ಲವು ಪ್ರೇಕ್ಷಕರನ್ನು ದಾಟಿಕೊಳ್ಳುವ ದಿನ ಹತ್ತಿರಾಗುತ್ತಿದೆ.