ಬಳ್ಳಾರಿ: ಜಿಲ್ಲೆಯ ಬಿಜೆಪಿ ಮುಖಂಡ, ರೌಡಿಶೀಟರ್ ಬಂಡಿ ರಮೇಶ್ ಕೊಲೆ ಪ್ರಕರಣದ ಆರೋಪಿಗಳು ಕೊನೆಗೂ ಅಂದರ್ ಆಗಿದ್ದಾರೆ. ಕಳೆದ ಜೂನ್ 22 ರಂದು ಬಳ್ಳಾರಿಯ ಗುಗ್ಗರಹಟ್ಟಿಯ ಶ್ರೀಸಾಯಿ ಪವನ್ ಡಾಬಾದಲ್ಲಿ ಬಂಡಿ ರಮೇಶನನ್ನು ಭೀಕರವಾಗಿ ಹತ್ಯೆ ಮಾಡಿದ್ದ 10 ಆರೋಪಿಗಳನ್ನು ಬಳ್ಳಾರಿ ಪೆÇಲೀಸರು ಬಂಧಿಸಿದ್ದಾರೆ.
ಕೊಲೆಯ ಪ್ರಮುಖ ಆರೋಪಿ ಜಗ್ಗ ಅಲಿಯಾಸ್ ಜಗದೀಶ, ಜಗ್ಗನ ಸಹೋದರ ಮಾರಣ್ಣ, ಮಾರಣ್ಣನ ಪುತ್ರರಾದ ಪವನ್, ಕಲ್ಯಾಣಕುಮಾರ, ಆಂಧ್ರಪ್ರದೇಶದ ಹರಿ, ವೀರೇಶ, ಜಗ್ಗನ ಕಾರು ಚಾಲಕ ಮಲ್ಲಿ ಅಲಿಯಾಸ ಮಲ್ಲಿಕಾರ್ಜುನ, ಸೂರಿ, ಶಾಂತಿ ನಗರದ ಮಲ್ಲಿಕಾರ್ಜುನ ಹಾಗೂ ನಾಸೀರ್ ನನ್ನು ಕಳೆದ ರಾತ್ರಿ ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: ಬಳ್ಳಾರಿಯಲ್ಲಿ ರೌಡಿಶೀಟರ್ ಬಂಡಿ ರಮೇಶನ ಭೀಕರ ಹತ್ಯೆ
ಈ ಮೊದಲು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಜಗ್ಗನ ಸಹೋದರಿಯರಾದ ನೀಲಮ್ಮ, ಲಕ್ಷಿ ಹಾಗೂ ಜಗ್ಗನ ಅತ್ತಿಗೆ ಮಂಗಮ್ಮರನ್ನು ಪೆÇಲೀಸರು ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಿದ್ದರು. ಆದ್ರೆ ಇದೇ ಕೊಲೆ ಪ್ರಕರಣದ ಮತ್ತೊರ್ವ ಪ್ರಮುಖ ಆರೋಪಿ ನೆರಕಟ್ಲ ಯಲ್ಲಪ್ಪ ಸೇರಿದಂತೆ ಇನ್ನೂ ಕೆಲವರು ಪರಾರಿಯಾಗಿದ್ದು, ಅವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ.
ಕೊಲೆಗೂ ಮುನ್ನ ವೈಯಕ್ತಿಕ ದ್ವೇಷಕ್ಕಾಗಿ ಬಡಿದಾಡಿಕೊಂಡಿದ್ದ ಜಗ್ಗ ಮತ್ತು ಬಂಡಿ ರಮೇಶನ ಜಗಳವನ್ನು ರಾಜಿ ಮಾಡಲು ಪ್ರಯತ್ನಿಸಿದ ಮಾಜಿ ಶಾಸಕ ಸೋಮಶೇಖರರೆಡ್ಡಿ ಅವರನ್ನು ಸಹ ವಿಚಾರಣೆ ಮಾಡಿ ಮಾಹಿತಿ ಕಲೆ ಹಾಕುವುದಾಗಿ ಎಸ್‍ಪಿ ಆರ್ ಚೇತನ್ ತಿಳಿಸಿದ್ದಾರೆ.
ಘಟನೆ ಕುರಿತು ಬಳ್ಳಾರಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.