ಬೆಂಗಳೂರು: ಮದುವೆ ವೇಳೆ ಕಾರಿಗಾಗಿ ಬಿಜೆಪಿ ಸಂಸದ ಪತ್ರ ಬರೆದಿದ್ದರು ಎಂಬ ಡಿ.ಕೆ.ಶಿವಕುಮಾರ್ (D.K.Shivakumar) ಹೇಳಿಕೆಯನ್ನು ತೇಜಸ್ವಿ ಸೂರ್ಯ (Tejasvi Surya) ಅಲ್ಲಗಳೆದಿದ್ದಾರೆ. ಕ್ಷೇತ್ರದ ಕೆಲಸಕ್ಕೆ ಓಡಾಡಲು ಕಾರು ಬೇಕು ಅಂತ ಕೇಳಿದ್ದೆ ಎಂದು ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಒಂದು ವರ್ಷದ ಹಿಂದೆ ಸರ್ಕಾರದ ಕಾರ್ಯದರ್ಶಿಗೆ ಪತ್ರ ಬರೆದಿದ್ದೆ. ಹಿಂದೆ ನನಗೆ ಕೊಟ್ಟಿದ್ದ ಕಾರು ಒಂದು ಲಕ್ಷ ಓಡಿದೆ. ಕ್ಷೇತ್ರ ಕೆಲಸಕ್ಕೆ ಓಡಾಡಲು ಕಾರು ಬೇಕಿದೆ ಅಂತ ಕೇಳಿದ್ದೆ. ಅದನ್ನ ಬಿಟ್ಟು ನನಗೆ ಯಾರು ಹೆಣ್ಣು ಕೊಡಲ್ಲ, ಕಾರು ಕೊಡಿ ಅಂತ ಕೇಳಿಲ್ಲ. ಇದು ಎಲ್ಲಾ ಸಂಸದರಿಗೂ ಕೊಡಬೇಕಿರೋ ನಿಯಮ. ಈ ಪತ್ರವನ್ನ ಬಿಡುಗಡೆ ಮಾಡುತ್ತೇನೆಂದು ಹೇಳಿದ್ದರು. ನಾನೇ ರಿಲೀಸ್ ಮಾಡುತ್ತಿದ್ದೇನೆ ಎಂದು ತೇಜಸ್ವಿ ಸೂರ್ಯ ತಿರುಗೇಟು ನೀಡಿದರು. ಇದನ್ನೂ ಓದಿ: ಮದುವೆ ಆಗ್ತೀನಿ, ಹೊಸ ಕಾರು ಬೇಕು ಅಂತಾ ಲೆಟರ್ ಕೊಟ್ಟಿದ್ದ: ತೇಜಸ್ವಿ ಸೂರ್ಯ ವಿರುದ್ಧ ಡಿಕೆಶಿ ವ್ಯಂಗ್ಯ
ಟೆಕ್ನಿಕಲ್ ವಿಚಾರಗಳ ಬಗ್ಗೆ ಡಿಕೆ ಮಾತನಾಡಲ್ಲ. ವೈಯಕ್ತಿಕ ನಿಂದನೆ ಆಗುವ ಕೆಲಸ ಆಗ್ತಿದೆ. ಮದುವೆ ಆಗ್ತೀನಿ ಅಂತ ಕಾರು ಕೇಳಿಲ್ಲ. ಒಂದು ಲಕ್ಷ ಕಿಮೀ ಕಾರು ಕಂಪ್ಲೀಟ್ ಆಗಿದೆ. ಆ ಕಾರಣಕ್ಕಾಗಿ ನಾನು ಕಾರು ಕೇಳಿದ್ದೆ. ಕಾರಿಗೆ ಎಲಿಜಿಬಿಲಿಟಿ ಮದುವೆ ವಿಚಾರ ಅಲ್ಲ. ಸಾಗರ್ ಖಂಡ್ರೆಯಂತಹ ಬ್ಯಾಚುಲರ್‌ಗೆ ಕೂಡ ಕಾರು ಕೊಟ್ಟಿದ್ದಾರೆ. ಕಾನೂನು ಪ್ರಕಾರ ಕೊಡಲು ಅವಕಾಶ ಇದೆ ಎಂದರು.
ನನ್ನ ಮೇಲೆ ವೈಯಕ್ತಿಕ ಟೀಕೆ ಮಾಡುತ್ತಿದ್ದಾರೆ. ಬೇರೆ ಯಾವ ಉತ್ತರ ಕೊಡುತ್ತಿಲ್ಲ. ಟನಲ್‌ನಲ್ಲಿ ದ್ವಿಚಕ್ರ ವಾಹನ, ಆಟೋಗಳಿಗೆ ಅವಕಾಶ ಇಲ್ಲ. ಟ್ಯಾಕ್ಸ್ ಕಟ್ಟುವವರನ್ನ ಒಳಬಿಡಲ್ಲ ಅಂದರೆ ಇದು ಆರ್ಥಿಕ ಅಸ್ಪೃಶ್ಯತೆ ಅಲ್ವಾ? ಇದು ಸರಿಯಲ್ಲ. ಟನಲ್ ರೋಡ್‌ನಲ್ಲಿ ಗಂಟೆಗೆ 1,800 ಜನ ಓಡಾಡಬಹುದು. ಆದರೆ, ಮೆಟ್ರೋ ಮಾಡಿದ್ರೆ 60 ಸಾವಿರ ಜನ ಓಡಾಡಬಹುದು. ಟನಲ್‌ನಿಂದ 20 ಕಂನ್ಜೆಕ್ಷನ್ ಪಾಯಿಂಟ್ ಆಗಬಹುದು ಅಂತ ವರದಿ ಇದೆ. ಸರ್ವೆಗಳಾಗದೇ ಟೆಂಡರ್ ಕರೆದಿದ್ದೀರಾ? ನಿಮ್ಮದೇ ಡಿಪಿಆರ್‌ನಲ್ಲಿ 2031 ಕ್ಕೆ ಪೂರ್ಣಗೊಳ್ಳುತ್ತೆ ಅಂತ ಇದೆ. ಈಜೀಪುರ ಸೇತುವೆ ಗುಂಡಿಗಳನ್ನೇ ಹೇಳಿದ ಸಮಯಕ್ಕೆ ಮುಚ್ಚೋಕೆ ಆಗಿಲ್ಲ. ಡಿಪಿಆರ್ 2031ಕ್ಕೆ 12 ನಿಮಿಷ, 2041 ಕ್ಕೆ 14 ನಿಮಿಷ ಉಳಿಯಲಿದೆ ಅಂತಾರೆ ಎಂದು ವಾಗ್ದಾಳಿ ನಡೆಸಿದರು.
ಬೆಂಗಳೂರು ಮೆಟ್ರೋ ದರ ಏರಿಕೆ ಮಾಡಿದೆ. ನಿತ್ಯ 10 ಲಕ್ಷ ಜನರ ಓಡಾಟ ಇದೆ. ದೇಶದಲ್ಲಿ ಹೆಚ್ಚು ದರ ಪರಿಷ್ಕರಣೆ ನಮ್ಮ ಮೆಟ್ರೋದಲ್ಲಿ ಅನ್ನೋ ಬೇಸರ ಇದೆ. ಮಧ್ಯಮ ವರ್ಗ, ದೂರ ಪ್ರಯಾಣಕ್ಕೆ ಹೋಗಲು ಸಮಸ್ಯೆ ಆಗುತ್ತಿದೆ. ಗಂಡ-ಹೆಂಡತಿ ಹೋದರೆ 220 ರೂ. ಸರಾಸರಿ ಖರ್ಚಗುತ್ತಿದೆ. ಫೇರ್ ಫಿಕ್ಸೇಶನ್ ಕಮಿಟಿ, ಬಿಎಂಆರ್‌ಸಿಎಲ್ ದರ ನಿಗದಿಯಲ್ಲಿ ಸಮಸ್ಯೆ ಇದೆ ಎಂದು ಹಲವು ತಜ್ಞರು ಹೇಳಿದ್ರು. ಅದರಂತೆ ಇಂದು ಮಾತುಕತೆ ಮಾಡಿದ್ದೇವೆ. ಕಮಿಟಿ ದರ ಪರಿಷ್ಕರಣೆ ಮುಂಚೆ ಎಲೆಕ್ಟ್ರಿಸಿಟಿ, ನಿರ್ವಹಣೆ ಎಲ್ಲಾ ಸೇರಿ ಒಂದು ಫಾರ್ಮುಲಾ ಮಾಡಿ ರೆಡಿ ಮಾಡಿದ್ದಾರೆ. 2016-17 ಬೇಸ್ ವರ್ಷವಾಗಿ ಪರಿಗಣನೆ ಮಾಡಿದ್ದಾರೆ. ಆದರೆ, 2017-18 ವರ್ಷ ಬೇಸ್ ಆಗಿ ತೆಗೆದುಕೊಳ್ಳಬೇಕಿತ್ತು. ಇದರಿಂದ ಸಮಸ್ಯೆ ಆಗಿದೆ. ಫೇರ್ ಫಿಕ್ಸೇಶನ್ ಕಮಿಟಿ ಪ್ರಕಾರ ಹಿಂದಿನ ದರ ನಿಗದಿ ವರ್ಷದ ಆಧಾರವಾಗಿ ತೆಗೆದುಕೊಳ್ಳಬೇಕಿತ್ತು. ಈ ಬಗ್ಗೆ ಪರಿಶೀಲನೆಗೆ ಸಮಯ ತೆಗೆದುಕೊಂಡಿದ್ದಾರೆ. 2016-17 ವರ್ಷ ಪರಿಗಣನೆ ತೆಗೆದುಕೊಂಡಿರುವುದರಿಂದ ಜನರಿಗೆ ಹೊರೆ ಆಗುತ್ತಿದೆ. ಮುಂದಿನ ಫೆಬ್ರವರಿಗೆ 5% ರಷ್ಟು ದರ ಏರಿಕೆ ಆಗಲಿದೆ. ರಾಜ್ಯ ಸರ್ಕಾರ ಎಲ್ಲಾ ಅಂಶ ಪರಿಗಣಿಸಿ, ಬಿಎಂಆರ್‌ಸಿಎಲ್‌ಗೆ ರಿವಿಷನ್ ಮಾಡಿಸಬೇಕು. ದೆಹಲಿಯಲ್ಲಿ 0-10 ಕಿ.ಮೀ 10 ರೂ., 0-2 ಕಿ.ಮೀ 11 ರೂ., 2-5 ಕಿ.ಮೀ 21 ರೂ. ಇದೆ ಎಂದು ತಿಳಿಸಿದರು. ಇದನ್ನೂ ಓದಿ: ಕಾರಿಲ್ಲ ಅಂದ್ರೆ ಹೆಣ್ಣು ಕೊಡಲ್ಲ ಅಂತ ಟನಲ್ ರಸ್ತೆ ಮಾಡೋಕೆ ಡಿಕೆಶಿ ಹೊರಟಿದ್ದಾರೆ: ತೇಜಸ್ವಿ ಸೂರ್ಯ ವಾಗ್ದಾಳಿ
12-15 ಕಿ.ಮೀ ಹೆಚ್ಚು ಜನ ಬೆಂಗಳೂರಿನಲ್ಲಿ ಓಡಾಟ ಮಾಡುತ್ತಾರೆ. ದೆಹಲಿಯಲ್ಲಿ 5-12 ಕಿ.ಮೀ 30 ರೂ. ಬೆಂಗಳೂರಿನಲ್ಲಿ ಇಷ್ಟೇ ದೂರಕ್ಕೆ 50 ರೂ ಇದೆ. ಬೆಂಗಳೂರಿನಲ್ಲಿ 20-25 ಕಿ.ಮೀಗೆ 80 ರೂ., ದೆಹಲಿಯಲ್ಲಿ 20 ಕಿ.ಮೀ ಎಷ್ಟೇ ದೂರ ಹೋದರೂ 60 ರೂ., ಮುಂಬೈನಲ್ಲಿ 12-18 ಕಿ.ಮೀಗೆ 30 ರೂ., ಬೆಂಗಳೂರು 12-16 ಕಿ.ಮೀಗೆ 60 ರೂ., ಮುಂಬೈ 36-42 ಕಿ.ಮೀಗೆ 70 ರೂ., ಬೆಂಗಳೂರು 25-30 ಕಿ.ಮೀಗೆ 90 ರೂ ಇದೆ. ಕೇಂದ್ರ ಇದನ್ನ ಹೆಚ್ಚು ಮಾಡುವಂತಿದ್ದರೆ ಇತರೆ ನಗರಗಳಲ್ಲೂ ಹೆಚ್ಚಾಗಬೇಕಿತ್ತು. ಹಾಗಾಗಿ, ರಾಜ್ಯ ಸರ್ಕಾರ ಈ ಬಗ್ಗೆ ಬಿಎಂಆರ್‌ಸಿಎಲ್ ಜೊತೆ ಮಾತುಕತೆ ಮಾಡಬೇಕು ಎಂದು ಒತ್ತಾಯಿಸಿದರು.
ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ನಿರ್ದೇಶನ ಕೊಟ್ಟರೆ ಅವಕಾಶ ಇದೆ. ಈ ಬಗ್ಗೆ ರಾಜ್ಯ ಸರ್ಕಾರ ಯೋಚನೆ ಮಾಡಬೇಕು. ಬಿಎಂಆರ್‌ಸಿಎಲ್ ನಿರ್ವಹಣೆ ಮಾಡುತ್ತಿರೋದು ರಾಜ್ಯ ಸರ್ಕಾರ. ಎಂಡಿ ನೇಮಕ, ಆಪರೇಷನ್ ಈ ಬಗ್ಗೆ ನಿರ್ವಹಣೆ ರಾಜ್ಯ ಸರ್ಕಾರ ಜವಾಬ್ದಾರಿ. ಹಾಗಾಗಿ, ಸರ್ಕಾರ ಕೂಡಲೇ ಉತ್ತರ ಕೊಡಬೇಕು. ಇತರೆ ರಾಜ್ಯಗಳಿಗೆ ಇಲ್ಲದ ದರ ಏರಿಕೆ ಕರ್ನಾಟಕಕ್ಕೆ ಏಕೆ ಎಂಬ ಪ್ರಶ್ನೆಗೆ ರಾಜ್ಯ ಸರ್ಕಾರ ಉತ್ತರ ಕೊಡಬೇಕು ಎಂದು ಆಗ್ರಹಿಸಿದರು.
ಯೆಲ್ಲೋ ಲೈನ್‌ನಲ್ಲಿ 37% ಟ್ರಾಫಿಕ್ ಕಡಿಮೆ ಆಗಿದೆ ಅಂತ ನೀವೇ ಹೇಳುತ್ತೀರಾ. ಹೀಗಿದ್ದರೂ ಟನಲ್‌ಗೆ ಯಾಕೆ ಬೆಂಬಲ ಕೊಡುತ್ತಿದ್ದೀರಾ? ಡಿಪಿಆರ್ ಪ್ರಕಾರ ಮುಂದೆ ಈಗಿನ ಖರ್ಚಿಗಿಂತ 25% ಹೆಚ್ಚಳ ಆಗಲಿದೆ. ಕೇಂದ್ರ ಸರ್ಕಾರ ಅಟಲ್ ಟನಲ್‌ಗೆ 9 ಕಿಮೀ 3200 ಕೋಟಿಯಲ್ಲಿ ಮಾಡಿದ್ದಾರೆ. ಇಲ್ಲಿ ಯಾವ ಪರ್ವತ ಇದೆ ಕಿ.ಮೀಗೆ 1050 ಕೋಟಿ ಖರ್ಚು ಮಾಡುತ್ತಿದ್ದೀರಿ. ಇಲ್ಲಿ ಯಾರ ವೈಯಕ್ತಿಕ ಟೀಕೆ ಇಲ್ಲ. ಇಲ್ಲಿ ಮದುವೆ, ಎಳಸು ಚರ್ಚೆ ಬದಲು ಈ ಪ್ರಶ್ನೆಗಳಿಗೆ ಉತ್ತರ ಕೊಡಿ. ಆದಷ್ಟು ಬೇಗ ಸಮಿತಿ ರಚನೆ ಮಾಡಲಿ. ನಾನು ಅದಕ್ಕೆ ಕಾಯಿತ್ತಿದ್ದೇನೆ ಎಂದರು.


