ಹೈದರಾಬಾದ್: ಗಾಂಜಾ ವ್ಯಸನಿಯಾಗಿದ್ದ 15 ವರ್ಷದ ಮಗನನ್ನು ತಾಯಿಯೊಬ್ಬಳು ಕಂಬಕ್ಕೆ ಕಟ್ಟಿ, ಆತನಿಗೆ ಹಿಗ್ಗಾಮುಗ್ಗ ಥಳಿಸಿ, ಮುಖಕ್ಕೆ ಮೆಣಸಿನ ಪುಡಿ ಹಚ್ಚಿರುವ ಘಟನೆ ತೆಲಂಗಾಣದ ನಲ್ಗೊಂಡ ಜಿಲ್ಲೆಯಲ್ಲಿ ನಡೆದಿದೆ.
ಮಗ ಗಾಂಜಾ ವ್ಯಸನಿಯಾಗಿರುವುದನ್ನು ನೋಡಿ ಸಹಿಸಲಾಗದೇ ತಾಯಿ ಹುಡುಗನಿಗೆ ಥಳಿಸಿ ಮುಖಕ್ಕೆ ಮೆಣಸಿನಕಾಯಿ ಪುಡಿ ಹಚ್ಚಿದ್ದಾರೆ. ಒಂದು ವರ್ಷದೊಳಗೆ ಗಾಂಜಾ ಸೇವಸಿವುದನ್ನು ಬಿಡುವುದಾಗಿ ಭರವಸೆ ನೀಡಿದ ಬಳಿಕ ಆತನನ್ನು ಬಿಟ್ಟಿದ್ದಾರೆ. ಇದೀಗ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: ಮನೆಯಲ್ಲಿ ನಿಲ್ಲಿಸಿದ್ದ ಕಾರುಗಳಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಕಿಡಿಗೇಡಿ
Advertisement
Advertisement
ದಿನಗೂಲಿ ಕೆಲಸ ಮಾಡುತ್ತಿದ್ದ ರಮಣ ಅವರು ಆರಂಭದಲ್ಲಿ ಮಗನಿಗೆ ಗಾಂಜಾ ಸೇವನೆ ಬಿಡುವಂತೆ ಕೇಳಿಕೊಂಡಿದ್ದಾರೆ. ಆದರೆ ಎಲ್ಲ ಪ್ರಯತ್ನಗಳು ವ್ಯರ್ಥವಾಯಿತು. ಕೊನೆಗೆ ಮಗನಿಗೆ ತಕ್ಕ ಪಾಠ ಕಲಿಸಬೇಕು ಎಂದು ನಿರ್ಧರಿಸಿ, ತಮ್ಮ ಮಗನನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿ ಆತನ ಕಣ್ಣಿಗೆ ಮೆಣಸಿನಕಾಯಿಯ ಪುಡಿ ಎರಚಿ ಶಿಕ್ಷಿಸಿದ್ದಾರೆ.
Advertisement
Advertisement
ಇತ್ತೀಚಿನ ದಿನಗಳಲ್ಲಿ ತೆಲಂಗಾಣದಲ್ಲಿ ಡ್ರಗ್ಸ್ ಹಾವಳಿ ಹೆಚ್ಚಾಗಿದ್ದು, ರಾಜ್ಯದಲ್ಲಿ ಮಾದಕ ವ್ಯಸನ ಮತ್ತು ಮಾದಕ ವಸ್ತುಗಳ ಸೇವನೆಗೆ ಕಡಿವಾಣ ಹಾಕುವಂತೆ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇದನ್ನೂ ಓದಿ: ಮೈಸೂರಿನಿಂದ ಬಂದ ರಾಯಲ್ ಎನ್‍ಫೀಲ್ಡ್ ಆಂಧ್ರದಲ್ಲಿ ಸ್ಫೋಟ
ಇತ್ತೀಚೆಗಷ್ಟೇ ಬಿಟೆಕ್ ವಿದ್ಯಾರ್ಥಿಯೊಬ್ಬ ಡ್ರಗ್ಸ್ ಸೇವನೆಯಿಂದ ಸಾವನ್ನಪ್ಪಿದ್ದು, ಈ ಬೆನ್ನಲ್ಲೇ ಈ ವಾರದ ಆರಂಭದಲ್ಲಿ ಹೈದರಾಬಾದ್ ಪೊಲೀಸರು ಸ್ಟಾರ್ ಹೋಟೆಲ್‍ನಲ್ಲಿ ರೇವ್ ಪಾರ್ಟಿಯಲ್ಲಿ ಭಾಗವಹಿಸಿದ್ದಕ್ಕಾಗಿ ಹೈ-ಪ್ರೊಫೈಲ್ ಕುಟುಂಬಗಳಿಗೆ ಸೇರಿದ ಸುಮಾರು 150 ಜನರನ್ನು ಬಂಧಿಸಿದ್ದಾರೆ.