ತುಮಕೂರು: ವಿದ್ಯಾರ್ಥಿನಿಯರೊಂದಿಗೆ ಅನುಚಿತ ವರ್ತನೆ ತೋರಿದ ಆರೋಪದ ಮೇಲೆ ಶಿಕ್ಷಕನೊಬ್ಬನಿಗೆ ಹಿಗ್ಗಾಮುಗ್ಗ ಥಳಿಸಿದ್ದಾರೆ.
ತುಮಕೂರು ತಾಲೂಕಿನ ಕೈದಾಳ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ವಿಜ್ಞಾನ ಶಿಕ್ಷಕರಾಗಿರುವ ಯತೀಶ್ ಕುಮಾರ್ ಎಂಬವರು ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ವರ್ತಿಸಿದರು ಎಂಬ ಆರೋಪ ಕೇಳಿ ಬಂದಿದೆ.
ವಿದ್ಯಾರ್ಥಿನಿಯರನ್ನು ಕರೆಸಿ ದೇಹದಲ್ಲಿ ಕೂದಲುಗಳು ಎಲ್ಲಿ ಬೆಳೆಯುತ್ತದೆ ಎಂದು ವಿಚಿತ್ರವಾಗಿ ಯತೀಶ್ ಕುಮಾರ್ ಪ್ರಶ್ನೆ ಕೇಳಿದ್ದರು ಎನ್ನಲಾಗಿದೆ. ಕೂದಲು ಬೆಳೆಯುತ್ತಿದ್ದಾಗ ನಿಮಗೆ ಏನೋ ಬೇಕು ಅನಿಸುತ್ತದೆ. ಆ ಔಷಧಿ ನನ್ನ ಬಳಿ ಇದೆ ಎಂದು ರೊಮ್ಯಾಂಟಿಕ್ಕಾಗಿ ಶಿಕ್ಷಕ ಹೇಳುತ್ತಿದ್ದರು ಎಂದು ಹೇಳಲಾಗುತ್ತಿದೆ.
ವಿಜ್ಞಾನ ಶಿಕ್ಷಕನ ಪೋಲಿ ಮಾತುಗಳಿಂದ ವಿದ್ಯಾರ್ಥಿನಿಯರು ಪ್ರತಿದಿನ ಮುಜುಗರಕ್ಕೆ ಒಳಗಾಗುತಿದ್ದರು. ಇತ್ತ ಶಿಕ್ಷಕರಿಗೆ ಪ್ರತಿರೋಧ ಒಡ್ಡಲಾಗದೇ, ಅತ್ತ ಮನೆಯವರಿಗೂ ಹೇಳಲಾಗಿದೆ ಇಕ್ಕಟ್ಟಿನಲ್ಲಿ ಬಾಲಕಿಯರು ಸಿಲುಕಿದ್ದರು. ಹಲವು ಬಾರಿ ಸೌಜನ್ಯಯುತವಾಗಿಯೇ ಶಿಕ್ಷಕನ ನಡೆಯನ್ನು ಖಂಡಿಸಿದ್ದರು. ಆದರೂ ಶಿಕ್ಷಕ ಪೋಲಿ ಆಟ ಮುಂದುವರಿಸಿದ್ದರು.
ಕೊನೆಗೆ ವಿಧಿಯಿಲ್ಲದೆ ವಿದ್ಯಾರ್ಥಿನಿಯರು ಪೋಷಕರಿಗೆ ವಿಚಾರ ಮುಟ್ಟಿಸಿದ್ದಾರೆ. ಹೀಗಾಗಿ ಪೋಷಕರು ಶಾಲೆಗೆ ಬಂದು ಶಿಕ್ಷಕರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಒಂದು ಹಂತದಲ್ಲಿ ಮಹಿಳೆಯರು ಹಿಗ್ಗಾಮುಗ್ಗ ಬಡಿದರು.
ಈ ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಪರಿಸ್ಥಿತಿಯನ್ನು ಹತೋಟಿಗೆ ತಂದರು. ಅಲ್ಲದೆ ಪೋಷಕರ ಮಾತುಗಳನ್ನು ಆಲಿಸಿದ ಶಿಕ್ಷಣ ಇಲಾಖೆ ಅಧಿಕಾರಿಗಳು ಶಿಕ್ಷಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.