ನಟಿ ಕಾರುಣ್ಯ ರಾಮ್ (Karunya Ram) ಜನ ಮೆಚ್ಚುವಂತಹ ಕೆಲಸ ಮಾಡಿದ್ದಾರೆ. ತಮ್ಮ ರಾಜರಾಜೇಶ್ವರಿ ನಗರ (Rajarajeshwari Nagar) ಏರಿಯಾ ರಸ್ತೆಯಲ್ಲಿ ಬಿದ್ದಿದ್ದ ಗುಂಡಿಗಳನ್ನು (Potholes) ಮುಚ್ಚುವ ಮೂಲಕ ಪ್ರಶಂಸೆಗೆ ಕಾರಣರಾಗಿದ್ದಾರೆ. ನಿನ್ನೆ ರಾತ್ರಿ ಹನ್ನೊಂದು ಗಂಟೆಯ ಹೊತ್ತಲ್ಲಿ ತಮ್ಮ ಸ್ನೇಹಿತರು ಮತ್ತು ಸಹೋದರಿಯ ಜೊತೆ ರಸ್ತೆಗಳಿಗೆ ಇಳಿದ ಕಾರುಣ್ಯ ಹತ್ತಕ್ಕೂ ಹೆಚ್ಚು ಗುಂಡಿಗಳನ್ನು ಮುಚ್ಚಿದ್ದಾರೆ. ಅವರ ಈ ಕೆಲಸಕ್ಕೆ ಅನೇಕರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
ಈ ಕುರಿತು ಪಬ್ಲಿಕ್ ಟಿವಿ ಡಿಜಿಟಲ್ ಜೊತೆ ಮಾತನಾಡಿದ ಕಾರುಣ್ಯ, ‘ಎರಡು ಘಟನೆಗಳಿಂದಾಗಿ ನಾನು ರಸ್ತೆಯಲ್ಲಿ ಬಿದ್ದಿದ್ದ ಗುಂಡಿಗಳನ್ನು ಮುಚ್ಚಲು ಹೊರಟೆ. ನನ್ನ ಸ್ನೇಹಿತರೊಬ್ಬರ ತಂದೆ ತಾಯಿ ವಾಹನ ಓಡಿಸುವಾಗ ರಸ್ತೆಗುಂಡಿಗೆ ಬಿದ್ದು ಆಸ್ಪತ್ರೆ ಸೇರಿದರು. ಅದರಲ್ಲಿ ಒಬ್ಬರು ಮೃತರಾದರು. ಅಲ್ಲದೇ, ನನ್ನ ಕಣ್ಣಾರೆ ಹುಡುಗಿಯೊಬ್ಬಳು ರಸ್ತೆ ಗುಂಡಿಯಲ್ಲಿ ಬಿದ್ದದ್ದು ನೋಡಿದೆ. ಹಣಕ್ಕಿಂತಲೂ ಜೀವ ಅಮೂಲ್ಯ. ಈ ರೀತಿಯಲ್ಲಿ ಪ್ರಾಣ ಕಳೆದುಕೊಳ್ಳಬಾರದು ಎನ್ನುವ ಕಾರಣಕ್ಕೆ ಗುಂಡಿ ಮುಚ್ಚಲು ಮುಂದಾದೆ’ ಎನ್ನುತ್ತಾರೆ.
‘ಸರಕಾರ ಅಥವಾ ಜನಪ್ರತಿನಿಧಿಗಳನ್ನು ಬೈಯುತ್ತಾ ಕೂರುವ ಬದಲು, ನಮ್ಮ ಮನೆ, ಏರಿಯಾ ಸುತ್ತಲೂ ಇರುವ ಒಂದೊಂದು ಗುಂಡಿಯನ್ನು ಮುಚ್ಚಿದರೆ ಸಾಕು. ಗುಂಡಿ ಮುಕ್ತ ಬೆಂಗಳೂರು ಮಾಡಬಹುದು. ಜನರು ಮನಸ್ಸು ಮಾಡಬೇಕು ಅಷ್ಟೆ. ಜೀವ ನಮ್ಮದೆ. ಹಾಗಾಗಿ ನಮ್ಮ ಜೀವವನ್ನು ನಾವೇ ಕಾಪಾಡಿಕೊಳ್ಳಬೇಕು. ಇದು ನಾನು ಕಂಡುಕೊಂಡ ಸತ್ಯ. ಈ ಸೂತ್ರವೇ ನನ್ನನ್ನು ಪ್ರೇರೇಪಿಸಿತು’ ಎನ್ನುವುದು ಕಾರುಣ್ಯ ಮಾತು.
ರಾತ್ರಿ ಹನ್ನೊಂದರ ಹೊತ್ತಿಗೆ ಗುಂಡಿಗಳನ್ನು ಮುಚ್ಚುವುದಕ್ಕೆ ಶುರು ಮಾಡಿದ ಕಾರುಣ್ಯ ಮತ್ತು ಟೀಮ್ ಗೆ ಆ ರಸ್ತೆಯಲ್ಲಿ ಸಂಚರಿಸುತ್ತಿದ್ದವರು ಅಭಿನಂದನೆ ಸಲ್ಲಿಸಿದ್ದಾರೆ. ‘ಆ ರಸ್ತೆಯಲ್ಲಿ ಹೋಗುತ್ತಿದ್ದವರು ವಾಹನ ನಿಲ್ಲಿಸಿ, ನಮ್ಮನ್ನು ಮಾತನಾಡಿಸುತ್ತಿದ್ದರು. ಒಳ್ಳೆಯ ಕೆಲಸ ಮಾಡುತ್ತಿದ್ದೀರಿ ಎಂದು ಬೆನ್ನುತಟ್ಟಿದರು. ನಿಮಗೆ ಒಳ್ಳೆಯದಾಗಲಿ ಎಂದು ಹಾರೈಸಿದರು. ಇದಕ್ಕಿಂತ ಬೇರೆ ಮೆಚ್ಚುಗೆ ಬೇಕಿಲ್ಲ’ ಎನ್ನುತ್ತಾರೆ ಕಾರುಣ್ಯ. ಇದನ್ನೂ ಓದಿ: ಅನುಷ್ಕಾಳೇ ನನ್ನ ಸ್ಫೂರ್ತಿ ಎಂದು ಪತ್ನಿಯನ್ನು ಹಾಡಿ ಹೊಗಳಿದ ವಿರಾಟ್ ಕೊಹ್ಲಿ
ಕಾರುಣ್ಯ ಕೇವಲ ಗುಂಡಿಗಳನ್ನು ಮಾತ್ರ ಮುಚ್ಚಿಲ್ಲ. ತಮ್ಮದೇ ಆದ ಸಂಸ್ಕಾರ ಟ್ರಸ್ಟ್ (Sanskara Trust) ಮೂಲಕ ಹಲವಾರು ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಬಂದಿದ್ದಾರೆ. ಮೊನ್ನೆಯಷ್ಟೇ ರಾಜರಾಜೇಶ್ವರಿ ನಗರದಲ್ಲಿ ಆರೋಗ್ಯ ಶಿಬಿರವನ್ನು ಹಮ್ಮಿಕೊಂಡಿದ್ದರು. ಆ ಭಾಗದ ಜನರಿಗೆ ಉಚಿತ ಆರೋಗ್ಯ ತಪಾಸಣೆಯನ್ನು ಮಾಡಿಸಿದರು. ಅಲ್ಲದೇ ಕೋವಿಡ್ ವೇಳೆಯಲ್ಲೂ ಅವರು ಫುಡ್ ಕಿಟ್ ಹಂಚಿದ್ದರು. ತಮ್ಮ ಹುಟ್ಟು ಹಬ್ಬದಂದು ಅನಾಥ ಮಕ್ಕಳಿಗೆ ನೆರವಾಗುತ್ತಾ ಬಂದಿದ್ದಾರೆ.