ಬೆಂಗಳೂರು: ಶಿವಮೊಗ್ಗದ ಹರ್ಷ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳ(ಎನ್‍ಐಎ) ತನಿಖೆಗೆ ಸರ್ಕಾರ ವಹಿಸಿದೆ.
ಕೇಂದ್ರ ಸಚಿವ ಶೋಭಾ ಕರಂದ್ಲಾಜೆ ಕೆಲ ದಿನಗಳ ಹಿಂದೆಯೇ ಎನ್‍ಐಎಗೆ ಪ್ರಕರಣ ಹಸ್ತಾಂತರವಾಗಲಿದೆ ಎಂದು ತಿಳಿಸಿದ್ದರು. ಈಗಾಗಲೇ ಎನ್‍ಐಎ ಈ ಪ್ರಕರಣದ ಕುರಿತು ಎಫ್‍ಐಆರ್ ದಾಖಲಿಸಿಕೊಂಡಿದೆ.
ಫೆಬ್ರವರಿ 20 ರಂದು ಶಿವಮೊಗ್ಗದ ಸೀಗೆಹಟ್ಟಿಯಲ್ಲಿ ನಡೆದಿದ್ದ ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 10 ಮಂದಿ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ. ಶೀಘ್ರದಲ್ಲಿಯೇ ಶಿವಮೊಗ್ಗಕ್ಕೆ ಎನ್‍ಐಎ ಅಧಿಕಾರಿಗಳು ಆಗಮಿಸಲಿದ್ದಾರೆ. ಇದನ್ನೂ ಓದಿ: ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ್ದ ಮುಸ್ಕಾನ್ ಸೆಮಿಸ್ಟರ್ ಪರೀಕ್ಷೆಗೆ ಗೈರು
ಇಷ್ಟು ದಿನ ಬಂಧಿತ ಆರೋಪಿಗಳನ್ನು ಶಿವಮೊಗ್ಗದ ಕೇಂದ್ರ ಕಾರಾಗೃಹದಲ್ಲಿ ಪ್ರತ್ಯೇಕ ಸೆಲ್‍ನಲ್ಲಿರಿಸಲಾಗಿತ್ತು. ಇದೀಗ ಕಳೆದ ಮೂರು ದಿನದ ಹಿಂದೆ ನಾಲ್ಕು ಮಂದಿ ಮೈಸೂರು ಕಾರಾಗೃಹಕ್ಕೆ, ನಾಲ್ಕು ಮಂದಿ ಬಳ್ಳಾರಿ ಕಾರಾಗೃಹಕ್ಕೆ ಕಳುಹಿಸಲಾಗಿದೆ. ಉಳಿದ ಇಬ್ಬರು ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿದ್ದು, ಅವರನ್ನು ಶೀಘ್ರದಲ್ಲೇ ಬೆಳಗಾವಿ ಕಾರಾಗೃಹಕ್ಕೆ ಸ್ಥಳಾಂತರಿಸಲಿದ್ದಾರೆ.
ಸಾಧಾರಣವಾಗಿ ಉಗ್ರರ ಕೃತ್ಯ, ಭದ್ರತೆಗೆ ಸಂಬಂಧಿಸಿದ ಪ್ರಕರಣವನ್ನು ಎನ್‍ಐಎ ತನಿಖೆ ನಡೆಸುತ್ತಿದೆ. ಆದರೆ ಹರ್ಷ ಪ್ರಕರಣದ ಹಿಂದೆ ದೇಶ ವಿರೋಧಿ ಶಕ್ತಿಗಳ ಪಾತ್ರವಿದೆ ಎಂದು ಬಿಜೆಪಿ ಆರೋಪಿಸಿತ್ತು. ಆರಂಭದಲ್ಲಿ ಪೊಲೀಸ್ ತನಿಖೆಗೆ ಸರ್ಕಾರ ಆದೇಶಿಸಿತ್ತು. ಈಗ ಪ್ರಕರಣ ಗಂಭೀರವಾದ ಹಿನ್ನೆಲೆಯಲ್ಲಿ ಸರ್ಕಾರ ಎನ್‍ಐಎಗೆ ವಹಿಸಿದೆ. ಇದನ್ನೂ ಓದಿ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ನಟ ಶಿವರಾಜ್ ಕುಮಾರ್ ಭೇಟಿ ಮಾಡಿದ್ದೇಕೆ?