ಬಿಎಸ್‍ಎಫ್ ಶಿಬಿರದ ಮೇಲೆ ದಾಳಿ- ಉಗ್ರರ ಟಾರ್ಗೆಟ್ ಇದ್ದಿದ್ದು ಶ್ರೀನಗರ ವಿಮಾನ ನಿಲ್ದಾಣ

Public TV
2 Min Read
file6wyalatmpq91dsc97ioh

ಜಮ್ಮುಕಾಶ್ಮೀರ: ಮಂಗಳವಾರದಂದು ನಡೆದ ಬಿಎಸ್‍ಎಫ್ 182ನೇ ಬೆಟಲಿಯನ್ ಮುಖ್ಯ ಕಚೇರಿ ಮೇಲಿನ ಉಗ್ರರ ದಾಳಿಯ ಮೂಲ ಟಾರ್ಗೆಟ್ ಶ್ರೀನಗರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿತ್ತು ಎಂದು ಪತ್ರಿಕೆಯೊಂದು ವರದಿ ಮಾಡಿದೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯಲು ಜೆಇಎಂ ಸಂಘಟನೆ ಶ್ರೀನಗರ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ದಾಳಿ ನಡೆಸಲು ಯೋಜಿಸಿತ್ತು. ಆದ್ರೆ ವಿಮಾನ ನಿಲ್ದಾಣದ ಭದ್ರತೆಯ ಕಣ್ತಪ್ಪಿಸಲು ಸಾಧ್ಯವಾಗದ ಕಾರಣ ಬಿಎಸ್‍ಎಫ್ ಕ್ಯಾಂಪ್ ಮೇಲೆ ದಾಳಿ ಮಾಡಲು ನಿರ್ಧರಿಸಿದ್ದರು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

000 2

ಜೆಇಎಂ ಉಗ್ರ ಸಂಘಟನೆ ವಿಮಾನ ನಿಲ್ದಾಣದ ಸಮೀಪ ಇರುವ ಗಡಿ ಭದ್ರತಾ ಪಡೆಯ(ಬಿಎಸ್‍ಎಫ್) ಶಿಬಿರದ ಮೇಲೆ ಮಂಗಳವಾರ ಬೆಳಗಿನ ಜಾವ ಗುಂಡು ಮತ್ತು ಗ್ರೆನೇಡ್ ದಾಳಿ ನಡೆಸಿತ್ತು

ಉಗ್ರರ ದಾಳಿಗೆ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ(ಸಿಆರ್‍ಪಿಎಫ್) ಸಹಾಯಕ ಸಬ್‍ಇನ್ಸ್‍ಪೆಕ್ಟರ್ ಒಬ್ಬರು ಮೃತಪಟ್ಟಿದ್ದು ಮೂವರು ಗಾಯಗೊಂಡಿದ್ದಾರೆ. ಬಿಎಸ್‍ಎಫ್ ಮತ್ತು ಸಿಆರ್‍ಪಿಆಫ್ ಯೋಧರು ಪ್ರತಿದಾಳಿ ನಡೆಸಿ ಮೂವರು ಉಗ್ರರನ್ನು ಸದೆಬಡಿದಿದ್ದಾರೆ.

000 3

ವಿಮಾನ ನಿಲ್ದಾಣದ ಮುಖ್ಯ ದ್ವಾರದ ಎದುರೇ ಬಿಎಸ್‍ಎಫ್‍ನ 182ನೇ ತುಕುಡಿ ಶಿಬಿರವಿದೆ. ಈ ತುಕುಡಿ ವಿಮಾನನಿಲ್ದಾಣದ ಭದ್ರತೆಯನ್ನು ನೋಡಿಕೊಳ್ಳುತ್ತದೆ. ನಸುಕಿನ ಜಾವ 4.15ರ ಸುಮಾರಿಗೆ ಉಗ್ರರು ಸಿಬಿರದೊಳಗೆ ನುಗ್ಗಿದ್ದಾರೆ. ಉಗ್ರರು ಸೇನಾ ಸಮವಸ್ತ್ರದಲ್ಲಿ ಇದ್ದುದ್ದರಿಂದ ಯೋಧರು ಅವರನ್ನು ನಿರ್ಲಕ್ಷಿಸಿದ್ದಾರೆ. ಆಗ ತಮ್ಮ ಎದುರಿಗೆ ಬಂದ ಸಿಆರ್‍ಪಿಎಫ್‍ನ ಇನ್ಸ್‍ಪೆಕ್ಟರ್ ಮೇಲೆ ಉಗ್ರರು ಗುಂಡಿನದಾಳಿ ನಡೆಸಿದ್ದಾರೆ ಎಂದು ಜಮ್ಮು ಕಾಶ್ಮೀರ ಪೊಲೀಸ್ ಮಹಾ ನಿರ್ದೇಶಕ ಮುನೀರ್ ಖಾನ್ ತಿಳಿಸಿದ್ದಾರೆ.

ನಂತರ ಉಗ್ರರು ಯೋಧರತ್ತ ಗ್ರೆನೇಡ್‍ಗಳನ್ನು ಎಸೆದಿದ್ದಾರೆ. ಗ್ರೆನೇಡ್‍ಗಳ ಸ್ಫೋಟಕ್ಕೆ ಮೂವರು ಯೋಧರು ಗಾಯಗೊಂಡರು. ತಕ್ಷಣವೇ ಪ್ರತಿದಾಳಿ ಆರಂಭಿಸಲಾಯಿತು. ಇನ್ನೂ ಕತ್ತಲು ಇದ್ದ ಕಾರಣ ಕಾರ್ಯಾಚರಣೆ ಕಷ್ಟವಾಯಿತು. ಬೆಳಗ್ಗೆ 6ರ ಹೊತ್ತಿಗೆ ಒಬ್ಬ ಉಗ್ರನನ್ನು ಹೊಡೆದುರುಳಿಸಲಾಯಿತು. ಆಗ ಉಳಿದ ಇಬ್ಬರು ಉಗ್ರರೂ ಬೇರೆ ಬೇರೆ ದಿಕ್ಕುಗಳತ್ತ ಪರಾರಿಯಾದರು. ಆನಂತರ ಇಬ್ಬರೂ ಬೇರೆ ಬೇರೆ ಕಟ್ಟಡಗಳಲ್ಲಿ ಅವಿತುಕೊಂಡು ದಾಳಿ ಮುಂದುವರೆಸಿದರು. ಮಧ್ಯಾಹ್ನದ ವೇಳೆಗೆ ಇಬ್ಬರನ್ನೂ ಹೊಡೆದುರುಳಿಸಲಾಯಿತು ಎಂದು ಕಾರ್ಯಾಚರಣೆಯನ್ನು ವಿವರಿಸಿದರು.

000 1

ಕಟ್ಟಡಗಳ ಒಳಗೆ ಅವಿತುಕೊಳ್ಳುವ ಮುನ್ನ ಉಗ್ರರು ಶಿಬಿರದ ಆವರಣದಲ್ಲಿದ್ದ ಪೊದೆಗಳಲ್ಲಿ ಬಹುಕಾಲ ಅಡಗಿಕೊಂಡಿದ್ದರು. ಆಗ ಅವರ ವಿರುದ್ಧ ವಾಯುದಾಳಿ ನಡೆಸಲು ಅವಕಾಶವಿತ್ತು. ಆದರೆ ಶಿಬಿರಕ್ಕೆ ಹೊಂದಿಕೊಂಡಂತೆ ಜನವಸತಿ ಪ್ರದೇಶವಿದೆ. ಹೀಗಾಗಿ ವಾಯುದಾಳಿಯ ಯೋಚನೆಯನ್ನು ಕೈಬಿಡಲಾಯಿತು. ಹೀಗಾಗಿಯೇ ಕಾರ್ಯಾಚರಣೆ ಮಧ್ಯಾಹ್ನದವರೆಗೂ ನಡೆಯಿತು. ಸಾರ್ವಜನಿಕರ ಜೀವ ಮತ್ತು ಆಸ್ತಿಪಾಸ್ತಿಗೆ ಹಾನಿಯಾಗದಂತೆ ಕಾರ್ಯಾಚರಣೆ ಮುಗಿಸಿದ್ದೇವೆ’ ಎಂದು ಮುನೀರ್ ಖಾನ್ ಮಾಹಿತಿ ನೀಡಿದ್ದಾರೆ.

ಪಾಕಿಸ್ತಾನದ ಉಗ್ರ ಸಂಘಟನೆ ಜೈಷ್ ಎ ಮೊಹಮ್ಮದ್ (ಜೆಇಎಂ) ಈ ದಾಳಿಯ ಹೊಣೆ ಹೊತ್ತುಕೊಂಡಿದೆ. ಮುನೀರ್ ಖಾನ್ ಸಹ ಇದನ್ನೇ ದೃಢಪಡಿಸಿದ್ದಾರೆ. `ಜೆಇಎಂ ಉಗ್ರರು ಮಾತ್ರ ಇಂತಹ ದಾಳಿ ನಡೆಸುತ್ತಾರೆ’ ಎಂದು ಅವರು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *