– 60,000 ರೂ. ಸ್ವಂತ ಖರ್ಚಿನಲ್ಲಿ 19 ವಿದ್ಯಾರ್ಥಿಗಳಿಗೆ ಪ್ರವಾಸ
– ವಿಮಾನದಲ್ಲಿ ಪ್ರವಾಸ ಮಾಡಿ ಧನ್ಯವಾದ ತಿಳಿಸಿದ ವಿದ್ಯಾರ್ಥಿಗಳು
ಭೋಪಾಲ್: ಮಧ್ಯಪ್ರದೇಶದ ಇಂದೋರ್ ಜಿಲ್ಲೆಯ ಮುಖ್ಯ ಶಿಕ್ಷಕರೊಬ್ಬರು ತನ್ನ ಸ್ವಂತ ಖರ್ಚಿನಲ್ಲಿ 19 ವಿದ್ಯಾರ್ಥಿಗಳಿಗೆ ವಿಮಾನದಲ್ಲಿ ಪ್ರವಾಸ ಮಾಡಿಸಿದ್ದಾರೆ.
ಮುಖ್ಯಶಿಕ್ಷಕ ಕಿಶೋರ್ ವಿದ್ಯಾರ್ಥಿಗಳಿಗಾಗಿ ತಮ್ಮ ಉಳಿತಾಯದ ಹಣದಲ್ಲಿ 60 ಸಾವಿರ ರೂ. ಖರ್ಚು ಮಾಡಿದ್ದಾರೆ. ಜಿಲ್ಲೆಯ ಬಿಜೇಪುರ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಆರನೇ, ಏಳನೇ ಹಾಗೂ ಎಂಟನೇ ತರಗತಿ ವಿದ್ಯಾರ್ಥಿಗಳು ಮೊದಲ ಬಾರಿಗೆ ಇಂದೋರ್ ವಿಮಾನ ನಿಲ್ದಾಣಕ್ಕೆ ತಲುಪಿದಾಗ ತುಂಬಾ ಸಂತೋಷಪಟ್ಟರು. ಇಂದೋರಿನಿಂದ ದೆಹಲಿಗೆ ಎರಡು ದಿನಗಳ ಕಾಲ ಪ್ರವಾಸ ಹೋಗಿದ್ದರು.
Advertisement
Advertisement
19 ವಿದ್ಯಾರ್ಥಿಗಳಲ್ಲಿ ಕೆಲವರು ಇದುವರೆಗೂ ರೈಲಿನಲ್ಲಿಯೂ ಹೋಗಿರಲಿಲ್ಲ. ಈ ಬಗ್ಗೆ ವಿದ್ಯಾರ್ಥಿಯೊಬ್ಬ ಪ್ರತಿಕ್ರಿಯಿಸಿ, ನಾವು ಭೂಮಿ ಮೇಲೆ ಆಟವಾಡುವಾಗ ವಿಮಾನ ನೋಡಿದರೆ ಅದು ತುಂಬಾ ಚಿಕ್ಕದಾಗಿ ಕಾಣುತ್ತಿತ್ತು. ಆದರೆ ನಾವು ವಿಮಾನವನ್ನು ಹತ್ತಿರದಿಂದ ನೋಡಿದಾಗ ಅದು ತುಂಬಾನೇ ದೊಡ್ಡದಾಗಿ ಇತ್ತು ಎಂದು ಹೇಳಿದ್ದಾರೆ.
Advertisement
Advertisement
ಇದೇ ವೇಳೆ ಮುಖ್ಯಶಿಕ್ಷಕ ಕಿಶೋರ್ ಮಾತನಾಡಿ, 19 ವಿದ್ಯಾರ್ಥಿಗಳಲ್ಲಿ ಕೆಲವರು ಇದುವರೆಗೂ ರೈಲಿನಲ್ಲಿಯೂ ಹೋಗಿರಲಿಲ್ಲ. ಇವರು ವಿಮಾನದಲ್ಲಿ ಪ್ರವಾಸ ಮಾಡಬೇಕು ಎಂದು ಇದೂವರೆಗೂ ಯೋಚನೆ ಸಹ ಮಾಡಿರಲಿಲ್ಲ. ಹಾಗಾಗಿ ನಾನು ವಿದ್ಯಾರ್ಥಿಗಳಿಗೆ ವಿಮಾನದಲ್ಲೇ ದೆಹಲಿಗೆ ಕರೆದುಕೊಂಡು ನಿರ್ಧರಿಸಿದೆ. ಟಿಕೆಟ್‍ಗಳು ಅಗ್ಗವಾಗುವುದನ್ನು ನಾನು ಗಮನಿಸುತ್ತಿದ್ದೆ. ನಂತರ ಬೆಲೆ ಕಡಿಮೆಯಾದಾಗ ಮುಂಚಿತವಾಗಿ ಟಿಕೆಟ್ ಬುಕ್ ಮಾಡಿದೆ ಎಂದರು.
ಈ ಮೊದಲು ವಿದ್ಯಾರ್ಥಿಗಳನ್ನು ರೈಲಿನಲ್ಲಿ ಆಗ್ರಾಗೆ ಕರೆದುಕೊಂಡು ಹೋಗಿದ್ದೆ. ರೈಲಿನಲ್ಲಿ ಹಿಂತಿರುಗುವಾಗ ಉತ್ಸಾಹದಲ್ಲಿದ್ದ ವಿದ್ಯಾರ್ಥಿಗಳು ನಾವು ಮುಂದಿನ ಬಾರಿ ವಿಮಾನದಲ್ಲಿ ಹೋಗೋಣ ಎಂದರು. ಮಕ್ಕಳ ಈ ಮಾತು ಕೇಳಿ ಅವರನ್ನು ವಿಮಾನದಲ್ಲೇ ಪ್ರವಾಸಕ್ಕೆ ಕರೆದುಕೊಂಡು ಹೋಗೋಣ ಎಂದು ನಿರ್ಧರಿಸಿದೆ ಎಂದು ಕಿಶೋರ್ ತಿಳಿಸಿದ್ದಾರೆ.
ವಿದ್ಯಾರ್ಥಿಗಳು ಎರಡು ದಿನಗಳ ಕಾಲ ದೆಹಲಿ ಪ್ರವಾಸ ಮಾಡಿದ್ದು, ಈ ವೇಳೆ ಅವರು ಕುತುಬ್ ಮಿನಾರ್, ಸಂಸತ್ ಭವನ್ ಹಾಗೂ ಕೆಂಪು ಕೋಟೆ ಸೇರಿದಂತೆ ಹಲವು ಐತಿಹಾಸಿಕ ಸ್ಥಳಗಳನ್ನು ವೀಕ್ಷಣೆ ಮಾಡಿದ್ದಾರೆ. ಫೆ. 17ರಂದು ವಿದ್ಯಾರ್ಥಿಗಳು ರೈಲಿನಲ್ಲಿ ತಮ್ಮ ಊರಿಗೆ ತಲುಪಿದರು. ವಿಮಾನದಲ್ಲಿ ಪ್ರವಾಸ ಮಾಡಿಸಿದ್ದಕ್ಕೆ ವಿದ್ಯಾರ್ಥಿಗಳು ಮುಖ್ಯ ಶಿಕ್ಷಕನಿಗೆ ಧನ್ಯವಾದ ತಿಳಿಸಿದ್ದರು. ವಿದ್ಯಾರ್ಥಿಗಳ ಜೊತೆ ಇಬ್ಬರು ಶಿಕ್ಷಕರಾದ ನಿತಿನ್ ಗುಪ್ತಾ ಹಾಗೂ ಆಶಾ ತಿಲೋದಿಯಾ ಅವರು ಕೂಡ ಮೊದಲ ಬಾರಿಗೆ ವಿಮಾನದಲ್ಲಿ ಪ್ರವಾಸ ಮಾಡಿದ್ದಾರೆ.