ಚಾಮರಾಜನಗರ: ಕಳೆದ ರಾತ್ರಿ ಸುರಿದ ಭಾರಿ ಮಳೆಗೆ ( Tattehalla) ಹುಬ್ಬೆ ಹುಣಸೆ ಜಲಾಶಯ ಭರ್ತಿಯಾಗಿ ಕೋಡಿ ಬಿದ್ದಿದೆ. ಇದರ ಪರಿಣಾಮ ಚಾಮರಾಜನಗರ (Chamarajanagar) ಜಿಲ್ಲೆಯ ಹನೂರು ಪಟ್ಟಣದ ತಟ್ಟೆಹಳ್ಳ ಮೈದುಂಬಿ ಹರಿಯುತ್ತಿದ್ದು, ಹಲವು ವಾರ್ಡ್ಗಳ ರಸ್ತೆ ಸಂಪರ್ಕ ಕಡಿತಗೊಂಡಿದೆ.
ಸುಮಾರು 28 ವರ್ಷಗಳ ಬಳಿಕ ತಟ್ಟೆಹಳ್ಳ ಈ ರೀತಿ ತುಂಬಿ ಹರಿಯುತ್ತಿದೆ. ಹಳ್ಳದ ನೀರು ಹೆಚ್ಚಾದ ಪರಿಣಾಮ ಹನೂರು ಪಟ್ಟಣದ ಸೊಪ್ಪಿನ ಕೇರಿ, ದೇವಾಂಗಪೇಟೆ, ಆಂಜನೇಯ ಬೀದಿ ಸೇರಿದಂತೆ ಹಲವು ಪ್ರದೇಶಗಳಿಗೆ ಹಾಗೂ ದೇವಸ್ಥಾನಗಳಿಗೆ ತೆರಳುವ ರಸ್ತೆಗಳು ಸಂಪರ್ಕ ಕಳೆದುಕೊಂಡಿವೆ.
ರಸ್ತೆ ಸಂಪರ್ಕ ಕಡಿತಗೊಂಡಿರುವುದರಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಸ್ಥಳೀಯರು ಪರದಾಡುವಂತಾಗಿದೆ. ಹಲವು ವಿದ್ಯುತ್ ಕಂಬಗಳು ಗಾಳಿಗೆ ಬಾಗಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ತಡರಾತ್ರಿಯಿಂದಲೇ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ.
ಇತ್ತ ತಟ್ಟೆಹಳ್ಳ ಮೈದುಂಬಿ ಹರಿಯುತ್ತಿರುವ ದೃಶ್ಯ ನೋಡಲು ಸಾವಿರಾರು ಜನರು ಸ್ಥಳಕ್ಕೆ ಬರುತ್ತಿದ್ದಾರೆ. ಕೆಲವರು ಅಪಾಯವನ್ನೂ ಲೆಕ್ಕಿಸದೆ ಹಳ್ಳದ ಬಳಿ ನಿಂತು ಸೆಲ್ಫಿ ತೆಗೆದುಕೊಳ್ಳುತ್ತಿರುವುದು ಕಂಡುಬಂದಿದೆ. ಇದನ್ನೂ ಓದಿ: ಕೃಷ್ಣಾ, ಮಲಪ್ರಭಾ, ಘಟಪ್ರಭಾ ಉಕ್ಕಿ ಹರಿದರೂ ಬಾಗಲಕೋಟೆಯ ಕೆರೆ-ಕಾಲುವೆಗಳು ಮಾತ್ರ ಬಣಬಣ!
ಮಳೆಯಿಂದ ರೈತರಲ್ಲಿ ಸಂತಸ
ಕಮ್ಮವಾರು ಸಮುದಾಯದ ಮುಖಂಡ ಪಾಂಡುರಂಗ ನಾಯ್ಡು ಮಾತನಾಡಿ, ಕಳೆದ 28 ವರ್ಷಗಳಲ್ಲಿ ಈ ರೀತಿಯ ಮಳೆ ಕಂಡಿರಲಿಲ್ಲ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಕಳೆದ ಒಂದು ವಾರದಿಂದ ಉತ್ತಮ ಮಳೆಯಾಗುತ್ತಿರುವುದರಿಂದ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ಇದರಿಂದ ರೈತರಿಗೆ ಅನುಕೂಲವಾಗಲಿದೆ. ಇದೇ ರೀತಿ ಇನ್ನಷ್ಟು ಮಳೆಯಾಗಿ ಕೆರೆ-ಕಟ್ಟೆಗಳೆಲ್ಲ ಭರ್ತಿಯಾದರೆ ರೈತರಿಗೆ ಉತ್ತಮವಾಗಲಿದೆ ಎಂದು ಹೇಳಿದ್ದಾರೆ.
ಹಳ್ಳದ ಬಳಿ ಪೊಲೀಸರ ಕಟ್ಟೆಚ್ಚರ
ಹಳ್ಳಗಳು ತುಂಬಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದಾರೆ. ಇನ್ಸ್ಪೆಕ್ಟರ್ ಆನಂದಮೂರ್ತಿ ಅವರ ಮಾರ್ಗದರ್ಶನದಲ್ಲಿ ಸಿಬ್ಬಂದಿ ಅಪಾಯದ ಸ್ಥಳಗಳಲ್ಲಿ ಬ್ಯಾರಿಕೇಡ್ ಟೇಪ್ ಹಾಕಿ ಸಾರ್ವಜನಿಕರ ಸಂಚಾರವನ್ನು ನಿರ್ಬಂಧಿಸಿದ್ದಾರೆ. ಅಲ್ಲದೆ, ಹಳ್ಳದ ಬಳಿ ಜನರು ತೆರಳದಂತೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಮಳೆ ಹಾಗೂ ನೀರಿನ ಹರಿವು ಹೆಚ್ಚಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ಪೊಲೀಸರು ಸೂಚಿಸಿದ್ದಾರೆ. ಇದನ್ನೂ ಓದಿ: 4*400 ರಿಲೇಯಲ್ಲಿ ಮಹಿಳೆಯರಿಗೆ ಚಿನ್ನ, ಪುರುಷರಿಗೆ ಕಂಚು

