ಪ್ರೀತಿ ನಿರಾಕರಿಸಿದ್ದಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಂದ ವಿವಾಹಿತ

Public TV
2 Min Read
Maharashtra Love Murder 2

– ಒಂದು ಮಗುವಿನ ತಂದೆಗೆ ಉಪನ್ಯಾಸಕಿ ಮೇಲೆ ಲವ್
– ಮದ್ವೆಯಾದ್ರೂ ಉಪನ್ಯಾಸಕಿ ಹಿಂದೆ ಬಿದ್ದ

ಮುಂಬೈ/ನಾಗ್ಪುರ: ಪ್ರೀತಿ ನಿರಾಕರಿಸಿದ್ದಕ್ಕೆ ವ್ಯಕ್ತಿಯೋರ್ವ ಯುವತಿಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆಗೈದಿರುವ ಘಟನೆ ಮಹಾರಾಷ್ಟ್ರದ ವರ್ಧಾ ಜಿಲ್ಲೆಯಲ್ಲಿ ನಡೆದಿದೆ. ಫೆಬ್ರವರಿ 3ರಂದು ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಲಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವತಿ ಇಂದು ಬೆಳಗ್ಗೆ 6.55 ಗಂಟೆಗೆ ಸಾವನ್ನಪ್ಪಿದ್ದಾರೆ.

Maharashtra Love Murder 1

25 ವರ್ಷದ ಅಂಕಿತಾ ಪಿಸುದೆ ಸಾವನ್ನಪ್ಪಿದ ಯುವತಿ. 27 ವರ್ಷದ ವಿಕೇಶ್ ನಾಗರಾಲೆಯನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆಗೆ ಒಳಪಡಿಸಿದ್ದಾರೆ. ಫೆಬ್ರವರಿ ಮೂರರಂದು ವಿಕೇಶ್ ಯುವತಿಯ ಮೇಲೆ ದಾಳಿ ನಡೆಸಿದ್ದನು. ಘಟನೆಯಲ್ಲಿ ಅಂಕಿತಾ ದೇಹ ಶೇ.40ರಷ್ಟು ಸುಟ್ಟಿತ್ತು. ಕೂಡಲೇ ಅಂಕಿತಾರನ್ನು ನಾಗಪುರದ ಆಸ್ಪತ್ರೆಗೆ ದಾಖಲಿಸಿ ವೆಂಟಿಲೇಟರ್ ನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಘಟನೆಯಲ್ಲಿ ಅಂಕಿತಾ ದೃಷ್ಟಿ ಕಳೆದುಕೊಂಡಿದ್ದರು. ಇಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೇ ಅಂಕಿತಾ ಸಾವನ್ನಪ್ಪಿದ್ದಾರೆ ಎಂದು ಆರೆಂಜ್ ಸಿಟಿ ಆಸ್ಪತ್ರೆಯ ನಿರ್ದೇಶಕ ಡಾ.ಅನೂಪ್ ಮರಾರ್ ತಿಳಿಸಿದ್ದಾರೆ.

Maharashtra Love Murder 3

ಆರೋಪಿ ವಿಕೇಶ್ ವಿವಾಹಿತನಾಗಿದ್ದು, ಒಂದು ಮಗುವಿನ ತಂದೆಯಾಗಿದ್ದಾನೆ. ಆದ್ರೂ ಅಂಕಿತಾರಿಗೆ ತನ್ನನ್ನು ಮದುವೆ ಆಗುವಂತೆ ಕಿರುಕುಳ ನೀಡುತ್ತಿದ್ದನು. ಘಟನೆ ಬಳಿಕ ಪ್ರತಿಕ್ರಿಯಿಸಿದ್ದ ಸಿಎಂ ಉದ್ಧವ್ ಠಾಕ್ರೆ, ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಚಿಕಿತ್ಸಾ ವೆಚ್ಚ ಭರಿಸಲಾಗುತ್ತದೆ ಎಂದು ತಿಳಿಸಿದ್ದರು. ಅಂಕಿತಾ ಸಾವಿಗೆ ದುಃಖ ವ್ಯಕ್ತಪಡಿಸಿರುವ ಮಹಾರಾಷ್ಟ್ರದ ಮಹಿಳಾ ಮತ್ತು ಕಲ್ಯಾಣ ಸಚಿವೆ ಯಶೋಮತಿ ಠಾಕೂರ್, ಧೈರ್ಯಶಾಲಿ ಮಗಳನ್ನು ಕಳೆದುಕೊಂಡಿರುವುದಕ್ಕೆ ದುಃಖವಾಗುತ್ತಿದೆ. ದೇಶದಲ್ಲಿ ಮತ್ತೊಂದು ನಿರ್ಭಯಾಳ ಸಾವು ಆಗಿದೆ. ಅಪರಾಧಿಗೆ ಕಠಿಣ ಶಿಕ್ಷೆ ಆಗಬೇಕು. ಈ ಸಂಬಂಧ ಅಧಿಕಾರಿಗಳು ಶೀಘ್ರವಾಗಿ ತನಿಖೆ ನಡೆಸಬೇಕೆಂದು ಆದೇಶಿಸಿದ್ದಾರೆ.

ಬಸ್‍ನಿಂದ ಇಳಿಯುತ್ತಿದ್ದಂತೆ ಬೆಂಕಿ ಹಚ್ಚಿದ: ಅಂಕಿತಾ ವರ್ಧಾ ಜಿಲ್ಲೆಯ ದರೋದಾ ಗ್ರಾಮದ ನಿವಾಸಿಯಾಗಿದ್ದು, ಮಹಿಳಾ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿಕೊಂಡಿದ್ದರು. ಪ್ರತಿದಿನದಂತೆ ಅಂಕಿತಾ 75 ಕಿ.ಮೀ. ದೂರದದಲ್ಲಿರುವ ಹಿಂಗಣಘಾಡಟ್ ಕಾಲೇಜಿಗೆ ಬಸ್ ನಲ್ಲಿ ತೆರಳುತ್ತಿದ್ದರು. ಫೆಬ್ರವರಿ 3ರಂದು ವಿಕೇಶ್ ಕಾಲೇಜಿನ ಬಳಿ ನಿಂತು ಅಂಕಿತಾ ಬರುವಿಕೆಗಾಗಿ ಕಾಯುತ್ತಿದ್ದನು. ಅಂಕಿತಾ ಬರುವ ಮೊದಲೇ ಸ್ಕೂಟಿಯಲ್ಲಿದ್ದ ಪೆಟ್ರೋಲ್ ಕ್ಯಾನಿಗೆ ತುಂಬಿ ಕೊಲೆ ಮಾಡಲು ಸಿದ್ಧನಾಗಿದ್ದನು. ಬಸ್ ಬರುತ್ತಿದ್ದಂತೆ ಅಂಕಿತಾ ಬಳಿ ಬಂದ ವಿಕೇಶ್ ಕ್ಷಣಾರ್ಧದಲ್ಲಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದನು.

Maharashtra Love Murder 4

ಅಂಕಿತಾ ಸಹಾಯಕ್ಕೆ ಬಂದ ವಿದ್ಯಾರ್ಥಿಗಳು: ಬೆಂಕಿ ಹಚ್ಚಿ ವಿಕೇಶ್ ಪರಾರಿಯಾಗುತ್ತಿದ್ದಂತೆ ಸ್ಥಳದಲ್ಲಿ ವಿದ್ಯಾರ್ಥಿಗಳು ಅಂಕಿತಾ ಸಹಾಯಕ್ಕೆ ಬಂದಿದ್ದಾರೆ. ವಿದ್ಯಾರ್ಥಿನಿಯರ ಕಿರುಚಾಟ ಕೇಳಿದ ಜನರು ಅಂಕಿತಾ ಮೇಲೆ ನೀರು ಸುರಿದಿದ್ದಾರೆ. ಆದರೂ ಅಂಕಿತಾರ ಮುಖ ಸೇರಿದಂತೆ ದೇಹದ ಶೇ.40 ರಷ್ಟು ಬೆಂಕಿಗಾಹುತಿಯಾಗಿತ್ತು.

ಆತ್ಮಹತ್ಯೆಗೆ ಯತ್ನಿಸಿದ್ದ ವಿಕೇಶ್: ಮೊದಲಿಗೆ ಅಂಕಿತಾ ಮತ್ತು ವಿಕೇಶ್ ಸ್ನೇಹಿತರು. ವಿಕೇಶ್ ಮದುವೆಯಾದ ಬಳಿಕ ಅಂಕಿತಾ ಅತನಿಂದ ಅಂತರ ಕಾಯ್ದುಕೊಂಡಿದ್ದರು. ಮದುವೆಯಾದ್ರೂ ನಾನು ನಿನ್ನನ್ನು ಮದುವೆ ಆಗುತ್ತೇನೆ ಎಂದು ವಿಕೇಶ್ ಪೀಡಿಸುತ್ತಿದ್ದನು. ಮದುವೆ ಬಳಿಕ ಅಂಕಿತಾರನ್ನು ಸಂಪರ್ಕಿಸಲು ವಿಕೇಶ್ ಪ್ರಯತ್ನಿಸುತ್ತಿದ್ದನು. ಆದರೆ ಅಂಕಿತಾ ಆತನೊಂದಿಗೆ ಮಾತನಾಡಲು ಇಷ್ಟಪಡುತ್ತಿರಲಿಲ್ಲ. ಈ ಘಟನೆಗೂ ಮುನ್ನ ಅಂದ್ರೆ ಮೂರು ತಿಂಗಳು ಮೊದಲು ಆರೋಪಿ ವಿಕೇಶ್ ಆತ್ಮಹತ್ಯೆಗೆ ಯತ್ನಿಸಿದ್ದನು. ನಾಲ್ಕು ತಿಂಗಳ ಮಗಳ ತಂದೆಯಾಗಿರುವ ವಿಕೇಶ್ ಜೈಲುಪಾಲಾಗಿದ್ದಾನೆ.

Share This Article
Leave a Comment

Leave a Reply

Your email address will not be published. Required fields are marked *