ಲಕ್ನೋ: ಕೆಲಸ ನಿರ್ವಹಿಸುತ್ತಿದ್ದ ಸ್ಥಳದಲ್ಲಿ ಲೈಂಗಿಕ ಕಿರುಕುಳದ ಆರೋಪವನ್ನು ಎದುರಿಸುತ್ತಿದ್ದ 35 ವರ್ಷದ ಟೆಕ್ಕಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದಿದೆ.
35 ವರ್ಷದ ಸ್ವರೂಪ್ ರಾಜ್ ಆತ್ಮಹತ್ಯೆ ಮಾಡಿಕೊಂಡ ಟೆಕ್ಕಿ. ಸ್ವರೂಪ್ ನೋಯ್ಡಾದ ಜೆನ್‍ಪ್ಯಾಕ್ಟ್ ಸಾಫ್ಟ್ ವೇರ್ ಕಂಪೆನಿಯ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು. ಆದರೆ ಇತ್ತೀಚೆಗೆ ಕಚೇರಿಯಲ್ಲಿ ಇಬ್ಬರು ಸಹೋದ್ಯೋಗಿಗಳು ಲೈಂಗಿಕ ಆರೋಪವನ್ನು ಸ್ವರೂಪ್ ಮೇಲೆ ಹೊರಿಸಿದ್ದರು. ಹೀಗಾಗಿ ಸ್ವರೂಪ್ ಅವರನ್ನು ಕೆಲಸದಿಂದ ತೆಗೆದುಹಾಕಲಾಗಿತ್ತೆಂದು ಪೊಲೀಸರು ಹೇಳಿದ್ದಾರೆ.
Advertisement
ಲೈಂಗಿಕ ಆರೋಪದ ಆಪಾದನೆಯಿಂದ ತೀವ್ರವಾಗಿ ಮನನೊಂದಿದ್ದ ಸ್ವರೂಪ್, ಗುರುವಾರ ನೋಯ್ಡಾದ ಸೆಕ್ಟರ್ 137ರರಲ್ಲಿರುವ ತಮ್ಮ ನಿವಾಸದಲ್ಲೇ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಭೇಟಿ ನೀಡಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದೇವೆ. ಅಲ್ಲದೇ ಘಟನಾ ಸಂಬಂಧ ಸ್ವರೂಪ್ ಕುಟುಂಬದವರು ಯಾವುದೇ ದೂರನ್ನು ದಾಖಲಿಸಿಲ್ಲ. ಹೀಗಾಗಿ ಸ್ವಯಂ ದೂರನ್ನು ದಾಖಲಿಸಿಕೊಂಡಿದ್ದೇವೆಂದು ಗೌತಮ್ ಬುದ್ಧ ನಗರ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಅಜಯ್ ಪಾಲ್ ಶರ್ಮಾ ಅವರು ಹೇಳಿದ್ದಾರೆ.
Advertisement
Advertisement
ಸ್ವರೂಪ್ ರಾಜ್ ಆತ್ಮಹತ್ಯೆಗೂ ಮುನ್ನ ತನ್ನ ಪತ್ನಿಗೆ ಪತ್ರ ಬರೆದಿದ್ದರು, ಪತ್ರದಲ್ಲಿ “ನಿನಗೆ ಗೊತ್ತು ನಾನು ನಿನ್ನನ್ನು ಎಷ್ಟು ಪ್ರೀತಿಸುತ್ತೇನೆಂದು. ಆದರೆ ನನ್ನ ಕಚೇರಿಯಲ್ಲಿ ಇಬ್ಬರು ಸಹದ್ಯೋಗಿಗಳು ನನ್ನ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪವನ್ನು ಮಾಡಿದ್ದಾರೆ. ನನ್ನನ್ನು ನಂಬು ನಾನು ಆ ರೀತಿ ನಡೆದುಕೊಂಡಿಲ್ಲ. ನನಗೆ ಗೊತ್ತು ಈ ಜಗತ್ತು ಯಾವ ರೀತಿ ಅರ್ಥಮಾಡಿಕೊಳ್ಳುತ್ತದೆಂದು. ಆದರೂ ನೀನು ಹಾಗೂ ನಮ್ಮ ಕುಟುಂಬ ನನ್ನನ್ನು ನಂಬಿದರೇ ಸಾಕು” ಎಂದು ಬರೆದಿದ್ದಾರೆ.
Advertisement
“ಆ ಒಂದು ಆಪಾದನೆ ಶೀಘ್ರವೇ ಜೆನ್‍ಪ್ಯಾಕ್ಟ್ ನಲ್ಲಿರುವವರಿಗೆ ತಿಳಿಯುತ್ತದೆ. ಆದರೆ ನಾನು ಎಲ್ಲರನ್ನೂ ಎದುರಿಸಲು ಸಾಧ್ಯವಿಲ್ಲ. ನಾನು ಧೈರ್ಯ ಹಾಗೂ ಗೌರವದಿಂದ ನಿನ್ನ ಜೊತೆ ಜೀವನ ಸಾಗಿಸಬೇಕೆಂದು ಅಂದುಕೊಂಡಿದ್ದೆ. ನಿನ್ನ ಗಂಡ ಏನೂ ಮಾಡಲಿಲ್ಲ. ನಾನು ಆರೋಪ ಮುಕ್ತನಾಗಿ ಬಂದರೂ, ಎಲ್ಲರೂ ನನ್ನನ್ನು ಕೆಟ್ಟ ರೀತಿಯಲ್ಲೇ ನೋಡುತ್ತಾರೆಂದು” ಬರೆದಿದ್ದಾರೆಂದು ಅಜಯ್ ಪಾಲ್ ಶರ್ಮಾ ತಿಳಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv