ಶ್ರದ್ಧಾ, ಭಕ್ತಿಯಿಂದ ನಡೆದ ಐತಿಹಾಸಿಕ ಬೆಂಗಳೂರು ಕರಗ ಶಕ್ತೋತ್ಸವ

Public TV
2 Min Read
Bengaluru Karaga

ಬೆಂಗಳೂರು: ಐತಿಹಾಸಿಕ, ಸಾಂಸ್ಕೃತಿಕ ಹಾಗೂ ಪರಂಪರೆಯ ಹೆಗ್ಗುರುತು ಸಾರುವ ಬೆಂಗಳೂರು ಕರಗ (Bengaluru Karaga) ಶಕ್ತೋತ್ಸವ ಶನಿವಾರ ಮಧ್ಯರಾತ್ರಿ ಶ್ರದ್ಧಾಭಕ್ತಿಯಿಂದ ನೆರವೇರಿತು. ಕರಗದ ಪ್ರಸಿದ್ಧ ದ್ರೌಪದಿ ದೇವಿ ಕರಗ ಶಕ್ತ್ಯೋತ್ಸವವು ಚೈತ್ರ ಪೌರ್ಣಿಮೆಯ ಬೆಳದಿಂಗಳಲ್ಲಿ ನಡೆಯಿತು.

ಮಲ್ಲಿಗೆ ಕಂಪು ಸೂಸುತ್ತ ಹೊರಟ ಕರಗಕ್ಕೆ ಗೋವಿಂದ.. ಗೋವಿಂದ… ನಾಮಸ್ಮರಣೆಯೊಂದಿಗೆ ಮಧ್ಯರಾತ್ರಿ ಸುಮಾರು 12.30 ರಿಂದ 1ರ ಸುಮಾರಿಗೆ ಹೊರಟ ಕರಗ ಮೆರವಣಿಗೆಯ (Karaga Procession) ದರ್ಶನ ಪಡೆದು ಲಕ್ಷಾಂತರ ಭಕ್ತರು ಪುನೀತರಾದರು. ಅರ್ಚಕರಾದ ಎ.ಜ್ಞಾನೇಂದ್ರ ಅವರು 15ನೇ ಬಾರಿಗೆ ಕರಗ ಹೊತ್ತು ಹೆಜ್ಜೆ ಹಾಕಿದರು. ಮೆರವಣಿಗೆಯುದ್ದಕ್ಕೂ ವೀರಕುಮಾರರು ಸಾಗಿದರು.

Karaga CM Siddaramaiah

ಉತ್ಸವದ ಹಿನ್ನೆಲೆಯಲ್ಲಿ ಮುಂಜಾನೆಯಿಂದಲೇ ಧರ್ಮರಾಯಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ, ಅಭಿಷೇಕ, ಮಹಾಮಂಗಳಾರತಿ ನಡೆಯಿತು. ಅರ್ಚಕ ಜ್ಞಾನೇಂದ್ರ ಅವರು ಅರಿಶಿನ ಬಣ್ಣದ ಸೀರೆ, ಬಳೆ ತೊಟ್ಟು ಕಬ್ಬನ್‌ ಪಾರ್ಕ್‌ನ ಕರಗದ ಕುಂಟೆಯಲ್ಲಿ ದ್ರೌಪದಿ ದೇವಿಗೆ ಗಂಗೆ ಪೂಜೆ ಸಲ್ಲಿಸಿದರು. ಅಲ್ಲಿಂದ ಹಸಿಕರಗವನ್ನು ಮಂಟಪಕ್ಕೆ ಹೊತ್ತು ತಂದು ಧಾರ್ಮಿಕ ಕಾರ್ಯಗಳನ್ನು ನೆರವೇರಿಸಿದರು. ಇದನ್ನೂ ಓದಿ: ಜಾತಿಗಣತಿ ಅಂಕಿಅಂಶ ಬಹಿರಂಗ – ಕರ್ನಾಟಕದಲ್ಲಿ ಯಾವ ಜಾತಿ ಜನಸಂಖ್ಯೆ ಎಷ್ಟಿದೆ?

Bengaluru Karaga 3

ಮುಂಜಾನೆಯಿಂದಲೇ ಬಣ್ಣ ಬಣ್ಣದ ವಸ್ತುಗಳಿಂದ 40 ಅಡಿಯ ತೇರನ್ನು ಸಿಂಗರಿಸುವ ಕಾರ್ಯ ನಡೆಯಿತು. ತೇರಿನ ಮೇಲೆ, ಕಲಶದ ಕೆಳಗೆ ಅರ್ಜುನ-ದ್ರೌಪದಿಯರ ಮೂರ್ತಿಗಳೊಂದಿಗೆ ವೀರ ಹನುಮಂತನ ಮೂರ್ತಿಯನ್ನೂ ವಿಶೇಷವಾಗಿ ಅಲಂಕರಿಸಲಾಗಿತ್ತು. ಉತ್ಸವ ಕರ್ತರು ಮತ್ತು ವೀರಕುಮಾರರು ಪೂಜಾರಿಗಳೊಂದಿಗೆ ಸಾಗುವ ಮೆರವಣಿಗೆಯಲ್ಲಿ ಛತ್ರಿ, ಚಾಮರ, ಧ್ವಜದ ಜತೆಗೆ ನಾದಸ್ವರ ಮೊಳಗಿತು. ವೀರಕುಮಾರರು ಹೊಂಗೆ ಹೂವಿನ ಗೊಂಚಲು ಕಿತ್ತುತಂದು ದೇವಸ್ಥಾನದಲ್ಲಿ ಮಂಟಪವನ್ನು ನಿರ್ಮಿಸಿದರು. ಬಳಿಕ ಅರ್ಜುನ-ದ್ರೌಪದಿಯರ ವಿವಾಹ ಮಹೋತ್ಸವ ಕಾರ್ಯ ನೆರವೇರಿತು. ಇದನ್ನೂ ಓದಿ: ಕರಗ ಉತ್ಸವದಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿ

Bengaluru Karaga 2

ದರ್ಗಾಕ್ಕೆ ಭೇಟಿ:
ಸರ್ವ ಧರ್ಮಗಳ ಸಂಕೇತವಾದ ಕರಗ ಬೆಂಗಳೂರಿನ ಕಾಟನ್‌ಪೇಟೆಯ ಹಜರತ್‌ ತವಾಕಲ್‌ ಮಸ್ತಾನ್‌ ದರ್ಗಾದಲ್ಲೂ ಪ್ರದಕ್ಷಿಣೆ ಹಾಕಿತು. ದರ್ಗಾದ ಅಂಗಳದಲ್ಲಿ 3 ಸುತ್ತು ಪ್ರದಕ್ಷಿಣೆ ಮಾಡಿ ದೃಷ್ಟಿ ತೆಗೆದು, ದರ್ಗಾದಲ್ಲೇ ಪೂಜೆ ನೆರವೇರಿಸಲಾಯಿತು. ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹ ಕರಗ ಮಹೋತ್ಸವದಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು. ಇದನ್ನೂ ಓದಿ: ಸಿಎಂ ಕುರ್ಚಿ ಉಳಿಸಿಕೊಳ್ಳಲು ಜಾತಿಗಣತಿ ಡ್ರಾಮಾ: ಹೆಚ್.ಡಿ.ಕುಮಾರಸ್ವಾಮಿ ಕಿಡಿ

Bengaluru Karaga 4

ಕರಗ ಮೆರವಣಿಗೆ
ಇನ್ನೂ ಧರ್ಮರಾಯಸ್ವಾಮಿ ದೇವಸ್ಥಾನದಿಂದ ಹೊರಬಂದ ಕರಗ, ಗಣಪತಿ ಮತ್ತು ಮುತ್ಯಾಲಮ್ಮ ದೇವಾಲಯ, ಹಲಸೂರು ಪೇಟೆಯ ಆಂಜನೇಯಸ್ವಾಮಿ, ರಾಮ ದೇವಾಲಯದಲ್ಲಿ ಪೂಜೆ ಸ್ವೀಕರಿಸಿ, ನಗರ್ತಪೇಟೆ, ಸಿದ್ದಣ್ಣ ಗಲ್ಲಿ, ಕಬ್ಬನ್‌ಪೇಟೆ, ಗಾಣಿಗರ ಪೇಟೆ, ದೊಡ್ಡ ಪೇಟೆಯಿಂದ ಕೆ.ಆರ್‌.ಮಾರುಕಟ್ಟೆ ತಲುಪಿತು. ಅಕ್ಕಿಪೇಟೆ ರಸ್ತೆಯ ತವಕ್ಕಲ್‌ ಮಸ್ತಾನ್‌ ಸಾಬ್‌ ದರ್ಗಾಕ್ಕೆ ಭೇಟಿ ನೀಡಿ, ಬಳೇಪೇಟೆ, ಅಣ್ಣಮ್ಮ ದೇವಾಲಯ, ಕಿಲಾರಿ ರಸ್ತೆ, ಅವೆನ್ಯೂ ರಸ್ತೆ, ಕುಂಬಾರಪೇಟೆ, ತಿಗಳರ ಪೇಟೆಯಲ್ಲಿ ಸಾಗಿತು. ಭಾನುವಾರ ಮುಂಜಾನೆ ಸೂರ್ಯೋದಯಕ್ಕೆ ಮುನ್ನ ದೇವಸ್ಥಾನಕ್ಕೆ ಹಿಂದಿರುಗಿತು. ಕರಗ ಸಾಗುತ್ತಿದ್ದ ಮಾರ್ಗದುದ್ದಕ್ಕೂ ಕಟ್ಟಡಗಳ ಮೇಲೆ ನಿಂತ ಜನ ದರ್ಶನ ಪಡೆಯಲು ಕಾತರರಾಗಿದ್ದರು.

Share This Article