ಒಡಿಶಾದಲ್ಲಿ (Odisha Train Tragedy) ಶುಕ್ರವಾರ ಸಂಜೆ ಸಂಭವಿಸಿದ ರೈಲು ದುರಂತದ ಬಗ್ಗೆ ಆಘಾತ ವ್ಯಕ್ತಪಡಿಸಿರುವ ಸ್ಯಾಂಡಲ್ ವುಡ್, ಘಟನೆಯಲ್ಲಿ ಮೃತಪಟ್ಟ ವ್ಯಕ್ತಿಗಳಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ನಟ ಯಶ್ (Yash) , ನಟಿ ಹಾಗೂ ಸಂಸದೆ ಸುಮಲತಾ ಅಂಬರೀಶ್ (Sumalata Ambarish) ಸೇರಿದಂತೆ ಹಲವು ಸೋಷಿಯಲ್ ಮೀಡಿಯಾಗಳ ಮೂಲಕ ಸಂತಾಪ (condolence) ವ್ಯಕ್ತ ಪಡಿಸಿದ್ದಾರೆ. ಅಗಲಿದ ಕುಟುಂಬಕ್ಕೆ ನೋವು ಭರಿಸುವಂತಹ ಶಕ್ತಿ ನೀಡಲಿ ಎಂದು ಅವರು ಪ್ರಾರ್ಥನೆ ಮಾಡಿದ್ದಾರೆ.
ಚೆನ್ನೈ-ಕೊರೊಮಂಡೆಲ್ ಎಕ್ಸ್ಪ್ರೆಸ್ ರೈಲು, ಯಶವಂತಪುರ-ಹೌರ ರೈಲು ಹಾಗೂ ಗೂಡ್ಸ್ ರೈಲು ಮುಖಾಮುಖಿ ಡಿಕ್ಕಿಯಾಗಿದ್ದವು. ಒಡಿಶಾದ ಬಾಲಾಸೋರ್ ಜಿಲ್ಲೆಯ ಬಹನಗ ರೈಲು ನಿಲ್ದಾಣದ ಬಳಿ ಈ ಅಪಘಾತ ಸಂಭವಿಸಿತು. 12841 ಎಕ್ಸ್ಪ್ರೆಸ್ ರೈಲು ಡಿಕ್ಕಿಯಾದ ರಭಸಕ್ಕೆ ಪ್ರಯಾಣಿಕರಿದ್ದ ರೈಲಿನ ಹಲವು ಬೋಗಿಗಳು ಹಳಿ ತಪ್ಪಿ, ಭೀಕರ ಅಪಘಾತದಲ್ಲಿ ಹಲವರು ಮೃತಪಟ್ಟಿದ್ದಾರೆ. ಇದನ್ನೂ ಓದಿ:ಶಕುನಿ ಪಾತ್ರಧಾರಿ ಗೂಫಿ ಆರೋಗ್ಯ ಸ್ಥಿತಿ ಗಂಭೀರ
ಪಶ್ಚಿಮ ಬಂಗಾಳದ ಶಾಲಿಮಾರ್ ರೈಲು ನಿಲ್ದಾಣದಿಂದ ಚೆನ್ನೈಗೆ ಆಗಮಿಸುತ್ತಿದ್ದ ಈ ರೈಲು ಒಡಿಶಾದಲ್ಲಿ ಯಶವಂತಪುರ ಪ್ಯಾಸೆಂಜರ್ ರೈಲು ಹಾಗೂ ಸರಕು ಸಾಗಾಣೆ ರೈಲಿಗೆ ಡಿಕ್ಕಿ ಹೊಡೆದಿತ್ತು. ಕ್ಷಣ ಕ್ಷಣಕ್ಕೂ ಸಾವಿನ ಸಂಖ್ಯೆ ಹೆಚ್ಚುತ್ತಿದೆ. ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ 10 ಲಕ್ಷ ರೂ, ಗಂಭೀರ ಗಾಯಗೊಂಡವರಿಗೆ 2 ಲಕ್ಷ ರೂ. ಹಾಗೂ ಸಣ್ಣ ಗಾಯಗಳಾದ ಪ್ರಯಾಣಿಕರಿಗೆ 50,000 ರೂ. ಪರಿಹಾರವನ್ನು ರೈಲ್ವೇ ಇಲಾಖೆ ಘೋಷಿಸಿದೆ.
ಅಪಘಾತದ ಸ್ಥಳದಲ್ಲಿ ರಕ್ಷಣಾ ತಂಡಗಳು ಬೀಡುಬಿಟ್ಟಿದ್ದು, ರಕ್ಷಣಾ ಕಾರ್ಯ ಸಮರೋಪಾದಿಯಲ್ಲಿ ನಡೆಯುತ್ತಿದೆ. 3 ಎನ್ಡಿಆರ್ಎಫ್, 4 ಎಸ್ಡಿಆರ್ಎಫ್, ಅಗ್ನಿಶಾಮಕ ದಳದ ಸಿಬ್ಬಂದಿಗಳಿಂದ ರಕ್ಷಣಾ ಕಾರ್ಯ ನಡೆಯುತ್ತಿದೆ. ಘಟನಾ ಸ್ಥಳದಲ್ಲಿ 50 ಅಂಬುಲೆನ್ಸ್ಗಳು ನಿರಂತರ ಓಡಾಟ ಮಾಡುತ್ತಿವೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗಳಿಗೆ ರವಾನಿಸಲಾಗಿದೆ. ಸ್ಥಳೀಯ ಜನ ಕೂಡ ರಕ್ಷಣಾ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ. ಒಡಿಶಾ ರೈಲು ಅಪಘಾತ ಸಹಾಯವಾಣಿ ಆರಂಭಿಸಲಾಗಿದೆ. ಗಾಯಾಳುಗಳು, ಮೃತಪಟ್ಟವರ ಮಾಹಿತಿ ಪಡೆಯಲು ಸಹಾಯವಾಣಿ ಸ್ಥಾಪನೆ ಮಾಡಲಾಗಿದೆ.