– ತನಿಖೆಯ ಭಯದಲ್ಲಿ ಸಿಬ್ಬಂದಿ
ಬೆಂಗಳೂರು: ಬಿಎಂಟಿಸಿಯ ಇಟಿಎಂ (ETM) ಮಷೀನ್‌ನಲ್ಲಿ ತಾಂತ್ರಿಕದೋಷ ಕಾಣಿಸಿಕೊಂಡಿದೆ. ಕಳೆದ 4-5 ದಿನಗಳಿಂದ ನಿಗಮಕ್ಕೆ ಲಕ್ಷಾಂತರ ರೂಪಾಯಿ ನಷ್ಟ ಆಗ್ತಿದೆ. ಇದನ್ನ ತಡೆಗಟ್ಟಬೇಕಾದ ಡಿಪೋ ಮ್ಯಾನೆಜರ್, ಇತರೆ ಅಧಿಕಾರಿಗಳು ಗೊತ್ತಿದ್ರೂ ಸೈಲೆಂಟ್ ಆಗಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿವೆ.
ಬಿಎಂಟಿಸಿಯ (BMTC) ಇಟಿಎಂ ಮಷೀನ್‌ನಲ್ಲಿ ತಾಂತ್ರಿಕ ದೋಷ ಎದುರಾಗಿದೆ. ಇದರಿಂದ ನಿತ್ಯ ಸಾವಿರಾರು ರೂಪಾಯಿ ನಿಗಮಕ್ಕೆ ನಷ್ಟ ಉಂಟಾಗ್ತಿದೆ. ಬೊಮ್ಮಸಂಧ್ರ – ಜಿಗಣಿ ಮಾರ್ಗದ ಬಸ್‌ನಲ್ಲಿ ನಿಗದಿತ ಸ್ಟೇಜ್ ಗಳಿಗಿಂತ ಒಂದು ಸ್ಟೇಜ್ ಕಡಿಮೆ ಬರ್ತಿದ್ದು, ಒಬ್ಬ ಪ್ರಯಾಣಿಕನಿಂದ ನಿಗಮಕ್ಕೆ 5 ರೂಪಾಯಿ ನಷ್ಟ ಉಂಟಾಗ್ತಿದೆ.
ಕೆಲ ದಿನಗಳ ಹಿಂದೆ ಚಕ್ರ ಎಂಬ ಹೆಸರಿನಡಿ ಹೊಸ ಮಾರ್ಗವನ್ನ ಪರಿಚಯಿಸಲಾಗಿದೆ. ಇಟಿಎಂ ಮಷೀನ್‌ನಲ್ಲಿ ಸ್ಟೇಜ್‌ಗಳು ಸರಿಯಾಗಿ ನಮೂದು ಆಗದ ಹಿನ್ನೆಲೆ ಒಂದು ಸ್ಟೇಜ್ ಕಡಿಮೆ ಬರ್ತಿದ್ದು, ನಿಗಮಕ್ಕೆ ನಷ್ಟ ಆಗ್ತಿದೆ. ಈ ವಿಚಾರ ಸಂಬಂಧಪಟ್ಟ ಡಿಪೋ ಮ್ಯಾನೇಜರ್‌ಗೆ ಗೊತ್ತಿದ್ರೂ ಸೈಲೆಂಟ್ ಆಗಿದ್ದಾರೆ. ಟಿಕೆಟ್ ತನಿಖಾಧಿಕಾರಿಗಳು ಬಂದು ಪರಿಶೀಲನೆ ಮಾಡಿದ್ರೆ ನಮ್ಮ ಮೇಲೆ ಕೇಸ್ ಬರಿತಾರೋ ಅಂತ ಕಂಡಕ್ಟರ್‌ಗಳು ಭಯದಲ್ಲಿದ್ದಾರೆ.

ಈ ಮಾರ್ಗದಲ್ಲಿ 23 ಸ್ಟೇಜ್ ಗಳು ಬರಲಿದ್ದು, ಪ್ರತಿಯೊಂದು ಸ್ಟೇಜ್‌ಗೂ ದರ ನಿಗಧಿ ಮಾಡಲಾಗಿದೆ. ಆದ್ರೆ ಈ ಮಾರ್ಗದಲ್ಲಿ ಒಂದು ಸ್ಟೇಜ್ ಕಡಿಮೆ ತೋರಿಸಲಾಗ್ತಿದೆ. ಇದು ಪ್ರಯಾಣಿಕರಿಗೆ ಲಾಭ.. ಆದ್ರೆ ನಿಗಮಕ್ಕೆ ನಷ್ಟ. ಇನ್ನೂ 365 ಪಿ ಮಾರ್ಗ ಆನೇಕಲ್ ಟು ಮೆಜೆಸ್ಟಿಕ್‌ಗೆ ಬರುವ ಬಸ್ ನಲ್ಲಿ ಕೂಡ ಇಟಿಎಂ ಮಶಿನ್ ನ ತಾಂತ್ರಿಕ ಸಮಸ್ಯೆಯಿದೆ. ಈ ಮಾರ್ಗದಲ್ಲಿ ಒಂದು ಸ್ಟೇಜ್ ಹೆಚ್ಚಿದ್ದು, 6 ರೂಪಾಯಿ ಹೆಚ್ಚು ಬರ್ತಿದೆ. ಇದು ಪ್ರಯಾಣಿಕರಿಗೆ ಹೊರೆಯಾಗ್ತಿದೆ.
ತಾಂತ್ರಿಕ ಸಮಸ್ಯೆಯಿಂದ ಒಂದು ಮಾರ್ಗದಲ್ಲಿ ನಿಗಮಕ್ಕೆ ನಷ್ಟ, ಮತ್ತೊಂದು ಮಾರ್ಗದಲ್ಲಿ ಪ್ರಯಾಣಿಕರ ಜೇಬಿಗೆ ಕತ್ತರಿ. ಸಂಬಂಧಪಟ್ಟ ಅಧಿಕಾರಿಗಳು ಇದನ್ನ ಸರಿಪಡಿಸಬೇಕಿದೆ.
