– ಈಕೆ ಹಿಡಿಯುವ ಹಾವು ನೋಡಿದ್ರೆ ಮೈ ಝಲ್ ಎನ್ನುತ್ತೆ
ಕಾರವಾರ: ಹಾವು ಎಂದ್ರೆ ಎಂಥವರಿಗೂ ಭಯ. ಆದರೆ ಇಲ್ಲೊಬ್ಬ ಪುಟ್ಟ ಬಾಲಕಿಗೆ ಹಾವು ಅಂದ್ರೆ ಪಂಚಪ್ರಾಣ. ಕಾರ್ಕೋಟಕ ವಿಷದ ಹಾವನ್ನು ಸಹ ಮುದ್ದಿಸುವ ಈ ಬಾಲಕಿ ಹಾವುಗಳ ರಕ್ಷಣೆಗೆ ನಿಂತಿದ್ದಾಳೆ. ಅಷ್ಟಕ್ಕೂ ಈ ಬಾಲಕಿ ಯಾರು ಅವಳ ಕೆಲಸವೇನು ಎಂದು ಕೇಳಿದ್ರೆ ಎಲ್ಲರೂ ಬೆಚ್ಚಿ ಬೀಳೋದು ಗ್ಯಾರಂಟಿ.
ಯಾರದ್ದೇ ಮನೆಗೆ ಹಾವು ನುಗ್ಗಲಿ, ಇಲ್ಲವೇ ಹಾವೇ ತೊಂದರೆಯಲ್ಲಿರಲಿ ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಆವರ್ಸಾ ಗ್ರಾಮದ 12 ವರ್ಷದ ಪುಟ್ಟ ಬಾಲಕಿ ಭೂಮಿಕಾ, ಕೈಯಲ್ಲಿ ಸ್ಟಿಕ್ ಹಿಡಿದು ವಿಷ ಸರ್ಪವನ್ನು ತನ್ನ ಕೈಯಲ್ಲಿ ಹಿಡಿದು ರಕ್ಷಿಸುತ್ತಾಳೆ.
Advertisement
Advertisement
ಈ ಊರಿನ ಸುತ್ತಮುತ್ತ ಯಾರ ಮನೆಗೆ ಹಾವು ಬರಲಿ ಮೊದಲು ಫೋನು ಹೋಗುವುದು ಇವರ ಮನೆಗೆ. ತಂದೆ ಮಹೇಶ್ ನಾಯ್ಕ ಉರುಗತಜ್ಞರಾಗಿದ್ದು, ಹಾವಿಗಳ ರಕ್ಷಣೆ ಮಾಡುತ್ತಾರೆ. ತಂದೆಯನ್ನು ನೋಡಿ ಹಾವುಗಳನ್ನು ಹಿಡಿಯುವುದನ್ನು ಕಲಿತ ಈ ಪುಟ್ಟ ಬಾಲಕಿ ಈಗ ತಮ್ಮ ಊರಿನ ಸುತ್ತಮುತ್ತ ಯಾವುದೇ ಹಾವು ಬರಲಿ ಅವುಗಳನ್ನು ರಕ್ಷಿಸಿ ಕಾಡಿಗೆ ಬಿಡುವ ಕೆಲಸ ಮಾಡುತ್ತಿದ್ದಾಳೆ. ಹಾವುಗಳ ಜೊತೆ ಪ್ರೀತಿ ಬೆಳಸಿಕೊಂಡಿರುವ ಈ ಪುಟ್ಟ ಬಾಲಕಿ 50 ಕ್ಕೂ ಹೆಚ್ಚು ವಿಷಸರ್ಪ, ಹೆಬ್ಬಾವುಗಳನ್ನು ರಕ್ಷಣೆ ಮಾಡಿ ತಾನೇ ಸ್ವತಃ ಕಾಡಿಗೆ ಬಿಟ್ಟು ಬಂದಿದ್ದಾಳೆ.
Advertisement
ಮನೆಯಲ್ಲಿ ನೀನು ಹುಡಗಿ ಹಾಗೆಲ್ಲ ಹಾವು ಹಿಡಿಯಬಾರದು ಎಂದು ಈಕೆಗೆ ತಿಳಿಹೇಳಿ ವಿಷ ಸರ್ಪಗಳನ್ನು ಹಿಡಿಯಬೇಡ ಎನ್ನುತ್ತಾರೆ. ಆದರೂ ಈಕೆ ಮನೆಗೆ ನುಗ್ಗಿ ಬರುವ ಹಾವುಗಳನ್ನು ತಾನೇ ಹಿಡಿದು ರಕ್ಷಣೆ ಮಾಡಿ ಕಾಡಿಗೆ ಬಿಟ್ಟುಬರುತ್ತಾಳೆ. ಹಾವು ಅಂದರೆ ನನಗೆ ಇಷ್ಟ. ಅಪ್ಪ ಹಾವನ್ನು ಹಿಡಿದು ರಕ್ಷಣೆ ಮಾಡುವುದನ್ನು ನೋಡಿ ಹಾವು ಹಿಡಿಯುವುದನ್ನು ಕಲಿತಿದ್ದೇನೆ. ಎಲ್ಲಾತರದ ಹಾವು ಹಿಡಿಯುತ್ತೇನೆ ಎಂದು ಭೂಮಿಕ ಹೇಳಿದ್ದಾಳೆ.
Advertisement
ಆವರ್ಸಾದ ಸುತ್ತಮುತ್ತಲೂ ದಟ್ಟ ಕಾಡುಗಳಿವೆ. ಹೀಗಾಗಿ ಈ ಕಾಡಿನಿಂದ ಆಹಾರ ಅರಸಿ ನಾಡಿಗೆ ವಿಷಸರ್ಪಗಳು ಲಗ್ಗೆ ಇಡುತ್ತವೆ. ಇಂತಹ ಸಂದರ್ಭದಲ್ಲಿ ಜನರು ಭಯ ಪಟ್ಟು ಹಾವನ್ನು ಕೊಲ್ಲುತಿದ್ದರು. ಆದರೆ ಈಗ ಈ ಬಾಲಕಿ ಹಾವನ್ನು ಹಿಡಿಯುವುದನ್ನು ನೋಡಿ ಜನರಲ್ಲೂ ಭಯ ಮಾಯವಾಗಿದೆ. ತಮ್ಮ ಮನೆಗಳಿಗೆ ಹಾವು ಬಂದರೆ ಸುತ್ತಮುತ್ತಲ ಊರಿನ ಜನ ಈ ಬಾಲಕಿಗೆ ಫೋನ್ ಮಾಡುತ್ತಾರೆ. ಕೈಯಲ್ಲಿ ಸ್ಟಿಕ್ ಹಾಗೂ ಚೀಲ ಹಿಡಿದು ಹೊರಡುವ ಈ ಪೋರಿ ಎಂಥ ಗಟ ಸರ್ಪವನ್ನೂ ಅಳಕಿಲ್ಲದೇ ಕ್ಷಣಮಾತ್ರದಲ್ಲಿ ಹಿಡಿದು ಹಾವುಗಳನ್ನು ಕಾಡಿಗೆ ಬಿಟ್ಟು ಬರುತ್ತಾಳೆ. ಜೊತೆಗೆ ಜನರಿಗೂ ಹಾವನ್ನು ಕೊಲ್ಲಬೇಡಿ ಎಂದು ತಿಳಿಹೇಳಿ ಬರುವುದು ಈಕೆಯ ಹಾವಿನ ಮೇಲಿರುವ ಪ್ರೀತಿಯನ್ನು ತೋರಿಸುತ್ತದೆ. ಹೀಗಾಗಿ ನಮಗೂ ಖುಷಿ ಆಗುತ್ತೆ ನಾವೂ ಏನೇ ಇದ್ರು ಈ ಹುಡುಗಿಯನ್ನು ಕರೆಯುತ್ತೇವೆ ಎಂದು ಸ್ಥಳೀಯರು ಹೇಳುತ್ತಾರೆ.