ಉಡುಪಿ: ಕರಾವಳಿಯಲ್ಲಿ ಇಂದು ಎಳ್ಳಮಾವಾಸ್ಯೆಯ ಆಚರಣೆ ನಡೆಯುತ್ತಿದೆ. ಉಡುಪಿ ಜಿಲ್ಲೆಯುದ್ದಕ್ಕೂ ಸಾವಿರಾರು ಜನ ಇಂದು ಸಮುದ್ರ ಸ್ನಾನವನ್ನು ಮಾಡಿದ್ದಾರೆ. ಅದರಲ್ಲಿಯೂ ವಿಶೇಷವಾಗಿ ಉಡುಪಿಯ ಅಷ್ಟಮಠಗಳ ನಾಲ್ವರು ಸ್ವಾಮೀಜಿಗಳು ಅರಬ್ಬೀ ಸಮುದ್ರದಲ್ಲಿ ಪವಿತ್ರ ಸಮುದ್ರ ಸ್ನಾನವನ್ನು ಮಾಡಿದರು.
ಎಳ್ಳಮಾವಾಸ್ಯೆಯ ದಿನ ಸಮುದ್ರದಲ್ಲಿ ಸ್ನಾನ ಮಾಡಿದರೆ ಆರೋಗ್ಯಕ್ಕೆ ಒಳಿತು. ಧಾರ್ಮಿಕವಾಗಿ ಕೂಡ ಸಮುದ್ರ ಸ್ನಾನಕ್ಕೆ ಬಹಳ ಮಹತ್ವವಿದೆ. ಈ ಹಿನ್ನೆಲೆ ಪಲಿಮಾರು ಮಠಾಧೀಶ ವಿದ್ಯಾಧೀಶತೀರ್ಥ ಶ್ರೀಪಾದರು, ಕಾಣಿಯೂರು ಮಠಾಧೀಶ ವಿದ್ಯಾವಲ್ಲಭತೀರ್ಥ ಸ್ವಾಮೀಜಿ ಸೋದೆ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಮತ್ತು ಪಲಿಮಾರು ಕಿರಿಯ ವಿದ್ಯಾರಾಜೇಶ್ವರ ತೀರ್ಥ ಸ್ವಾಮೀಜಿ ಕಾಪು ತಾಲೂಕಿನ ಮತ್ತು ಕಡಲಕಿನಾರೆಯಲ್ಲಿ ಸಮುದ್ರ ಸ್ನಾನ ಮಾಡಿದರು. ಇದನ್ನೂ ಓದಿ: ‘ಫಿಟ್ ಇಂಡಿಯಾ’ ಬಗ್ಗೆ ಅರಿವು ಮೂಡಿಸಲು ಜಿಮ್‌ನಲ್ಲಿ ವರ್ಕೌಟ್ ಮಾಡಿದ ಮೋದಿ
ಈ ಸಂದರ್ಭ ತಮ್ಮ ಮಠದ ಭಕ್ತರು ಮತ್ತು ಕಾಪು ಕಟಪಾಡಿ ಭಾಗದ ಗ್ರಾಮಸ್ಥರು ಸ್ಥಳದಲ್ಲಿದ್ದು, ಸ್ವಾಮೀಜಿಗಳ ಜೊತೆ ಸಮುದ್ರದಲ್ಲಿ ಸ್ನಾನಕ್ಕೆ ಭಾಗಿಯಾದರು. ಎಳ್ಳಮಾವಾಸ್ಯೆಯ ದಿನ ಸಮುದ್ರದ ನೀರಲ್ಲಿ ವಿಶೇಷ ಗುಣಗಳು ಇರುತ್ತದೆ ಎಂಬ ನಂಬಿಕೆ ಇದೆ. ಸಮುದ್ರ ಸ್ನಾನದ ನಂತರ ಸ್ವಾಮೀಜಿಗಳು ದೋಣಿಯಲ್ಲಿ ಕೆಲಕಾಲ ವಿಹಾರ ಮಾಡಿದರು.
ಮಟ್ಟು, ಕಾಪು, ಕಡಲ, ಕಿನಾರೆಯ ನಿವಾಸಿಗಳು ಅಷ್ಟಮಠದ ಭಕ್ತರು ಸ್ವಾಮೀಜಿಗಳ ಜೊತೆ ಪುಣ್ಯ ಸ್ನಾನವನ್ನು ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಗಣೇಶ್ ಅಮೀನ್ ಮಟ್ಟು, ಸ್ವಾಮೀಜಿಗಳು ಸಮುದ್ರ ಸ್ನಾನ ಮಾಡುವುದು ಬಹಳ ವಿರಳ. ಎಳ್ಳಮಾವಾಸ್ಯೆ ದಿನ ಈ ಅವಕಾಶ ಸಿಕ್ಕಿದೆ. ದೇವರ ಸ್ವರೂಪದಲ್ಲಿರುವ ಸ್ವಾಮೀಜಿಗಳ ಜೊತೆ ತೀರ್ಥಸ್ನಾನ ಮಾಡುವುದು ಒಂದು ಪುಣ್ಯದ ಕಾರ್ಯ ಎಂದು ಸಂತೋಷ ವ್ಯಕ್ತಪಡಿಸಿದರು. ಇದನ್ನೂ ಓದಿ: ಸಕ್ಕರೆ ಕಾರ್ಖಾನೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಚಾಲಕನ ಮಗ ಇಂದು IPS ಅಧಿಕಾರಿ