ವಿಜಯಪುರ: ಶನಿವಾರದಂದು ಅರೆಬೆಂದ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಯ ತಾಯಿ ಸೇರಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಬೇರೆ ಜಾತಿಯ ಯುವಕನನ್ನ ಮದುವೆಯಾದ ಕಾರಣ ಮರ್ಯಾದಾ ಹತ್ಯೆಯಾಗಿರುವ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಪೊಲೀಸರು ಈ ನಾಲ್ವರನ್ನು ಬಂಧಿಸಿದ್ದಾರೆ.
ಏನಿದು ಪ್ರಕರಣ?: ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಗುಂಡಕನಾಳ ಗ್ರಾಮದ ಹೊರವಲಯದಲ್ಲಿ ಯುವತಿಯೊಬ್ಬಳ ಶವ ಪತ್ತೆಯಾಗಿತ್ತು. ಆಕೆಯನ್ನು ಗುಂಡಕನಾಳ ಗ್ರಾಮದ ಬಾನು ಅತ್ತಾರ(20) ಎಂದು ಗುರುತಿಸಲಾಗಿತ್ತು. ಮೃತ ಯುವತಿ ಗರ್ಭಿಣಿಯಾಗಿದ್ದಳು ಎನ್ನಲಾಗಿದೆ. ಯುವತಿ ಅನ್ಯ ಜಾತಿಯ ಯುವಕಮೊಂದಿಗೆ ಪ್ರೀತಿಸಿ ಮದುವೆಯಾಗಿದ್ದಕ್ಕೆ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಕಳೆದ ಜನವರಿಯಲ್ಲಿ ಪ್ರೇಮಿ ಸಾಯಬಣ್ಣ ಶರಣಪ್ಪ ಕೊಣ್ಣೂರ ಜೊತೆ ಯುವತಿ ನಾಪತ್ತೆಯಾಗಿದ್ದಳು. ನಾಲ್ಕು ದಿನದ ಹಿಂದೆ ಯುವತಿ ಮತ್ತು ಪ್ರಿಯಕರ ಗೋವಾದಿಂದ ಸ್ವಗ್ರಾಮಕ್ಕೆ ಬಂದಿದ್ದರು. ಇಬ್ಬರೂ ಮನೆಯಲ್ಲಿದ್ದಾಗ ಯುವತಿಯ ಸಹೋದರ ಅಕ್ಬರ, ತಾಯಿ ರಂಜಾನಬಿ, ಯುವತಿಯ ಅಕ್ಕ ದಾವಲಬಿ, ಯುವತಿಯ ಅಕ್ಕನ ಗಂಡ ಜಿಲಾನಿ ಸೇರಿ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಬಾನು ಅತ್ತಾರ ಪತಿ ಸಾಯಬಣ್ಣ ಸರಣಪ್ಪ ಕೊಣ್ಣೂರ ಪರಾರಿಯಾಗಿದ್ದಾನೆ. ಯುವತಿಯ ಮೇಲೆ ಹಲ್ಲೆ ಮಾಡಿದ ನಂತರ ಆಕೆ ಪ್ರಜ್ಞೆ ತಪ್ಪಿ ಬಿದ್ದಾಗ ಯುವತಿಯ ಪೋಷಕರು ಶವ ಸುಟ್ಟುಹಾಕಲು ಯತ್ನಿಸಿದ್ದಾರೆ ಎಂದು ಹೇಳಲಾಗಿದೆ.
ಪ್ರಕರಣ ಬೆಳಕಿಗೆ ಬಂದ ನಂತರ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಇದೀಗ ತಾಳಿಕೋಟೆ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ.