– ಉದ್ಯಮಿಯಿಂದ ಹಣ ಪಡೆದು ಹನಿಟ್ರ್ಯಾಪ್ ಬೆದರಿಕೆ ಒಡ್ಡಿದ್ದ ಗ್ಯಾಂಗ್ ಅರೆಸ್ಟ್
ಬೆಂಗಳೂರು: ಸಚಿವ ರಾಜಣ್ಣ ಹನಿಟ್ರ್ಯಾಪ್ ಸದ್ದು ಹೊತ್ತಲ್ಲೇ ಮತ್ತೊಂದು ಹನಿಟ್ರ್ಯಾಪ್ ಗ್ಯಾಂಗನ್ನು ಪೊಲೀಸರು ಬಂಧಿಸಿದ್ದಾರೆ. ಒಂದು ಮುತ್ತಿಗೆ 50 ಸಾವಿರ ರೂ. ಚಾರ್ಜ್ ಮಾಡಿದ ಟೀಚರಮ್ಮನ ಸ್ಟೋರಿ ಇದು.
ಶಿಕ್ಷಕಿ ಜೊತೆ ರೌಡಿ ಸೇರಿ ಮೂವರನ್ನ ಸಿಸಿಬಿ ಬಂಧಿಸಿದೆ. ಖಾಸಗಿ ಪ್ರೀಸ್ಕೂಲ್ ನಡೆಸ್ತಿದ್ದ ಆರೋಪಿತೆಗೆ 2023 ರಲ್ಲಿ ಉದ್ಯಮಿ ಪರಿಚಯ ವಾಗಿತ್ತು. ತನ್ನ ಮಕ್ಕಳನ್ನು ಈಕೆಯ ಪ್ಲೇಹೋಮ್‌ಗೆ ಉದ್ಯಮಿ ಕಳುಹಿಸುತ್ತಿದ್ದರು. ಉದ್ಯಮಿಯಿಂದ ಶಾಲೆ ನಿರ್ವಹಣೆ ಸಲುವಾಗಿ ಆರೋಪಿತೆ 2 ಲಕ್ಷ ಸಾಲ ಪಡೆದಿದ್ದಳು. 2024 ರಲ್ಲಿ ವಾಪಸ್ ಕೊಡುವುದಾಗಿ ತಿಳಿಸಿದ್ದಳು. ಹಣ ವಾಪಸ್ ಕೇಳಿದಾಗ ಶಾಲೆಗೆ ಪಾರ್ಟ್ನರ್ ಆಗು ಎಂದಿದ್ದಳು. ಈ ವೇಳೆ ಇಬ್ಬರ ನಡುವೆ ಸಲುಗೆ ಬೆಳೆದು, ಸುತ್ತಾಟ ನಡೆಸಿದ್ದರು.
ಆರೋಪಿತೆ ಜೊತೆ ಮಾತನಾಡಲು ಉದ್ಯಮಿ ಹೊಸ ಸಿಮ್ ಹಾಗೂ ಖರೀದಿಸಿದ್ದರು. ಜನವರಿ ಮೊದಲ ವಾರದಲ್ಲಿ ಹಣ ವಾಪಸ್ ಕೇಳಿದ್ದರು. ಈ ವೇಳೆ ನಿನಗೆ ಏನು ಬೇಕು ಕೇಳು ಕೊಡುತ್ತೇನೆ. ಹಣಕಾಸಿನ ವ್ಯವಹಾರ ಒಂದೇ ಸಲ ಮುಗಿಸಿಬಿಡೋಣ ಎಂದಿದ್ದಳು. ಬಳಿಕ ಉದ್ಯಮಿ ಮನೆಗೆ ತೆರಳಿದ್ದ ಆರೋಪಿತೆ, ಮುತ್ತಿಟ್ಟು ಐವತ್ತು ಸಾವಿರ ಪಡೆದಿದ್ದಳು. ಬಳಿಕ ನಿನ್ನ ಜೊತೆ ರಿಲೇಷನ್‌ಶಿಪ್‌ನಲ್ಲಿ ಇರುತ್ತೇನೆಂದು ಆಫರ್ ನೀಡಿದ್ದಳು. ಈ ವೇಳೆ ಮತ್ತೆ ಹದಿನೈದು ಲಕ್ಷ ಹಣಕ್ಕೆ ಡಿಮ್ಯಾಂಡ್ ಮಾಡಿದ್ದಳು. ಪದೇ ಪದೇ ಹಣಕ್ಕೆ ಡಿಮ್ಯಾಂಡ್ ಮಾಡ್ತಿದ್ದರಿಂದ ಉದ್ಯಮಿ ಸಿಮ್ ಮುರಿದು ಬಿಸಾಕಿದ್ದರು.
ಮಾ.12 ರಂದು ಉದ್ಯಮಿ ಪತ್ನಿಗೆ ಆರೋಪಿತೆ ಕರೆ ಮಾಡಿದ್ದಳು. ಮಕ್ಕಳ ಸ್ಕೂಲ್ ಟಿಸಿ ಕೊಡ್ತೇನೆ ನಿಮ್ಮ ಪತಿಯನ್ನ ಕಳಿಸಿ ಎಂದಿದ್ದಳು. ಅದರಂತೆ ಪ್ರೀಸ್ಕೂಲ್‌ಗೆ ಉದ್ಯಮಿ ತೆರಳಿದ್ದರು. ಪ್ರೀಸ್ಕೂಲ್‌ನಲ್ಲಿ ಆರೋಪಿತೆ ಜೊತೆ ಸಾಗರ್ ಮೋರೆ ಹಾಗೂ ಗಣೇಶ್ ಕಾಳೆ ಆರೋಪಿಗಳು ಹಾಜರಿದ್ದರು. ಸಾಗರ್‌ನನ್ನು ಉದ್ಯಮಿಗೆ ತೋರಿಸಿ ಆರೋಪಿತೆ ಆವಾಜ್ ಹಾಕಿದ್ದರು. ಸಾಗರ್ ಜೊತೆ ಆರೋಪಿತೆಗೆ ಎಂಗೇಜ್ಮೆಂಟ್ ಆಗಿದೆ. ಆದರೆ, ನೀನು ಆಕೆ ಜೊತೆ ಮಜಾ ಮಾಡ್ತಿದ್ದೀಯ? ಈ ವಿಚಾರವನ್ನ ಆರೋಪಿತೆ ತಂದೆ ಹಾಗೂ ನಿನ್ನ ಹೆಂಡತಿಗೆ ತಿಳಿಸ್ತೇನೆಂದು ಉದ್ಯಮಿಗೆ ಬ್ಲ್ಯಾಕ್‌ಮೇಲ್ ಮಾಡಿದ್ದರು.
ಆರೋಪಿತೆಗೆ ಬಾಯ್‌ಫ್ರೆಂಡ್ ಇರುವ ವಿಚಾರ ತಿಳಿದಿಲ್ಲ. ಆಕೆ ಜೊತೆ ಊಟ ತಿಂಡಿ ಮಾಡಿದ್ದೇನಷ್ಟೇ ಎಂದು ಉದ್ಯಮಿ ಹೇಳಿದ್ದರು. ಮೊಬೈಲ್‌ನಲ್ಲಿ ಮುರಳಿ ಎಂಬಾತನ ಫೋಟೋ ತೋರಿಸಿದ್ದ ಗಣೇಶ್ ಹಾಗೂ ಸಾಗರ್, ಪೊಲೀಸ್ ಠಾಣೆಗೆ ಹೋಗೋಣ ಎಂದು ಎಕ್ಸ್ ಯುವಿ ಕಾರಿನಲ್ಲಿ ಉದ್ಯಮಿಯನ್ನು ಕರೆದೊಯ್ದಿದ್ದರು. ಮಹಾಲಕ್ಷ್ಮಿ ಲೇಔಟ್‌ನ ಉದ್ಯಮಿ ಮನೆ ಬಳಿಯೇ ಕರೆದೊಯ್ದು ಒಂದು ಕೋಟಿ ಹಣಕ್ಕೆ ಡಿಮ್ಯಾಂಡ್ ಮಾಡಿದ್ದರು. ನಿನ್ನ ಹೆಂಡತಿಗೆ ವಿಚಾರ ತಿಳಿಸಿ ಅವಳನ್ನು ಕರೆದೊಯ್ತೀವೆಂದು ಬೆದರಿಕೆ ಹಾಕಿದ್ದರು. ಬಳಿಕ ಗೊರಗುಂಟೆಪಾಳ್ಯದ ಕಡೆ ಕಾರು ನಿಲ್ಲಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಫೈನಲ್ ಸೆಟಲ್ಮೆಂಟ್ ಆಗಿ ಇಪ್ಪತ್ತು ಲಕ್ಷ ಕೊಡು ಎಂದಿದ್ದರು.
ಕಡೆಗೆ 1.90 ಲಕ್ಷ ಹಣವನ್ನ ಪಡೆದು ಗ್ಯಾಂಗ್ ಬಿಟ್ಟು ಕಳಿಸಿತ್ತು. ಮಾ.17 ರಂದು ಮತ್ತೆ ಉದ್ಯಮಿಗೆ ಆರೋಪಿತೆ ಕರೆ ಮಾಡಿದ್ದಳು. ಮತ್ತೆ ಉದ್ಯಮಿಗೆ 15 ಲಕ್ಷ ಹಣ ಕೊಡುವಂತೆ ಡಿಮ್ಯಾಂಡ್ ಮಾಡಿದ್ದರು. ಹಣ ಕೊಟ್ಟರೆ ಅಶ್ಲೀಲ ವೀಡಿಯೋ ಚಾಟಿಂಗ್ ಡಿಲೀಟ್ ಮಾಡ್ತೀನಿ. ಇಲ್ಲವಾದರೆ ನಿನ್ನ ಪತ್ನಿಗೆ ತೋರಿಸಿ ನಿನ್ನ ಸಂಸಾರವನ್ನೇ ಹಾಳು ಮಾಡ್ತೀವೆಂದು ಬ್ಲ್ಯಾಕ್‌ಮೇಲ್ ಮಾಡಿದ್ದಳು. ಕಡೆಗೆ ಬೆಂಗಳೂರು ಸಿಸಿಬಿಗೆ ಉದ್ಯಮಿ ದೂರು ನೀಡಿದ್ದರು. ಸದ್ಯ ದೂರಿನನ್ವಯ ಆರೋಪಿತೆ, ಸಾಗರ್ ಮೋರೆ, ಗಣೇಶ್ ಕಾಳೆ ಬಂಧನವಾಗಿದೆ. ಮೂವರನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೆ ಸಿಸಿಬಿ ಕಸ್ಟಡಿಗೆ ಪಡೆದಿದ್ದಾರೆ. ವಿಚಾರಣೆ ವೇಳೆ ಗಣೇಶ್ ಕಾಳೆ ಬಿಜಾಪುರ ರೌಡಿಶೀಟರ್ ಅನ್ನೋದು ಗೊತ್ತಾಗಿದೆ. ಈತನ ಮೇಲೆ 9 ಪ್ರಕರಣಗಳಿರುವುದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ.