ಮಾಸ್ಕೋ: ನಾಯಿ ಮರಿಯಿಂದಾಗಿ ಪ್ಯಾಸೆಂಜರ್ ವಿಮಾನವೊಂದು ತುರ್ತು ಭೂಸ್ಪರ್ಶ ಮಾಡಿರುವ ಘಟನೆ ರಷ್ಯಾದಲ್ಲಿ ನಡೆದಿದೆ.
ವಿಮಾನವು ಸೈಂಟ್ ಪೀಟರ್ಸ್ ಬರ್ಗ್ ನಿಂದ ಮಾಸ್ಕೋಗೆ ಹೊರಟಿತ್ತು. ಇನ್ನೇನು ರಷ್ಯಾದ ರಾಜಧಾನಿ ಮಾಸ್ಕೋ ಸಮೀಪಿಸುತ್ತೆ ಅನ್ನೋವಷ್ಟರಲ್ಲಿ ನಾಯಿ ಮರಿಯಿಂದ ವಿಮಾನ ತುರ್ತು ಭೂಸ್ಪರ್ಶ ಮಾಡಿದೆ.
Advertisement
ಏನಿದು ಘಟನೆ?:
ವಿಮಾನದ ಲಗೇಜ್ ಕಂಪಾರ್ಟ್ ಮೆಂಟ್‍ನಲ್ಲಿ ನಾಯಿ ಮರಿಯನ್ನು ಪಂಜರದಲ್ಲಿ ಕೂಡಿಟ್ಟಿರಲಾಗಿತ್ತು. ಆದರೆ ಪಂಜರವನ್ನು ಸರಿಯಾಗಿ ಮುಚ್ಚದೇ ಇದ್ದ ಕಾರಣ ನಾಯಿ ಮರಿ ಹೊರಗೆ ಬಂದಿದೆ. ಬಳಿಕ ಅಲ್ಲೆಲ್ಲಾ ಓಡಾಡಿ ಲಗೇಜ್ ಕಂಪಾರ್ಟ್ ಮೆಂಟ್ ಬಾಗಿಲನ್ನು ತೆಗೆಯಲು ಪ್ರಯತ್ನ ಮಾಡಿದೆ. ಕೊನೆಗೆ ನಾಯಿ ಮರಿ ತನ್ನ ಹಲ್ಲು ಮತ್ತು ಉಗುರಿನಿಂದ ಪರಚಿ ಕಾಲಿನಿಂದ ವಿಮಾನದ ಕಂಪಾರ್ಟ್ ಮೆಂಟಿನ ಅರ್ಧ ಬಾಗಿಲನ್ನು ತೆರೆದಿದೆ. ನಾಯಿ ಮರಿ ಎಷ್ಟೇ ಪ್ರಯತ್ನಿಸಿದರೂ ಕಂಪಾರ್ಟ್ ಮೆಂಟಿನ ಪೂರ್ಣ ಬಾಗಿಲು ತೆಗೆಯಲು ಸಾಧ್ಯವಾಗಿಲ್ಲ. ಯಾಕಂದ್ರೆ ವಿಮಾನದೊಳಗೆ ತಂತ್ರಜ್ಞಾನಗಳನ್ನು ಅಳವಡಿಸಲಾಗಿರುತ್ತದೆ.
Advertisement
ವಿಮಾನದಲ್ಲಿ ಏನಾದರೂ ಸಮಸ್ಯೆ ಉಂಟಾದರೆ ಭದ್ರತಾ ಸಿಬ್ಬಂದಿಯ ಅರಿವಿಗೆ ಬರಲು ಎಚ್ಚರಿಕೆಯ ಗಂಟೆಯನ್ನು ಅಳವಡಿಸಿರಲಾಗಿರುತ್ತದೆ. ವಿಮಾನದ ಬಾಗಿಲು ಅರ್ಧ ತೆಗೆದಿದ್ದ ಕಾರಣ ಎಚ್ಚರಿಕೆಯ ಗಂಟೆ ಬಡಿದುಕೊಳ್ಳಲು ಪ್ರಾರಂಭಿಸಿತು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
Advertisement
ಈ ವೇಳೆ ವಿಮಾನ ಭೂಮಿಯಿಂದ ಸುಮಾರು 13,000 ಅಡಿಗಳ ಮೇಲೆ ಹಾರಾಟ ಮಾಡುತ್ತಿತ್ತು. ಮುಂಜಾಗೃತ ಕ್ರಮವಾಗಿ ಪೈಲೆಟ್ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಿದ್ದಾರೆ. ನಂತರ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ. ಆಗ ನಾಯಿ ಮರಿಯಿಂದ ಬಾಗಿಲು ಅರ್ಧ ತೆರೆದುಕೊಂಡಿರುವುದು ಬೆಳಕಿಗೆ ಬಂದಿದೆ ಎಂದು ವರದಿಯಾಗಿದೆ.
Advertisement
ಸದ್ಯ ಈ ಅವಘಡದಿಂದ ಪ್ರಯಾಣಿಕರಿಗೆ ಯಾವುದೇ ರೀತಿಯ ಸಮಸ್ಯೆಯಾಗಿಲ್ಲ. ಎಲ್ಲರೂ ಸುರಕ್ಷಿತವಾಗಿದ್ದಾರೆ. ನಾಯಿ ಮರಿಯ ಜೀವಕ್ಕೆ ಯಾವುದೇ ಪ್ರಣಾಪಾಯವಾಗಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.