ಮೈಸೂರು: ಮಾಜಿ ಮಂಡ್ಯ ಸಂಸದೆ, ಕಾಂಗ್ರೆಸ್ ಸಾಮಾಜಿಕ ಜಾಲತಾಣ ಮುಖ್ಯಸ್ಥೆ ರಮ್ಯಾ ಕಾವೇರಿ ಪ್ರತಿಭಟನೆಗೆ ಸಂಬಂಧಿಸಿದಂತೆ ಮಾಡಿದ್ದ ಟ್ವೀಟ್ ಗೆ ಸಂಸದ ಪ್ರತಾಪ್ ಸಿಂಹ ಟಾಂಗ್ ಕೊಟ್ಟಿದ್ದಾರೆ.
ರಮ್ಯಾ ಜೋರಾಗಿ ಮತ್ತು ಸ್ಪಷ್ಟವಾಗಿ ಹೇಳಿ ಗೋ ಬ್ಯಾಕ್ ಮೋದಿ ಎಂದು ಟ್ವೀಟ್ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಪ್ರತಾಪ್ ಸಿಂಹ, ಲೌಡ್ ಅಂಡ್ ಕ್ಲೀಯರ್ ಆಗಿ ಕಾಂಗ್ರೆಸ್ ಕಾವೇರಿ ನಿರ್ವಹಣಾ ಮಂಡಳಿ ಸ್ಥಾಪನೆಗೆ ಬೆಂಬಲಿಸುತ್ತಿದೆ. ನಿಮ್ಮ ದ್ರೋಹಿತನಕ್ಕೆ ನಾಚಿಕೆಯಾಗಬೇಕು. ಕನ್ನಡಿಗರೆ ಕರ್ನಾಟಕ ಕಾಂಗ್ರೆಸ್‍ನಿಂದ ಎಚ್ಚೆತ್ತುಕೊಳ್ಳಿ ಎಂದು ರಮ್ಯಾ ಮಾಡಿದ್ದ ಟ್ವೀಟ್ ಫೋಟೋ ಹಾಕಿ ತಿರುಗೇಟು ನೀಡಿದ್ದಾರೆ.
ಅಷ್ಟೇ ಅಲ್ಲದೇ ಸುಪ್ರೀಂ ಕೋರ್ಟ್ ಆದೇಶದ ವಿರುದ್ಧ ತಮಿಳುನಾಡು ಜನ ಪ್ರತಿಭಟನೆ ನಡೆಸುತ್ತಿದ್ದಾರೆ. ಸುಪ್ರೀಂ ಕೋರ್ಟ್ ಕಾವೇರಿ ನಿರ್ವಹಣಾ ಮಂಡಳಿಯನ್ನು ರಚಿಸುವಂತೆ ಆದೇಶ ನೀಡಿಲ್ಲ. ನೀವು ಈ ರೀತಿಯಾಗಿ ಪ್ರತಿಭಟನೆ ನಡೆಸುವ ಮೂಲಕ ಕನ್ನಡಿಗರನ್ನು ಪ್ರಚೋದಿಸುತ್ತಿದ್ದೀರಿ ಎಂದು ಪ್ರತಾಪ್ ಸಿಂಹ ಟ್ವೀಟ್ ಮಾಡಿದ್ದಾರೆ.
ರಮ್ಯಾ ಟ್ವೀಟ್: ಕಾವೇರಿ ನಿರ್ವಹಣಾ ಮಂಡಳಿಯನ್ನು ರಚಿಸುವಂತೆ ಆಗ್ರಹಿಸಿ ತಮಿಳುನಾಡಿನಲ್ಲಿ ಪ್ರತಿಭಟನೆ ನಡೆಯುತ್ತಿದೆ. ಆನ್‍ಲೈನ್ ತಾಣವೊಂದು ಈ ಸುದ್ದಿಯನ್ನು ಪ್ರಕಟಿಸಿತ್ತು. ರಮ್ಯಾ ಅವರು ಈ ಸುದ್ದಿಯನ್ನು ಟ್ವಿಟ್ಟರ್ ನಲ್ಲಿ ಹಾಕಿ Loud and clear #GobackModi ಎಂದು ಬರೆದುಕೊಂಡಿದ್ದರು.
ಈ ಟ್ವೀಟ್ ಅನ್ನು ಕನ್ನಡಿಗರು ಖಂಡಿಸಿದ್ದು, ಕನ್ನಡ ದ್ರೋಹಿ ರಮ್ಯಾ ಅವರಿಗೆ ಧಿಕ್ಕಾರ ಎಂದು ಬರೆದು ಟೀಕಿಸಿದ್ದಾರೆ. ನಿಮ್ಮ ಟ್ವೀಟ್ ನಿಂದಾಗಿ ಕಾಂಗ್ರೆಸ್‍ಗೆ ಕಾವೇರಿ ನಿರ್ವಹಣಾ ಮಂಡಳಿ ರಚಿಸಬೇಕೆಂಬ ಆಗ್ರಹ ಇರುವುದು ಗೊತ್ತಾಯಿತು ಎಂದು ಬರೆದು ಜನ ತರಾಟೆಗೆ ತೆಗೆದುಕೊಂಡಿದ್ದರು.
ಸುಪ್ರೀಂ ಕೋರ್ಟ್ ಹೇಳಿದ್ದು ಏನು?
ಕಾವೇರಿ ನದಿ ನೀರು ಹಂಚಿಕೆ ಸಂಬಂಧ ಕೇಂದ್ರ ಸರ್ಕಾರದ ವಿರುದ್ಧ ತಮಿಳುನಾಡು ಸಲ್ಲಿಸಿದ್ದ ನ್ಯಾಯಂಗ ನಿಂದನೆ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಅಲ್ಲದೇ ಸ್ಕೀಂ ರಚನೆ ವಿಚಾರವಾಗಿ ಕೇಂದ್ರ ಈಗಾಗಲೇ ಕಾರ್ಯ ಪ್ರವೃತ್ತವಾಗಿದ್ದು ನ್ಯಾಯಾಂಗ ನಿಂದನೆ ಆಗುವುದಿಲ್ಲ ಎಂದು ಏಪ್ರಿಲ್ 9 ರಂದು ನಡೆದ ಅರ್ಜಿ ವಿಚಾರಣೆ ವೇಳೆ ಸ್ಪಷ್ಟಪಡಿಸಿದೆ.
ಕಾವೇರಿ ನೀರಿನ ಹಂಚಿಕೆ ಕುರಿತು ವಿಚಾರದಲ್ಲಿ ಕೇಂದ್ರ ಸರ್ಕಾರ ನ್ಯಾಯಾಂಗ ನಿಂದನೆ ಮಾಡಿಲ್ಲ. ಈಗಾಗಲೇ ಈ ಕುರಿತು ಕ್ರಮಕೈಗೊಳ್ಳಲಾಗಿದೆ ಎಂದು ಅಭಿಪ್ರಾಯಪಟ್ಟಿದೆ. ಅಲ್ಲದೇ ಮೇ 3 ರ ಒಳಗೆ ಸ್ಕೀಂ ರಚನೆ ಕುರಿತು ಕೇಂದ್ರ ಸರ್ಕಾರ ಕರಡು ಪ್ರತಿಯನ್ನು ಸುಪ್ರಿಂಕೊರ್ಟ್ ಗೆ ಸಲ್ಲಿಸಬೇಕು. ಸುಪ್ರೀಂ ಕೋರ್ಟ್ ಕರಡು ಪ್ರತಿ ಪರಿಶೀಲನೆ ನಡೆಸಿ ಅಂತಿಮಗೊಳಿಸಲಾಗುವುದು ಎಂದು ಹೇಳಿದೆ.
ಕಾವೇರಿ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನ್ಯಾಯಧಿಕರಣ ತೀರ್ಪು ವಿಲೀನಗೊಳಿಸಿ ಆದೇಶ ನೀಡಿದ್ದು, ಪದೇ ಪದೇ ನ್ಯಾಯಧಿಕರಣ ಆದೇಶ ಉಲ್ಲೇಖಿಸುವಂತಿಲ್ಲ ಎಂದು ಸೂಚನೆ ನೀಡಿದೆ. ನೀರು ಹಂಚಿಕೆ ಮಾಡಿ ನಾವು ಆದೇಶ ನೀಡಿದ್ದೇವೆ. ಹಂಚಿಕೆ ಕಾರ್ಯರೂಪಕ್ಕೆ ಬರಲು ಕೇಂದ್ರ ಸರ್ಕಾರ ಸ್ಕೀಂ ರಚನೆ ಮಾಡಲಿದೆ. ಕೇಂದ್ರ ರಚಿಸುವ ಸ್ಕೀಂಗೆ ಎಲ್ಲ ರಾಜ್ಯಗಳು ಬದ್ಧವಾಗಿರಬೇಕು ಎಂದು ನ್ಯಾ. ದೀಪಕ್ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠ ಸೂಚಿಸಿದೆ.
ಅರ್ಜಿ ವಿಚಾರಣೆ ವೇಳೆ ಕಾವೇರಿ ನಿರ್ವಹಣಾ ಮಂಡಳಿ ವಿಚಾರವನ್ನು ಸುಪ್ರೀಂ ಕೋರ್ಟ್ ಪ್ರಸ್ತಾಪಿಸಲಿಲ್ಲ. ತೀರ್ಪು ಪಾಲನೆಗೆ ಯೋಜನೆ ಅವಶ್ಯಕತೆ ಇದ್ದು ಆ ನಿಟ್ಟಿನಲ್ಲಿ ಸ್ಕೀಂ ರಚನೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು. ಈ ಮೂಲಕ ತಮಿಳುನಾಡಿನ ಕಾವೇರಿ ನಿರ್ವಹಣಾ ಮಂಡಳಿ ಸ್ಥಾಪನೆ ಹೋರಾಟಕ್ಕೆ ಸುಪ್ರೀಂ ಕೋರ್ಟ್ ಪರೋಕ್ಷ ಚಾಟಿ ಬೀಸಿತ್ತು. ಎಲ್ಲ ರಾಜ್ಯಗಳನ್ನು ಸಮಾನವಾಗಿ ಪರಿಗಣಿಸಿಲಾಗಿದೆ. ರಾಜ್ಯಗಳ ಜನರು ಶಾಂತಿ ರೀತಿಯಿಂದ ವರ್ತಿಸುವಂತೆ ಮನವಿ ಮಾಡಲು ಸುಪ್ರೀಂ ಕೋರ್ಟ್ ರಾಜ್ಯಗಳಿಗೂ ಸೂಚಿಸಿತ್ತು.
Loud and Clear @INCIndia supports Cauvery Management Board! Shame on your traitor @INCKarnataka. Beware Kannadigas pic.twitter.com/cgkpS4BX27
— Pratap Simha (@mepratap) April 12, 2018