ಬಾಲಿವುಡ್ ನಟ ಸೈಫ್ ಅಲಿ ಖಾನ್‌ಗೆ (Saif Ali Khan) ಚಾಕು ಇರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ:Saif Ali Khan ಔಟ್ ಆಫ್ ಡೇಂಜರ್: ಸುನೀಲ್ ಶೆಟ್ಟಿ
ಸೈಫ್ ಅಲಿ ಖಾನ್‌ಗೆ ಚಾಕುವಿನಿಂದ ಇರಿದಿದ್ದ ದಾಳಿಕೋರನನ್ನು ನಿನ್ನೆ (ಜ.16) ತಡರಾತ್ರಿ ಮುಂಬೈ ಪೊಲೀಸರು ಬಂಧಿಸಿ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಸೈಫ್ ಮೇಲಿನ ಅಟ್ಯಾಕ್ ಬೆನ್ನಲ್ಲೇ ದಾಳಿಕೋರನ ಹುಡುಕಲು ಮುಂಬೈ ಪೋಲಿಸರು 20 ತಂಡ ರಚಿಸಿ ಬಲೆ ಬೀಸಿದ್ದರು.
ಇದು ದರೋಡೆ ಮಾಡಲು ಈ ಕೃತ್ಯ ಎಸಗಿದ್ದ ಅಥವಾ ಕೊಲೆ ಮಾಡುವ ಹುನ್ನಾರ ಇತ್ತಾ? ಎಂಬುದನ್ನು ತಿಳಿಯಲು ವಿವಿಧ ರೀತಿಯಲ್ಲಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ನಿನ್ನೆ ಶಂಕಿತ ಆರೋಪಿಯ ಫೋಟೋ ಮತ್ತು ಸಿಸಿಟಿವಿ ದೃಶ್ಯಾವಳಿಗಳನ್ನು ಮುಂಬೈ ಪೊಲೀಸರೇ ಬಹಿರಂಗಪಡಿಸಿದ್ದರು. ಟೀ-ಶರ್ಟ್, ಜೀನ್ಸ್ ಪ್ಯಾಂಟ್ ಧರಿಸಿರುವ ಶಂಕಿತ, ಬ್ಯಾಗ್‌ವೊಂದನ್ನ ಹಾಕಿಕೊಂಡಿದ್ದು, ಕಿತ್ತಳೆ ಬಣ್ಣದ ಸ್ಕಾಫ್ ಧರಿಸಿದ್ದಾನೆ. ಮೆಟ್ಟಿಲುಗಳಿಂದ ಇಳಿದು ಹೋಗುತ್ತಿರುವಾಗ ಸಿಟಿಟಿವಿ ಕ್ಯಾಮೆರಾ ನೋಡಿದ್ದು, ವಿಡಿಯೋನಲ್ಲಿ ಸೆರೆಯಾಗಿದೆ.
ಸೈಫ್ ಅಲಿಖಾನ್ ಮನೆಯಲ್ಲಿ ಅಡುಗೆ ಮಾಡುವವರಲ್ಲಿ ಒಬ್ಬರಾದ ಎಲಿಯಾಮಾ ಫಿಲಿಪ್ಸ್ ಅಲಿಯಾಸ್ ಲಿಮಾ, ಶಂಕಿತನನ್ನ ಮೊದಲು ನೋಡಿದ್ದರಂತೆ. ದುಷ್ಕರ್ಮಿಯನ್ನ ನೋಡಿದ ಕೂಡಲೇ ಭಯದಲ್ಲಿ ಜೋರಾಗಿ ಕಿರುಚಿದ್ದಾರೆ. ಇದರಿಂದ ಎಚ್ಚರಗೊಂಡ ಸೈಫ್, ಹಂತಕನನ್ನ ಒಳ ನುಗ್ಗದಂತೆ ತಡೆಯಲು ಹೋರಾಡಿದ್ದಾರೆ. ಈ ವೇಳೆ ಹಂತಕ 6 ಬಾರಿ ಇರಿದು, ಎಡಗೈ ಮತ್ತು ಗುತ್ತಿಗೆ ಭಾಗವನ್ನ ಗಾಯಗೊಳಿಸಿದ್ದಾನೆ. ಹಂತಕ ಒಳ ನುಗ್ಗಲು ಪ್ರಯತ್ನಿಸಿದಾಗ ನಿನಗೇನು ಬೇಕು ಎಂದು ಕೇಳಲಾಗಿತ್ತಂತೆ. ಆಗ 1 ಕೋಟಿ ರೂ.ಗೆ ಬೇಡಿಕೆಯಿಟ್ಟಿದ್ದಾನೆ ಎಂದು ಆರೋಪಿಸಲಾಗಿದೆ. ದಾಳಿಯಲ್ಲಿ ಇಬ್ಬರು ಮನೆಯ ಸಹಾಯಕರೂ ಗಾಯಗೊಂಡಿದ್ದಾರೆ.
ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಟನ ಆರೋಗ್ಯ ಸ್ಥಿರವಾಗಿದೆ ಎಂದು ಹೇಳಲಾಗಿದೆ.