ಹೈದರಾಬಾದ್: ಪತ್ನಿಗಾಗಿ ಪರ್ವತವನ್ನೇ ಒಡೆದು ರಸ್ತೆ ನಿರ್ಮಿಸಿದ ಬಿಹಾರದ ದಶರಥ್ ಅವರ ಬಗ್ಗೆ ಎಲ್ಲರಿಗೂ ತಿಳಿದ ಸಂಗತಿ. ಈಗ ಪತ್ನಿಯ ಮೇಲಿನ ಪ್ರೀತಿಗಾಗಿ ತೆಲಂಗಾಣ ವ್ಯಕ್ತಿಯೊಬ್ಬರು ಪತ್ನಿಗಾಗಿ ದೇವಾಲಯವನ್ನೇ ನಿರ್ಮಿಸಿ ಸುದ್ದಿಯಾಗಿದ್ದಾರೆ.
ಚಂದ್ರ ಗೌಡ ಎಂಬವರು ಪತ್ನಿಗಾಗಿ ದೇವಾಲಯ ನಿರ್ಮಿಸಿದ್ದಾರೆ. ನಿವೃತ್ತ ಸರ್ಕಾರಿ ಅಧಿಕಾರಿಯಾಗಿರುವ ಇವರು ಮೃತ ಪತ್ನಿ ರಾಜಮಣಿ ಅವರಿಗಾಗಿ ದೇವಾಲಯವನ್ನು ನಿರ್ಮಿಸಿದ್ದಾರೆ.
ತೆಲಂಗಾಣದ ಸಿದ್ದಿಪೇಟ್ ಜಿಲ್ಲೆಯ ಗೋಸನಪಲ್ಲಿ ಗ್ರಾಮದ ತನ್ನ ಜಮೀನಿನಲ್ಲಿ ಪತ್ನಿಯ ವಿಗ್ರಹ ಸ್ಥಾಪಿಸಿ ಚಂದ್ರ ಅವರು ದೇವಾಲಯ ನಿರ್ಮಿಸಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ರಾಜಮಣಿ ಅವರು ಅನಾರೋಗ್ಯದ ಸಮಸ್ಯೆಯಿಂದ ಮೃತಪಟ್ಟಿದ್ದರು. ಪತ್ನಿಯ ಮೇಲಿನ ಪ್ರೀತಿಯ ನೆನಪಿಗಾಗಿ ಈ ದೇವಾಲಯ ನಿರ್ಮಿಸಿದ್ದಾಗಿ ಚಂದ್ರ ಅವರು ತಿಳಿಸಿದ್ದಾರೆ.
ಭಾರತದ ಭವ್ಯ ಇತಿಹಾಸದಲ್ಲಿ ಪತ್ನಿ ಮಮ್ತಾಜ್ ಮೇಲಿನ ಪ್ರೀತಿಗೆ ತಾಜ್ ಮಹಲ್ ನಿಮಿಸಿದ್ದು, ಈಗ ಪ್ರೇಮಿಗಳ ಸ್ಮಾರಕವಾಗಿದೆ. ಸದ್ಯ ಚಂದ್ರ ಅವರು ಪತ್ನಿಯ ಮೇಲಿನ ಪ್ರೀತಿಗಾಗಿ ದೇವಾಲಯ ನಿರ್ಮಿಸಿದ್ದನ್ನು ಕಂಡ ಹಲವು ಮಂದಿ ಮೆಚ್ಚುಗೆ ಸೂಚಿಸಿದ್ದಾರೆ.