– ಅತಂತ್ರವಾದ್ರೆ ಟಿಆರ್ ಎಸ್‍ಗೆ ಬಿಜೆಪಿ ಬೆಂಬಲ..?
ಹೈದರಾಬಾದ್: ಭಾರೀ ಕುತೂಹಲ ಪಡೆದಿರುವ ತೆಲಂಗಾಣದಲ್ಲಿ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ನೇತೃತ್ವದ ತೆಲಂಗಾಣ ರಾಷ್ಟ್ರ ಸಮಿತಿ ಹಾಗೂ ಕಾಂಗ್ರೆಸ್ ಮೈತ್ರಿಕೂಟದ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ.
ಸರಳ ಬಹುಮತಕ್ಕೆ 60 ಸೀಟುಗಳ ಅವಶ್ಯಕತೆ ಇದ್ದು, ಕಳೆದ ಬಾರಿಯ ಚುನಾವಣೆಯಲ್ಲಿ ಟಿಆರ್‍ಎಸ್ 63 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ ಅಧಿಕಾರದ ಚುಕ್ಕಾಣಿ ಹಿಡಿದಿತ್ತು. ಈ ಬಾರಿ ಟಿಆರ್ ಎಸ್ ನೂರಕ್ಕೂ ಅಧಿಕ ಕ್ಷೇತ್ರಗಳನ್ನು ಗೆಲ್ಲುವ ವಿಶ್ವಾಸ ಹೊಂದಿದೆ. ತೆಲುಗು ನಾಡಿನ ನೂತನ ರಾಜ್ಯ ರಚನೆಯಾದ ಬಳಿಕ ನಡೆಯುತ್ತಿರುವ ಪ್ರಥಮ ಚುನಾವಣೆಯ ರಣಕಣದಲ್ಲಿ ಕೆಲ ದಿಗ್ಗಜರು ಸ್ಪರ್ಧಿಸಿದ್ದಾರೆ.
ಅವಧಿಗೂ ಮುನ್ನ ವಿಧಾನಸಭೆ ವಿಸರ್ಜಿಸಿದ ಕೆ.ಚಂದ್ರಶೇಖರ ರಾವ್ ಗಜ್ವಾಲ್ ಕೇತ್ರದಿಂದ ಸ್ಪರ್ಧಿಸಿದ್ದು, ಪುತ್ರ ಕೆ.ಟಿ.ರಾಮ ರಾವ್ ಸಿರ್ಸಿಲಾ ಕೇತ್ರದಿಂದ ಮೂರನೇ ಬಾರಿಗೆ ಆಯ್ಕೆ ಬಯಸಿದ್ದಾರೆ. ಅಬ್ಬರದ ಭಾಷಣದ ಮೂಲಕ ತೆಲುಗು ಜನರನ್ನು ಹುಚ್ಚೆಬ್ಬಿಸಿದ್ದ ಎಐಎಂಐಎಂ ಪಕ್ಷದ ಅಕ್ಬರುದ್ದೀನ್ ಒವೈಸಿ ಚಂದ್ರಯಾನಗುಟ್ಟ ಕ್ಷೇತ್ರದಿಂದ ಗೆಲ್ಲುವ ತವಕದಲ್ಲಿದ್ದಾರೆ.
ತೆಲಂಗಾಣ ವಿಧಾನಸಭೆಯಲ್ಲಿ 119 ಒಟ್ಟು ಕ್ಷೇತ್ರಗಳಿದ್ದು, ಅದರಲ್ಲಿ 60 ಕ್ಷೇತ್ರಗಳಲ್ಲಿ ಜಯಗಳಿಸಿದ ಪಕ್ಷ ಅಧಿಕಾರ ಹಿಡಿಯುತ್ತದೆ. 2014ರ ತೆಲಂಗಾಣ ಚುನಾವಣಾ ಫಲಿತಾಂಶದಲ್ಲಿ ಟಿಆರ್‍ಎಸ್ ಶೇ. 34.3, ಕಾಂಗ್ರೆಸ್ ಶೇ. 25.2, ಟಿಡಿಪಿ ಶೇ.14.7, ಎಂಐಎಂ ಶೇ.3.8, ಬಿಜೆಪಿ ಶೇ. 7.1 ಹಾಗೂ ಇತರೆ ಶೇ. 14.9 ಮತ ಗಳಿಸಿದ್ದವು.
ತೆಲಂಗಾಣ ಚುನಾವಣೆಯಲ್ಲಿ ಯಾರಿಗೆ ಪ್ಲಸ್? ಯಾರಿಗೆ ಮೈನಸ್?
ಲೋಕಸಭೆ ಚುನಾವಣೆ ವೇಳೆಯೇ ತೆಲಂಗಾಣ ವಿಧಾನಸಭೆ ಅವಧಿ ಮುಕ್ತಾಯ ಆಗಬೇಕಿತ್ತು. ಆದರೆ ಅವಧಿಗೂ ಮೊದಲೇ ಚುನಾವಣೆ ನಡೆದಿದೆ. ತೆಲಂಗಾಣದಲ್ಲಿ ಮಹಾಕೂಟಮಿ ರಚನೆ ಬಳಿಕ ಪರಿಸ್ಥಿತಿ ಬದಲಾಗಿದೆ. ಬದ್ಧವೈರಿಗಳಾಗಿದ್ದ ಕಾಂಗ್ರೆಸ್-ಟಿಡಿಪಿ ಮೈತ್ರಿ, ಪ್ರತ್ಯೇಕ ತೆಲಂಗಾಣ ರಚನೆಯಲ್ಲಿ ಪ್ರಮುಖವಾಗಿದ್ದ ಟಿಜೆಎಸ್, ಸಿಪಿಐಎಂ ಜೊತೆ ಸೇರಿತ್ತು. ದಕ್ಷಿಣ ತೆಲಂಗಾಣದಲ್ಲಿ ಕಾಂಗ್ರೆಸ್, ಖಮ್ಮಂ, ರಂಗಾರೆಡ್ಡಿ ಜಿಲ್ಲೆಗಳಲ್ಲಿ ಟಿಡಿಪಿ ಪ್ರಾಬಲ್ಯ ಪಡೆದಿದೆ.
ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ವಿರುದ್ಧ ಕೌಟುಂಬಿಕ ದುರಹಂಕಾರ ಎಂಬ ಹಣೆಪಟ್ಟಿ ಹಾಕಲಾಗಿದೆ. ತೆಲಂಗಾಣ ಹೋರಾಟದಲ್ಲಿ ಭಾಗಿಯಾಗಿದ್ದ ವಿದ್ಯಾರ್ಥಿ ಸಂಘಟನೆಗಳನ್ನು ಅಧಿಕಾರ ಕಡೆಗಣನೆ ಮಾಡಿದ್ದಾರೆಂಬ ಆರೋಪ ಎದುರಾಗಿತ್ತು. ತೆಲಂಗಾಣ ರಚನೆಗೆ ನಾವೇ ಕಾರಣ ಎಂದು ಕಾಂಗ್ರೆಸ್ ವಾದ ಮಂಡನೆ ಮಾಡಿತ್ತು. ಸ್ಥಳೀಯ ಮಟ್ಟದಲ್ಲಿ ಟಿಆರ್‍ಎಸ್ ಶಾಸಕರ ವಿರುದ್ಧ ಜನಾಭಿಪ್ರಾಯ ಇದೆ ಅನ್ನೋ ಅಭಿಪ್ರಾಯ ವ್ಯಕ್ತವಾಗಿತ್ತು.
ಕಲ್ಯಾಣ ಕಾರ್ಯಕ್ರಮ (ರೈತರ ಸಾಲ ಮನ್ನಾ, ಉಚಿತ ಮನೆ ನಿರ್ಮಾಣ, ರೈತರಿಗೆ ನಗದು ನೆರವು) ಗಳಿಂದ ಕೆಸಿಆರ್ ಮತ್ತೆ ಅಧಿಕಾರ ಹಿಡಿಯಲಿದ್ದಾರೆ ಅನ್ನೋ ನಿರೀಕ್ಷೆ ಇದೆ. ಯುವಕರಿಗೆ ಉದ್ಯೋಗ ಸೃಷ್ಟಿ ಸೇರಿದಂತೆ ಟಿಆರ್‍ಎಸ್ ಮಾಡಿದ್ದ ಭರವಸೆ ಈಡೇರಿಸಿಲ್ಲ. ಟಿಆರ್‍ಎಸ್ ಬಿಜೆಪಿಯ ಬಿ ಟೀಮ್ ಎಂಬುದು ರಾಹುಲ್ ಗಾಂಧಿ ಆರೋಪ ಮಾಡಿದ್ದರು. ಅಲ್ಲದೇ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ 2 ಲಕ್ಷ ರೂಪಾಯಿವರೆಗೆ ರೈತರ ಸಾಲ ಮನ್ನಾ ಭರವಸೆ ಕೊಟ್ಟಿದೆ. ದೇವಸ್ಥಾನ, ಮಸೀದಿಗಳಿಗೆ ಕಾಂಗ್ರೆಸ್‍ನಿಂದ ಉಚಿತ ವಿದ್ಯುತ್ ಸಂಪರ್ಕ, ಅರ್ಚಕರಿಗೆ ಅಪಘಾತ ವಿಮೆ ಭರವಸೆ ನೀಡಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv