ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu Kashmir) ಶೋಪಿಯಾನ್ (Shopian) ಜಿಲ್ಲೆಯ ಶುಕ್ರೂ ಕೆಲ್ಲರ್ ಅರಣ್ಯ(Keller Forest) ಪ್ರದೇಶದಲ್ಲಿ ಮೂವರು ಉಗ್ರರ ಹತ್ಯೆ ಬೆನ್ನಲ್ಲೇ ಭದ್ರತಾ ಪಡೆಗಳು ಅಪಾರ ಪ್ರಮಾಣದ ಶಸ್ತ್ರಾಸ್ತ್ರ, ಮದ್ದುಗುಂಡುಗಳನ್ನು ವಶಕ್ಕೆ ಪಡೆದುಕೊಂಡಿವೆ.
ಮೇ 13ರಂದು ‘ಆಪರೇಷನ್ ಕೆಲ್ಲರ್’ ಅಡಿಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಭದ್ರತಾ ಪಡೆ ಮೂವರು ಭಯೋತ್ಪಾದಕರನ್ನು ಗುಂಡಿಕ್ಕಿ ಕೊಂದಿದೆ. ಅದಾದ ಒಂದು ದಿನದ ಬಳಿಕ ಬುಧವಾರ ಭದ್ರತಾ ಪಡೆಗಳು ರೈಫಲ್, ಗ್ರೆನೇಡ್‌ಗಳು ಸೇರಿದಂತೆ ಬೃಹತ್ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿವೆ. ಈ ಶಸ್ತ್ರಾಸ್ತ್ರಗಳು, ಸಾವನ್ನಪ್ಪಿದ್ದ ಮೂವರು ಉಗ್ರರಿಗೆ ಸೇರಿರಬಹುದು ಎನ್ನಲಾಗಿದೆ.ಇದನ್ನೂ ಓದಿ: ʻಬಿಬಿಎಂಪಿʼ ಹೆಸರು ಇತಿಹಾಸ ಪುಟಕ್ಕೆ – ಮೇ 15ರಿಂದ ʻಗ್ರೇಟರ್ ಬೆಂಗಳೂರುʼ ಆಡಳಿತ ಜಾರಿ
ಎನ್‌ಕೌಂಟರ್ ಆದ ಮೂವರು ಭಯೋತ್ಪಾದಕರು ಎಲ್‌ಇಟಿ ಸಂಘಟನೆಗೆ ಸೇರಿದವರಾಗಿದ್ದು, ಆ ಪೈಕಿ ಇಬ್ಬರನ್ನು ಶೋಪಿಯಾನ್‌ನ ಸ್ಥಳೀಯರು ಎನ್ನಲಾಗಿದೆ. ಶಾಹಿದ್ ಕುಟ್ಟಯ್ ಮತ್ತು ಅದ್ನಾನ್ ಶಫಿ ದಾರ್ ಎಂದು ಗುರುತಿಸಲಾಗಿದ್ದು, ಇನ್ನೋರ್ವನ ಗುರುತು ಪತ್ತೆಯಾಗಿಲ್ಲ.
ದಕ್ಷಿಣ ಕಾಶ್ಮೀರ ಜಿಲ್ಲೆಯ ಶುಕ್ರೂ ಕೆಲ್ಲರ್ ಪ್ರದೇಶದಲ್ಲಿ ಭಯೋತ್ಪಾದಕರು ಇರುವ ಬಗ್ಗೆ ನಿರ್ದಿಷ್ಟ ಮಾಹಿತಿಯ ಆಧಾರದ ಮೇಲೆ ಭದ್ರತಾ ಪಡೆಗಳು ಅಲ್ಲಿ ಸುತ್ತುವರಿದು ಶೋಧ ಕಾರ್ಯಾಚರಣೆ ಪ್ರಾರಂಭಿಸಿದಾಗ ಭದ್ರತಾ ಪಡೆ ಹಾಗೂ ಭಯೋತ್ಪಾದಕರ ನಡುವೆ ಗುಂಡಿನ ಚಕಮಕಿ ನಡೆದಿತ್ತು.
ಏ.22 ರ ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆಂದು ಶಂಕಿಸಲಾಗಿರುವ ಮೂವರು ಪಾಕಿಸ್ತಾನಿ ಭಯೋತ್ಪಾದಕರಾದ ಆದಿಲ್ ಹುಸೇನ್ ಥೋಕರ್, ಅಲಿ ಭಾಯ್ ಮತ್ತು ಹಾಶಿಮ್ ಮೂಸಾ ಪೋಸ್ಟರ್‌ಗಳನ್ನು ಭದ್ರತಾ ಪಡೆಗಳು ಪೋಸ್ಟ್ ಮಾಡಿದ ಬೆನ್ನಲ್ಲೇ ಗುಂಡಿನ ದಾಳಿ ನಡೆದಿತ್ತು.ಇದನ್ನೂ ಓದಿ: ಕರ್ನಲ್ ಸೋಫಿಯಾ ಪತಿ ಮನೆ ಮೇಲೆ RSS ದಾಳಿ ವದಂತಿ – ಸುಳ್ಳು ಸುದ್ದಿ ನಂಬದಂತೆ ಬೆಳಗಾವಿ ಎಸ್ಪಿ ಮನವಿ