ಯಾದಗಿರಿ: ಮನುಷ್ಯ ಸದೃಢವಾಗಿ ಬದುಕಲು ಮೂರು ಹೊತ್ತು ಚೆನ್ನಾಗಿ ಊಟ ಮಾಡಬೇಕು. ಒಂದು ವೇಳೆ ಒಂದೊತ್ತು ಊಟ ಕಡಿಮೆಯಾದರೂ ಆರೋಗ್ಯದಲ್ಲಿ ಏರುಪೇರಾಗುತ್ತದೆ. ಆದರೆ ಇಲ್ಲೊಬ್ಬಳು ಆಹಾರವಿಲ್ಲದೇ ಕೇವಲ ಬೆಲ್ಲ (Jaggery), ಹಾಲು (Milk) ಹಾಗೂ ನೀರು ಸೇವಿಸಿಯೇ 14 ವರ್ಷದಿಂದ ಬದುಕಿದ್ದಾಳೆ. ಇದೀಗ ಬಾಲಕಿಯ ಆಹಾರ ಪದ್ಧತಿ ವೈದ್ಯಕೀಯ ಲೋಕಕ್ಕೆ ಸವಾಲಾಗಿದೆ.
Advertisement
ಹೌದು. ಯಾದಗಿರಿ (Yadagiri) ಜಿಲ್ಲೆಯ ಸುರಪುರ ಪಟ್ಟಣದ ರಂಗಂಪೇಟ ನಿವಾಸಿ ನಾಗಪ್ಪ-ಅಡಿವೆಮ್ಮ ಎಂಬ ದಂಪತಿಯ 2ನೇ ಮಗಳಾದ ರೇಣುಕಮ್ಮ ಕೇವಲ ಬೆಲ್ಲ ಹಾಗೂ ಹಾಲು ಸೇವಿಸಿ ಬರೊಬ್ಬರಿ 14 ವರ್ಷದಿಂದ ಬದುಕಿದ್ದಾಳೆ. ಈ ರೇಣುಕಮ್ಮ (Renukamma) 14 ವರ್ಷದ ಬಾಲಕಿ. ರಂಗಂಪೇಟೆಯ ಪ್ರಿಯದರ್ಶಿನಿ ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ ಮಾಡ್ತಿದ್ದಾಳೆ.
Advertisement
Advertisement
ರೇಣುಕಮ್ಮ ತಮ್ಮ ಮನೆಯಲ್ಲಿ ತಾನೇ ಅಡುಗೆ ತಯಾರು ಮಾಡ್ತಾಳೆ. ಆದರೆ ತಯಾರಿಸಿದ ಯಾವುದೇ ಅಡುಗೆಯನ್ನು ಊಟ ಮಾತ್ರ ಮಾಡುವುದಿಲ್ಲ. ಮನೆಯಲ್ಲಿ ಅವರ ತಂದೆ-ತಾಯಿ, ಸಹೋದರರು ಹಾಗೂ ತಮ್ಮ ಕ್ಲಾಸಿನ ಸಹಪಾಠಿಗಳು ಎಷ್ಟೇ ಒತ್ತಾಯ ಮಾಡಿದ್ರು ಊಟ ಮಾತ್ರ ಮಾಡೋದಿಲ್ಲ. ಯಾಕಂದ್ರೆ ಈ ಬಾಲಕಿ ರೇಣುಕಮ್ಮನಿಗೆ ಊಟ ಮಾಡಿದ್ರೆ ವಾಂತಿ ಆಗುತ್ತಂತೆ. ಇನ್ನು ಬಾಲಕಿ ಸೇವಿಸುವ ಆಹಾರ ಪದ್ಧತಿ ಬಗ್ಗೆಯೂ ವೈದ್ಯರು ತಪಾಸಣೆ ಮಾಡಿದ್ರು ಸಹ ಅದು ಸಾಧ್ಯವಾಗಿಲ್ಲ. ಈ ಬಾಲಕಿಯ ಆಹಾರ ಪದ್ಧತಿ ಇಡೀ ವೈದ್ಯಲೋಕಕ್ಕೆ ಸವಾಲೆಸೆದಂತಿದೆ.
Advertisement
ಈ 14 ವರ್ಷದ ಬಾಲಕಿ ರೇಣುಕಮ್ಮ ಆಟ-ಪಾಠ ಎಲ್ಲವೂ ಚೆನ್ನಾಗಿಯೇ ಮಾಡ್ತಾಳೆ. ಆದರೆ ಊಟ ಮಾತ್ರ ಮಾಡಲ್ಲ, ಹುಟ್ಟಿದಾಗಿನಿಂದಲೂ ಕೇವಲ ಬೆಲ್ಲ, ಹಾಲು ಮಾತ್ರ ಸೇವಿಸುತ್ತಾ ಬದುಕಿದ್ದಾಳೆ. ಇತ್ತೀಚಿಗೆ ಅವರ ಕ್ಲಾಸ್‍ಮೆಟ್ ಬೆಲ್ಲ ತಿಂತಾಳೆ ಅಂತ ಅಪಹಾಸ್ಯ ಮಾಡ್ತಿದ್ದರಂತೆ. ಅದಕ್ಕಾಗಿ ಮಧ್ಯಾಹ್ನ ಹೊತ್ತು ಬೆಲ್ಲ ತಿನ್ನೋದನ್ನು ರೇಣುಕಾ ಬಿಟ್ಟಿದ್ದಾಳೆ. ಇದರಿಂದಾಗಿ ಈಗ ಒಂದು ದಿನಕ್ಕೆ ಕೇವಲ ಎರಡು ಹೊತ್ತು ಮಾತ್ರ ಬೆಲ್ಲ, ಹಾಲು ಸೇವನೆ ಮಾಡ್ತಿದ್ದಾಳೆ. ಬಾಲಕಿ ರೇಣುಕಮ್ಮನಿಗೆ ಯಾವುದಾದ್ರು ಖಾಯಿಲೆ ಇದೇನಾ ಅಂತ ವೈದ್ಯಕೀಯ ತಪಾಸಣೆ ಮಾಡಿದ್ರೆ ಯಾವುದೇ ಖಾಯಿಲೆ ಪತ್ತೆ ಆಗಿಲ್ವಂತೆ. ಬಾಲಕಿಯ ಆಹಾರ ಪದ್ಧತಿಯಾದ ಬೆಲ್ಲ ಹಾಗೂ ಹಾಲು ಮಾತ್ರ ಸೇವಿಸುವುದರಿಂದ ಎಲ್ಲರನ್ನು ಅಚ್ಚರಿಗೊಳಿಸಿದೆ. ರೇಣುಕಮ್ಮ ಐದು ವರ್ಷದ ಮಗುವಿದ್ದಾಗ ಬೆಲ್ಲ-ಹಾಲು ಈ ಆಹಾರ ಪದ್ಧತಿಯನ್ನು ತಪ್ಪಿಸಲು ಅವರ ಪೋಷಕರು ಕೊಟ್ಟಿರಲಿಲ್ವಂತೆ, ಆಗ ಕೇವಲ ನೀರನ್ನು ಕುಡಿದಿದ್ದಳಂತೆ. ಬಳಿಕ ಹೆತ್ತ ಕರುಳು ಚುರುಕ್ ಅಂದು ಬೆಲ್ಲ-ಹಾಲು ನೀಡಿದ್ರಂತೆ. ನಮ್ಮ ಮಗಳು ಕೇವಲ ಬೆಲ್ಲ-ಹಾಲು ಸೇವನೆ ಮಾಡ್ತಾಳೆ. ಆಕೆ ಹುಟ್ಟಿದಾಗಿನಿಂದಲೂ ಈ ಸಮಸ್ಯೆ ಎದುರಾಗಿದೆ. ಇದು ನಮ್ಮನ್ನು ವಿಚಲಿತಗೊಳಿಸಿದೆ. ಯಾವ ಆಸ್ಪತ್ರೆಯಲ್ಲಿ ತೋರಿಸಬೇಕು ಎಂಬ ಆತಂಕವಾಗಿದೆ. ಜೊತೆಗೆ ನಮ್ಮಲ್ಲಿ ಹಣಕಾಸಿನ ಕೊರತೆಯಾಗಿದೆ ಅಂತ ಅಳಲು ತೋಡಿಕೊಂಡಿದ್ದಾರೆ.
ಒಟ್ನಲ್ಲಿ ಬಾಲಕಿ ರೇಣುಕಮ್ಮ ಹುಟ್ಟಿ 14 ವರ್ಷವಾಯಿತು. ಅಂದಿನಿಂದ ಇಂದಿನವರೆಗೆ ಕೇವಲ ಬೆಲ್ಲ-ಹಾಲಿನಿಂದ ಬದುಕಿದ್ದು ಎಲ್ಲರನ್ನು ನಿಬ್ಬೆರಗಾಗಿಸಿದೆ. ಇನ್ನೊಂದು ಕಡೆ ದಿನದಿಂದ ದಿನಕ್ಕೆ ಬಾಲಕಿಯ ಶಕ್ತಿ ಕುಂದುತ್ತಿದೆ ಎಂದು ಪೋಷಕರು ಕಂಗಾಲಾಗಿದ್ದಾರೆ. ಹೀಗಾಗಿ ಬಡತನದ ಬೇಗುದಿಯಲ್ಲಿ ಬಳಲುತ್ತಿರುವ ಬಾಲಕಿ ರೇಣುಕಮ್ಮನಿಗೆ ಸರ್ಕಾರದ ನೆರವಿಗೆ ಕಾಯುತ್ತಿದ್ದಾರೆ.