– ಮುಗಿಬಿದ್ದ ಎಣ್ಣೆ ಪ್ರಿಯರು ಮದ್ಯದ ಬಾಕ್ಸ್ ಗಳೊಂದಿಗೆ ಎಸ್ಕೇಪ್
ತುಮಕೂರು: ಮದ್ಯದ ಬಾಟಲ್ ಗಳನ್ನು ಸಾಗಿಸುತ್ತಿದ್ದ ಟಾಟಾ ಏಸ್ ವಾಹನಕ್ಕೆ ಕಂಟೈನರ್ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಲಕ್ಷಾಂತರ ರೂ. ಬೆಲೆ ಬಾಳುವ ಮದ್ಯ ರಾಷ್ಟ್ರೀಯ ಹೆದ್ದಾರಿ ಪಾಲಾಗಿದೆ.
ತುಮಕೂರಿನ ಹೊರವಲಯದಲ್ಲಿರುವ ಊರುಕೆರೆ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಅವಘಡ ಮಂಗಳವಾರ ಸಂಭವಿಸಿದೆ. ವಾಹನ ಅಪಘಾತಕ್ಕೀಡಾಗುತ್ತಿದ್ದಂತೆಯೇ ಸ್ಥಳೀಯರು ಮದ್ಯದ ಬಾಟಲಿಗಳನ್ನು ತೆಗೆದುಕೊಂಡು ಹೋಗಲು ಮುಗಿಬಿದ್ದಿದ್ದಾರೆ.
Advertisement
Advertisement
ಶಿರಾಗೇಟ್ ಬಳಿ ಇರುವ ಕರ್ನಾಟಕ ರಾಜ್ಯ ಪಾನೀಯ ನಿಗಮ ನಿಯಮಿತ ಘಟಕದಿಂದ ಮದ್ಯದ ಬಾಟಲುಗಳನ್ನು ಲೋಡ್ ಮಾಡಿಕೊಂಡು ಸಿರಾ ನಗರಕ್ಕೆ ಟಾಟಾ ಏಸ್ ವಾಹನದಲ್ಲಿ ಕೊಂಡೊಯ್ಯಲಾಗುತ್ತಿತ್ತು. ಈ ವೇಳೆ ಟಾಟಾ ಏಸ್ ವಾಹನಕ್ಕೆ ಹಿಂಬದಿಯಿಂದ ಬರುತ್ತಿದ್ದ ಕಂಟೈನರ್ ಲಾರಿಯೊಂದು ಊರುಕೆರೆ ಬಳಿ ಡಿಕ್ಕಿ ಹೊಡೆದಿದೆ. ಪರಿಣಾಮ ಮದ್ಯ ತುಂಬಿದ್ದ ಟಾಟಾ ಏಸ್ ವಾಹನ ಮಗುಚಿಬಿದ್ದಿದೆ.
Advertisement
ಟಾಟಾ ಏಸ್ ವಾಹನ ಮಗುಚಿ ಬಿದ್ದು ಚಾಲಕ ನೋವಿನಿಂದ ನರಳುತ್ತಿದ್ದರೂ ಕೂಡ ಸಹಾಯಕ್ಕೆ ಬಾರದೆ ಜನ ಎಣ್ಣೆ ಕದಿಯಲು ನಾಮುಂದು ತಾಮುಂದು ಎಂದು ಮುಗಿಬಿದ್ದರು. ಕೈಗೆ ಸಿಕ್ಕಷ್ಟು ಮದ್ಯದ ಡಬ್ಬಗಳನ್ನು ಹೊತ್ತು ಪರಾರಿಯಾದರು. ಟಾಟಾ ಏಸ್ ವಾಹನದಲ್ಲಿ 170 ಕೇಸ್ ಮದ್ಯವನ್ನು ತುಮಕೂರಿನಿಂದ ಶಿರಾ ನಗರಕ್ಕೆ ಸಾಗಿಸಲಾಗುತ್ತಿತ್ತು ಎನ್ನಲಾಗಿದೆ.
Advertisement
ಅಪಘಾತವಾದ ತಕ್ಷಣ ಕ್ಷಣಾರ್ಧದಲ್ಲಿ ಮುಗಿಬಿದ್ದ ಎಣ್ಣೆ ಪ್ರಿಯರು ಸುಮಾರು 120 ಕೇಸ್ ಗಳಷ್ಟು ಮದ್ಯದ ಡಬ್ಬವನ್ನು ಹೊತ್ತು ಪರಾರಿಯಾಗಿದ್ದಾರೆ. ವಿಚಾರ ತಿಳಿದು ಪೊಲೀಸರು ಸ್ಥಳಕ್ಕಾಗಮಿಸುವಷ್ಟರಲ್ಲಿ ಬಹುತೇಕ ಮದ್ಯದ ಡಬ್ಬಗಳು ಟಾಟಾ ಎಸ್ ವಾಹನ ವಾಹನದಿಂದ ಖಾಲಿಯಾಗಿದ್ದವು. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿರುವ ಚಾಲಕನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕಳುಹಿಸಲಾಗಿದೆ.
ಸ್ಥಳಕ್ಕೆ ಡಿವೈಎಸ್ಪಿ ನಾಗರಾಜು ಹಾಗೂ ಗ್ರಾಮಾಂತರ ಠಾಣಾ ಸಬ್‍ಇನ್ಸ್ ಪೆಕ್ಟರ್ ಯೋಗಾನಂದ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.