ಭೋಪಾಲ್: ಮೊಬೈಲ್ ಖರೀದಿ ಮಾಡಿದ್ದಕ್ಕೆ ತಾಯಿ ಬೈದರೆಂದು ಮನನೊಂದ 18 ವರ್ಷದ ಯುವತಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಧ್ಯಪ್ರದೇಶದ ಉಮರ್ವಾಡಾ ಗ್ರಾಮದಲ್ಲಿ ನಡೆದಿದೆ.
ಸೋಮವಾರ ಬೆಳಗ್ಗೆ ಯುವತಿ ನೇಣಿಗೆ ಶರಣಾಗಿದ್ದು, ಬೆಳಗ್ಗೆ ಆಕೆಯ ಸಹೋದರ ಮನೆಗೆ ಬಂದು ನೋಡಿದಾಗ ಬೆಳಕಿಗೆ ಬಂದಿರುವುದಾಗಿ ಇಂದು ಬರ್ಘಟ್ ಪೊಲೀಸ್ ಠಾಣೆಯ ಸಂತೋಷ್ ಧ್ರುವೆ ಅವರು ತಿಳಿಸಿದ್ದಾರೆ.
ಆತ್ಮಹತ್ಯೆಗೂ ಮುನ್ನ ಯುವತಿ ಡೆತ್ ನೋಟ್ ಬರೆದಿದ್ದು, ಅದರಲ್ಲಿ ನಡೆದ ಘಟನೆಯ ಬಗ್ಗೆ ಕ್ಷಮಿಸುವಂತೆ ಅಮ್ಮನಲ್ಲಿ ಕೇಳಿಕೊಂಡಿದ್ದಾಳೆ. ಈ ಪತ್ರ ಇದೀಗ ಪೊಲೀಸರಿಗೆ ಸಿಕ್ಕಿದೆ.
ಮೃತ ಯುವತಿಯ ತಾಯಿ ಕಾರ್ಮಿಕರಾಗಿದ್ದು, ನಾನು ಲೋನ್ ಕಟ್ಟಲೆಂದು ತೆಗೆದು ಇಟ್ಟಿದ್ದ ಹಣದಲ್ಲಿ ಮಗಳು ಮೊಬೈಲ್ ಫೋನ್ ಖರೀದಿಸಿದ್ದಳು. ಈ ವಿಚಾರವಾಗಿ ಭಾನುವಾರ ಆಕೆಗೆ ಬೈದಿದ್ದು, ಇಬ್ಬರ ಮಧ್ಯೆ ವಾಗ್ವಾದ ನಡೆದಿತ್ತು ಎಂದು ಪೊಲೀಸರಿಗೆ ತಿಳಿಸಿದ್ದಾರೆ.
ಇದೇ ವಿಚಾರಕ್ಕೆ ಮನನೊಂದ ಯುವತಿ ಸೋಮವಾರ ಬೆಳಗ್ಗೆ ಫ್ಯಾನಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಪೊಲೀಸರು ಶಂಕಿಸಿದ್ದು, ಘಟನೆಯ ಕುರಿತು ತನಿಖೆ ನಡೆಯುತ್ತಿರುವುದಾಗಿ ತಿಳಿಸಿದ್ದಾರೆ.