ಮುಂಬೈ: ಐಸಿಸಿ ಚಾಂಪಿಯನ್ ಟ್ರೋಫಿಯಲ್ಲಿ ಪಾಕಿಸ್ತಾನದ ವಿರುದ್ಧ ಸೋತು ರನ್ನರ್-ಅಪ್ ಸ್ಥಾನವನ್ನು ಪಡೆದುಕೊಂಡಿದ್ದ ಟೀಂ ಇಂಡಿಯಾದ ಪ್ರತಿಯೊಬ್ಬ ಆಟಗಾರನಿಗೆ ಬಿಸಿಸಿಐ ತಲಾ 38.67 ಲಕ್ಷ ರೂ. ನಗದು ಬಹುಮಾನ ನೀಡಿದೆ.
ಬಿಸಿಸಿಐ ತನ್ನ ವೆಬ್‍ಸೈಟ್ ನಲ್ಲಿ 15 ಆಟಗಾರರಿಗೆ ನೀಡಿದ ನಗದು ಬಹುಮಾನದ ಮೊತ್ತದ ಮಾಹಿತಿಯನ್ನು ಪ್ರಕಟಿಸಿದೆ. ಅಕ್ಟೋಬರ್ 18, 2017 ರಿಂದ ಜನವರಿ 17,2018 ರ ಅವಧಿಯಲ್ಲಿ ಟೀಂ ಇಂಡಿಯಾ ಕೋಚ್ ಆಗಿ ಕಾರ್ಯನಿರ್ವಹಿಸಿದ್ದ ಕೋಚ್ ರವಿಶಾಸ್ತ್ರಿ ಅವರಿಗೆ 2 ಕೋಟಿ ರೂ. ವೇತನವನ್ನು ನೀಡಲಾಗಿದೆ.
Advertisement
Advertisement
ಇಂಗ್ಲೆಡ್ ನ ಓವಲ್ ಕ್ರೀಡಾಂಗಣದಲ್ಲಿ ಜೂನ್ 18ರಲ್ಲಿ ನಡೆದಿದ್ದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಭಾರತ ತಂಡ ಪಾಕ್ ವಿರುದ್ಧ 180 ರನ್ ಗಳ ಅಂತರದಿಂದ ಸೋತಿತ್ತು. ಈ ಮೂಲಕ ಪಾಕಿಸ್ತಾನ ತನ್ನ ಚೊಚ್ಚಲ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಎತ್ತಿ ಹಿಡಿದಿತ್ತು.
Advertisement
ಐಸಿಸಿ ನೀಡಿದ ಬಹುಮಾನ ಎಷ್ಟು?
ಐಸಿಸಿ ಚಾಂಪಿಯನ್ ಟ್ರೋಫಿ ವಿಜೇತ ಪಾಕ್ ತಂಡಕ್ಕೆ 2.2 ದಶಲಕ್ಷ ಡಾಲರ್ ಹಣ(ಅಂದಾಜು 14 ಕೋಟಿ ರೂ.) ಬಹುಮಾನ ರೂಪದಲ್ಲಿ ಸಿಕ್ಕಿದೆ. ಈ ಟೂರ್ನಿಗೆ ಐಸಿಸಿ ಒಟ್ಟು 4.5 ದಶಲಕ್ಷ ಡಾಲರ್(ಅಂದಾಜು 28 ಕೋಟಿ ರೂ.) ಬಹುಮಾನವನ್ನು ತಂಡಗಳಿಗೆ ನೀಡಿತ್ತು. ದ್ವಿತೀಯ ಸ್ಥಾನಿ ಭಾರತ ತಂಡಕ್ಕೆ 1.1 ದಶಲಕ್ಷ ಡಾಲರ್(ಅಂದಾಜು 7ಕೋಟಿ ರೂ.) ನಗದು ಬಹುಮಾನ ಸಿಕ್ಕಿತ್ತು.
Advertisement
ಸೆಮಿಫೈನಲ್‍ನಲ್ಲಿ ಸೋತ ಎರಡೂ ತಂಡಗಳಿಗೆ 4.50 ಲಕ್ಷ ಡಾಲರ್(ಅಂದಾಜು 2.8 ಕೋಟಿ ರೂ.) ಸಿಕ್ಕಿದೆ. ಗುಂಪಿನಲ್ಲಿ ಮೂರನೇ ಸ್ಥಾನವನ್ನು ಪಡೆದ ಎರಡು ತಂಡಕ್ಕೆ 90 ಸಾವಿರ ಡಾಲರ್(ಅಂದಾಜು 57 ಲಕ್ಷ ರೂ.), ಗುಂಪಿನಲ್ಲಿ ಕೊನೆಯ ಸ್ಥಾನವನ್ನು ಪಡೆದ ತಂಡಕ್ಕೆ 60 ಸಾವಿರ ಡಾಲರ್( ಅಂದಾಜು 38 ಲಕ್ಷ ರೂ.) ಬಹುಮಾನ ದೊರೆತಿದೆ.
2013ರ ಟೂರ್ನಿಗೆ ಹೋಲಿಸಿದರೆ ಈ ಬಾರಿಯ ಐಸಿಸಿ ಬಹುಮಾನದ ಮೊತ್ತವನ್ನು ಹೆಚ್ಚಿಸಿತ್ತು. ಒಟ್ಟು 5 ಲಕ್ಷ ಡಾಲರ್(ಅಂದಾಜು 3 ಕೋಟಿ ರೂ.) ಹೆಚ್ಚಿನ ಅನುದಾನವನ್ನು ನೀಡಿತ್ತು. ಜೂನ್ 1ರಿಂದ ಜೂನ್ 18 ರವರೆಗೆ ಇಂಗ್ಲೆಂಡಿನಲ್ಲಿ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿ ನಡೆದಿತ್ತು.
2013ರಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಫೈನಲ್ ನಲ್ಲಿ ಇಂಗ್ಲೆಂಡ್ ತಂಡವನ್ನು 5 ರನ್ ಗಳಿಂದ ಸೋಲಿಸಿ ಭಾರತ ಚಾಂಪಿಯನ್ ಪಟ್ಟವನ್ನು ಆಲಂಕರಿಸಿತ್ತು.