ತುಮಕೂರು/ ಬೆಂಗಳೂರು: ಶಿಕ್ಷಣ ಸಚಿವ ನಾಗೇಶ್ ಅವರ ಮನೆಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಿಪಟೂರು ಪೊಲೀಸರು 15ಕ್ಕೂ ಹೆಚ್ಚಿನ ಪ್ರತಿಭಟನಾಕಾರರನ್ನು ಬಂಧಿಸಿದ್ದಾರೆ.
ನಾಗೇಶ್ ಸಹಾಯಕ ಮುರಳೀಧರ್ ದೂರಿನ ಆಧಾರದಲ್ಲಿ ಪ್ರಕರಣ ದಾಖಲಾಗಿದ್ದು, ಹೇಮಂತ್ ಎಂಬಾತನನ್ನು ಎ1 ಆರೋಪಿ ಎಂದು ಕೇಸ್ ಫೈಲ್ ಮಾಡಲಾಗಿದೆ.
Advertisement
Advertisement
ವಿಷಯ ತಿಳಿಯುತ್ತಲೇ ನಾಗೇಶ್ ಮನೆಗೆ ದೌಡಾಯಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಎನ್‍ಎಸ್‍ಯುಐ ಕಾರ್ಯಕರ್ತರ ಪ್ರತಿಭಟನೆ ಬಗ್ಗೆ ಸ್ಫೋಟಕ ಮಾಹಿತಿ ಹೊರಹಾಕಿದ್ದಾರೆ. ಇಲ್ಲಿ ಪ್ರತಿಭಟನೆ ನಡೆಸಿದ್ದು ತುಮಕೂರಿನವರಲ್ಲ. ದಾವಣಗೆರೆ, ಬೆಂಗಳೂರು ಹೀಗೆ ಬೇರೆ ಬೇರೆ ಜಿಲ್ಲೆಗಳಿಂದ ಬಂದವರಿಂದ ಕೃತ್ಯ ನಡೆದಿದೆ. ವ್ಯವಸ್ಥಿತವಾಗೇ ಪ್ಲಾನ್ ಮಾಡಿಕೊಂಡು ಸಚಿವ ನಾಗೇಶ್ ಮನೆಗೆ ಬೆಂಕಿ ಹಚ್ಚಲು ಯತ್ನಿಸಿದ್ದಾರೆ. ಸಚಿವರು ಇದ್ದಿದ್ದರೆ ಕೊಲೆ ಮಾಡುತ್ತಿದ್ದರೋ ಏನೋ? ಇಂಥಹ ಗೂಂಡಾವರ್ತನೆಯನ್ನು ಸರ್ಕಾರ ಸಹಿಸುವುದಿಲ್ಲ ಎಂದು ವಾರ್ನಿಂಗ್ ನೀಡಿದ್ದಾರೆ. ಇದನ್ನೂ ಓದಿ: ಈಶ್ವರಪ್ಪಗೆ ಮತ್ತೆ ಧ್ವಜ ಉರುಳು – ದೆಹಲಿಯಲ್ಲಿ ದೂರು ದಾಖಲು
Advertisement
ಇಡೀ ಪ್ರಕರಣವನ್ನು ಬಿಜೆಪಿ ನಾಯಕರು ತೀವ್ರವಾಗಿ ಖಂಡಿಸಿದ್ದಾರೆ. ಸಿಎಂ ಬೊಮ್ಮಾಯಿ ಟ್ವೀಟ್ ಮಾಡಿ, ಸಚಿವರ ಮನೆ ಆವರಣದಲ್ಲಿ ಎನ್‍ಎಸ್‍ಯುಐ ದಾಂಧಲೆ ನಡೆಸಿರುವುದು ಖಂಡನೀಯ. ಇಂತಹ ನಡೆ ವಿದ್ಯಾರ್ಥಿಗಳಿಗೆ, ಶಿಕ್ಷಣ ಪ್ರೇಮಿಗಳಿಗೆ ಶೋಭೆ ತರುವುದಿಲ್ಲ. ಈ ಕೃತ್ಯ ನಡೆಸಿದ ದುಷ್ಕರ್ಮಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
Advertisement
ಎಫ್‌ಐಆರ್‌ನಲ್ಲಿ ಏನಿದೆ?
ಬುಧವಾರ ಮಧ್ಯಾಹ್ನ 1:15ರ ಸುಮಾರಿಗೆ ಪ್ರತಿಭಟನೆ ಆರಂಭವಾಗಿದೆ. 20-25 ಜನ ಎನ್‍ಎಸ್‍ಯುಐ ಹೆಸರಿನಲ್ಲಿ ಬಾವುಟ, ಭಿತ್ತಿಪತ್ರ ಹಿಡಿದು ಘೋಷಣೆ, ಅವಾಚ್ಯವಾಗಿ ನಿಂದಿಸಿ ಪ್ರತಿಭಟಿಸಿದರು.
15 ನಿಮಿಷಗಳ ಬಳಿಕ ಏಕಾಏಕಿ ಸಚಿವರ ಮನೆಗೆ ನುಗ್ಗಲು ಯತ್ನಿಸಿ ಬಳಿಕ ಖಾಕಿ ಚಡ್ಡಿಗೆ ಬೆಂಕಿ ಹಚ್ಚಿದರು. ಸಚಿವರ ಮನೆ, ಕಚೇರಿ ಸುಟ್ಟು ಹಾಕಲು ಹುನ್ನಾರ ನಡೆಸುತ್ತಿದ್ದಾಗ ಸಬ್ ಇನ್ಸ್‌ಪೆಕ್ಟರ್ ದಾಕ್ಷಾಯಿಣಿ ಕೃತ್ಯವನ್ನು ತಡೆದಿದ್ದಾರೆ.
ಕೃತ್ಯಕ್ಕೆ ಸಂಬಂಧಿಸಿದಂತೆ ಕೋಡಿಹಳ್ಳಿ ನಿವಾಸಿ ಹೇಮಂತ್ ಎಂಬಾತನ ಗುರುತು ಪತ್ತೆಯಾಗಿದ್ದು 15ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಲಾಗಿದೆ.