ನಡೆದಾಡುವ ದೇವರು ಎಂದೇ ಖ್ಯಾತರಾಗಿದ್ದ, ವಿಜಯಪುರದ ಜ್ಞಾನಯೋಗಾಶ್ರಮದ ಗುರುಗಳಾದ ಸಿದ್ದೇಶ್ವರ ಸ್ವಾಮಿಗಳ ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ಸ್ಯಾಂಡಲ್ ವುಡ್ ನ ಸಾಕಷ್ಟು ಕಲಾವಿದರು, ನಿರ್ದೇಶಕರು ಮತ್ತು ತಂತ್ರಜ್ಞರು ಕಂಬನಿ ಮಿಡಿದಿದ್ದಾರೆ. ಅಗಲಿದ ಚೇತನನ ಗುಣಗಾನ ಮಾಡಿದ್ದಾರೆ. ನಾಡಿನ ಏಳಿಗೆಗಾಗಿ ಮಹಾತ್ಮ ಮತ್ತೆ ಹುಟ್ಟಿ ಬರಲಿ ಎಂದು ಪ್ರಾರ್ಥಿಸಿದ್ದಾರೆ.
ಸಿದ್ದೇಶ್ವರ ಸ್ವಾಮಿ ಅಗಲಿಕೆಯ ಕುರಿತು ಟ್ವಿಟ್ ಮಾಡಿರುವ ನಟ ಧನಂಜಯ್, ‘ಶತಮಾನದ ಸಂತ, ನಾಡು ಕಂಡ ನಡೆದಾಡುವ ದೇವರು ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರು ಲಿಂಗೈಕ್ಯರಾಗಿರುವುದು ತುಂಬಾ ನೋವನ್ನುಂಟು ಮಾಡಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಜ್ಞಾನದ ಬೆಳಕು ನಮ್ಮನ್ನು ಸದಾ ಕಾಯುತ್ತಿರಲಿ’ ಎಂದು ಬರೆದಿದ್ದಾರೆ.
ಹಿರಿಯ ನಟಿ ಹಾಗೂ ಸಂಸದೆ ಸುಮಲತಾ ಅಂಬರೀಶ್ ಕೂಡ ಕಂಬನಿ ಮಿಡಿದಿದ್ದು, ‘ನಡೆದಾಡುವ ದೇವರು ಎಂದೇ ಭಕ್ತರ ಹೃದಯದಲ್ಲಿ ಉಳಿದಿರುವ, ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿ ಲಿಂಗೈಕ್ಯ ಅಪಾರ ನೋವು ತಂದಿದೆ. ನಿಮ್ಮ ಸಾಮಾಜಿಕ ಸೇವೆ ಯಾವಾಗಲೂ ಹೃದಯದಲ್ಲಿ ಇರತ್ತೆ. ನಿಮಗೆ ಅನಂತ ನೋವಿನ ಅಶ್ರುತರ್ಪಣೆ’ ಎಂದು ಟ್ವಿಟ್ ಮಾಡಿದ್ದಾರೆ.
ನಿರ್ದೇಶಕ, ನಟ ರಿಷಬ್ ಶೆಟ್ಟಿ ಕೂಡ ಅಗಲಿದ ಸ್ವಾಮೀಜಿಗಳನ್ನು ನೆನಪಿಸಿಕೊಂಡಿದ್ದು, ‘ನಡೆದಾಡುವ ದೇವರು ಸಿದ್ದೇಶ್ವರ ಸ್ವಾಮೀಜಿ ನಿಮ್ಮ ಅಗಲಿಕೆ ಸಹಿಸಲಸಾಧ್ಯ. ನಮಗಾಗಿ ಇನ್ನಷ್ಟು ವರ್ಷ ಬದುಕಬೇಕಿತ್ತು ನೀವು. ನಿಮ್ಮ ಬದುಕೇ ನಮಗೊಂದು ಆದರ್ಶ. ಹೋಗ್ಬನ್ನಿ ಗುರುವರ್ಯರೆ’ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ನಾನಿಲ್ಲಿ ಗೆದ್ದಿರುವಂಥದ್ದು ನಿಮ್ಮಿಂದ, ನೀವು ನನ್ನನ್ನು ಗೆಲ್ಲಿಸಿದ್ದೀರಿ: ರೂಪೇಶ್ ಶೆಟ್ಟಿ
ನಿರ್ದೇಶಕ ಗುರು ದೇಶಪಾಂಡೆ ಗುರುಗಳ ಲಿಂಗೈಕ್ಯಕ್ಕೆ ಅಂತಿಮ ನಮಗಳನ್ನು ಸಲ್ಲಿಸಿದ್ದು, ‘ವಿಜಯಪುರದ ಜ್ಞಾನಯೋಗಾಶ್ರಮದ ಜ್ಞಾನಯೋಗಿ, ಕಾಯಕಯೋಗಿ ಪರಮಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ’ ಎಂದು ಬರೆದುಕೊಂಡಿದ್ದಾರೆ. ಇವರುಗಳ ಜೊತೆಗೆ ಇನ್ನೂ ಅನೇಕ ಕಲಾವಿದರು, ತಂತ್ರಜ್ಞರು, ನಿರ್ದೇಶಕರು ಸೇರಿದಂತೆ ಅನೇಕರು ಕಂಬಿನಿ ಮಿಡಿದು, ಅಗಲಿದ ದೇವರಿಗೆ ನಮನ ಸಲ್ಲಿಸಿದ್ದಾರೆ.