ಕಟ್ಟಿಗೆ ತರಲು ಹೋಗಿ ನಾಪತ್ತೆಯಾಗಿದ್ದ ವೃದ್ಧ 6 ದಿನಗಳ ಬಳಿಕ ಕಾಡಿನಲ್ಲಿ ಪತ್ತೆ!

Public TV
2 Min Read
MANGALURU BELTHANGADY 4

– 82 ವರ್ಷದ ಹಿರಿ ಜೀವ ಬದುಕುಳಿದಿದ್ದೇ ಪಾವಡ
– ಕಾಪಾಡಿದ್ದೇ ಊರಿನ ದೈವಗಳೆಂಬ ನಂಬಿಕೆ

ಮಂಗಳೂರು: ಕಟ್ಟಿಗೆ ತರಲು ಕಾಡಿಗೆ ತೆರಳಿದ್ದ 82 ವರ್ಷದ ವಯೋವೃದ್ಧ ಇದ್ದಕ್ಕಿದಂತೆ ಕಣ್ಮರೆಯಾಗಿದ್ದರು. 6 ದಿನಗಳ ಸತತ ಹುಡುಕಾಟದ ಬಳಿಕ ವೃದ್ಧ ಪತ್ತೆಯಾದ ರೋಚಕ ಘಟನೆ ನಡೆದಿದೆ. ಆ ಹಿರಿಯ ಜೀವ ಆ ಭಯಾನಕ ಕಾಡಲ್ಲಿ ಬದುಕುಳಿದಿದ್ದೇ ಪವಾಡ. ಕೇವಲ ನೀರು ಕುಡಿದೇ ಇದ್ದ ಅವರನ್ನ ಕಾಪಾಡಿದ್ದೇ ಊರಿನ ದೈವಗಳು ಎಂಬ ನಂಬಿಕೆ ಈಗ ಮನೆ ಮಾತಾಗಿದೆ.

MANGALURU BELTHANGADY 3

ಹೌದು. ಕಟ್ಟಿಗೆ ತರಲೆಂದು ಮನೆ ಸಮೀಪದ ಕಾಡಿಗೆ ಹೋಗಿದ್ದ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ (Belthangady, Dakshina Kannada) ತಾಲೂಕಿನ ಶಿಬಾಜೆ ಗ್ರಾಮದ ಐಂಗುಡ ನಿವಾಸಿ 82 ವರ್ಷದ ವಾಸು ರಾಣ್ಯ 6 ದಿನಗಳ ಬಳಿಕ ಕಾಡಿನಲ್ಲಿ ಪತ್ತೆಯಾದ ಘಟನೆ ನಡೆದಿದೆ. ಶಿಬಾಜೆ ಗ್ರಾಮದ ವಾಸು ರಾಣ್ಯ ಎಂಬವರು ಮೇ 21 ರಂದು ಬೆಳಗ್ಗೆ ಕೈಯಲ್ಲಿ ಕತ್ತಿ ಹಿಡಿದು ಮನೆ ಸಮೀಪವಿರುವ ಗುಡ್ಡಕ್ಕೆ ತೆರಳಿದ್ದರು. ಕಟ್ಟಿಗೆ ತರಲು ಹೋಗಿರಬಹುದು ಎಂದು ಅವರ ಮನೆಯವರು ಸುಮ್ಮನಿದ್ದರು. ಮಧ್ಯಾಹ್ನದವರೆಗೂ ವಾಸು ರಾಣ್ಯ ಅವರು ಮನೆಗೆ ಬರದೇ ಇದ್ದಾಗ ಸ್ಥಳೀಯರ ಜೊತೆ ಹುಡುಕಾಟ ನಡೆಸಲಾಗಿತ್ತು. ಸುಮಾರು 5 ದಿನಗಳ ಕಾಲ ಸುತ್ತಮುತ್ತ ಹುಡುಕಿದರೂ ವಾಸು ರಾಣ್ಯ ಪತ್ತೆಯಾಗಿರಲಿಲ್ಲ. ತನ್ನನ್ನು ಯಾರೋ ಬಾ ಬಾ ಎಂದು ಕರೆದಂತಾಯಿತು. ಹಾಗಾಗಿ ಧ್ವನಿಯ ಹಿಂದೆ ನಾನು ಹೋದೆ. ಆಹಾರವನ್ನೇನೂ ತಾನು ತೆಗೆದುಕೊಳ್ಳದೆ ಕೇವಲ ನೀರು ಮಾತ್ರ ಕುಡಿಯುತ್ತಿದ್ದೆ ಎಂದು ಕನವರಿಕೆಯಂತೆ ಹೇಳುತ್ತಿದ್ದರು. ವಾಸು ರಾಣ್ಯ ನಾಪತ್ತೆಯಾದ ದಿನ ಈ ಪರಿಸರದಲ್ಲಿ ವಿಪರೀತ ಗುಡುಗು, ಮಿಂಚು ಮಳೆ ಬಂದಿದ್ದರೂ ಆ ಸಮಯದಲ್ಲಿ ಒಬ್ಬಂಟಿಯಾಗಿ ಕಾಡಲ್ಲೇ ಇದ್ದರಂತೆ. ಇದನ್ನೂ ಓದಿ: ವರ್ತೆ ಪಂಜುರ್ಲಿ ಅಭಯ ನಿಜವಾಯ್ತು- ಕೊಲೆ ಆರೋಪಿ ನ್ಯಾಯಾಲಯಕ್ಕೆ ಶರಣು!

ಮೇ 26 ರಂದು ಬೆಳಗ್ಗೆ ಮನೆಯವರು ಆಡು ಮೇಯಿಸಲೆಂದು ಮನೆ ಸಮೀಪವಿರುವ ಗುಡ್ಡೆಗೆ ತೆರಳಿದ್ದಾಗ ಕೂ…ಕೂ…ಎಂಬ ಶಬ್ದ ಕೇಳಿ ಬಂದಿದೆ. ಸದ್ದಿನ ಜಾಡು ಹಿಡಿದು ಸ್ಥಳೀಯರು ಮತ್ತು ಶ್ರೀಕ್ಷೇತ್ರ ಧರ್ಮಸ್ಥಳದ ಶೌರ್ಯ ವಿಪತ್ತು ತಂಡದವರು ಹುಡುಕಾಟ ನಡೆಸಿದಾಗ ಮನೆಯ ಮೇಲಿನ ಭಾಗದ ಬಂಡಿಹೊಳೆ ಕಾಡಿನ ಸುಮಾರು 3 ಕಿ.ಮೀ. ದೂರದಲ್ಲಿ ವಾಸು ರಾಣ್ಯ ಪತ್ತೆಯಾಗಿದ್ದಾರೆ. ಬಳಿಕ ಅವರನ್ನು ಕೊಕ್ಕಡ ಸಮುದಾಯ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಲಾಗಿದ್ದು, ಸದ್ಯ ವಾಸು ರಾಣ್ಯ ಅವರು ಆರೋಗ್ಯವಾಗಿದ್ದಾರೆ. ವಾಸು ರಾಣ್ಯ ಅವರನ್ನು ಪತ್ತೆ ಹಚ್ಚುವ ಕಾರ್ಯಾಚರಣೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಶೌರ್ಯ ವಿಪತ್ತು ನಿರ್ವಹಣಾ ತಂಡದ ಕೆಲಸ ಶ್ಲಾಘನೀಯ.

MANGALURU BELTHANGADY 1

ವಾಸು ಜೀವಂತವಾಗಿ ಇರುವ ಬಗ್ಗೆ ಭರವಸೆಯನ್ನೆ ಕಳೆದುಕೊಂಡಿದ್ದ ಊರ ಜನರಲ್ಲಿ ಈಗ ಸಂಭ್ರಮ ಮನೆಮಾಡಿದೆ. ವಾಸು ಅವರನ್ನು ಆ 6 ದಿನ ರಕ್ಷಣೆ ನೀಡಿದ್ದೇ ಆ ಊರಿನ ದೈವಗಳು ಎಂಬ ನಂಬಿಕೆ ಊರಿನವರದ್ದು. ಬದುಕುಳಿಯಲು ಶಕ್ತಿ ನೀಡಿದ್ದೇ ವಾಸು ಕುಟುಂಬಸ್ಥರು ನಂಬಿ ಸೇವೆ ಸಲ್ಲಿಸುತ್ತಿರುವ ದೈವಗಳು ಎಂಬ ನಂಬಿಕೆ ಈಗ ಮನೆಮಾತಾಗಿದೆ. ಅದು ಏನೇ ಇರಲಿ 82 ವರ್ಷದ ವಾಸುರಾಣ್ಯ ದಟ್ಟಕಾಡಿನ ನಡುವೆ 6 ದಿನಗಳ ಕಾಲ ಬದುಕುಳಿದಿದ್ದೇ ಒಂದು ಪವಾಡ.

Share This Article