Connect with us

Latest

ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ನಾಸಾ ಪ್ರವಾಸಕ್ಕೆ ಆಯ್ಕೆ- ಕಷ್ಟದ ಕಥೆ ಓದಿ

Published

on

– ಒಂದೇ ತಿಂಗ್ಳಲ್ಲಿ ಇಂಗ್ಲಿಷ್ ಕಲಿತು ಯುಎಸ್‍ಗೆ ಹಾರುತ್ತಿರೋ ಸಾಧಕಿ
– ಟ್ಯೂಶನ್ ನಡೆಸಿ, ಗೋಡಂಬಿ ಮಾರಿ ತಾಯಿ-ತಮ್ಮನ ಸಾಕ್ತಿದ್ದಾಳೆ

ಚೆನ್ನೈ: ಇಂಗ್ಲಿಷ್ ಬಾರದಿದ್ದರೂ ಒಂದೇ ತಿಂಗಳಲ್ಲಿ ಕಲಿತು ಸರ್ಕಾರಿ ಶಾಲೆಯ 11ನೇ ತರಗತಿ ವಿದ್ಯಾರ್ಥಿನಿ ನಾಸಾಗೆ ತೆರಳಲು ಸಿದ್ಧತೆ ನಡೆಸಿದ್ದು, ಈಕೆಯ ಕಥೆಯನ್ನು ಓದಿದರೆ ಕಣ್ಣಂಚಲ್ಲಿ ನೀರು ಬರುವುದು ಖಚಿತ.

ತಮಿಳುನಾಡಿನ ತಂಜಾವೂರು ಜಿಲ್ಲೆಯ ಅದನಕೊಟ್ಟೈನ 11ನೇ ತರಗತಿ ವಿದ್ಯಾರ್ಥಿನಿ ಕೆ.ವಿಜಯಲಕ್ಷ್ಮಿ ಆನ್‍ಲೈನಲ್ಲಿ ನಡೆದ ಸ್ಪರ್ಧೆಯಲ್ಲಿ ವಿಜೇತಳಾಗುವ ಮೂಲಕ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾಗೆ ತೆರಳುವ ಅವಕಾಶ ಪಡೆದಿದ್ದಾಳೆ. ವಿದ್ಯಾರ್ಥಿನಿ ತಮಿಳು ಮಾಧ್ಯಮದಲ್ಲಿ ಓದಿದರೂ, ಸ್ಪರ್ಧೆಯಲ್ಲಿ ವಿಜೇತಳಾಗಲು ಕೇವಲ ಒಂದು ತಿಂಗಳಲ್ಲಿ ಇಂಗ್ಲಿಷ್ ಕೋಚಿಂಗ್ ಪಡೆದುಕೊಂಡು ಆನ್‍ಲೈನ್ ಪರೀಕ್ಷೆಯಲ್ಲಿ 2ನೇ ರ‌್ಯಾಂಕ್ ಪಡೆದಿದ್ದಾಳೆ. ಈ ಮೂಲಕ ಯುಎಸ್‍ಗೆ ತೆರಳಲು ಸಜ್ಜಾಗುತ್ತಿದ್ದಾಳೆ.

ಬಡತನವಿರುವುದರಿಂದ ತನ್ನ ಪ್ರಯಾಣದ ವೆಚ್ಚವನ್ನು ಭರಿಸುವಂತೆ ಜಯಲಕ್ಷ್ಮಿ ಜಿಲ್ಲಾಧಿಕಾರಿ ಮೊರೆ ಹೋಗಿದ್ದಾಳೆ. ಇವಳ ಕುಟುಂಬದಲ್ಲಿ ಜಯಲಕ್ಷ್ಮಿಯೊಬ್ಬಳೇ ಕೆಲಸ ಮಾಡಿ, ಮಾನಸಿಕ ಅಸ್ವಸ್ಥ ತಾಯಿ ಹಾಗೂ ತಮ್ಮನನ್ನು ಸಾಕುತ್ತಿದ್ದಾಳೆ. ವಿದ್ಯಾರ್ಥಿನಿಯು 8 ಹಾಗೂ 9ನೇ ತರಗತಿಯ ವಿದ್ಯಾರ್ಥಿಗಳಿಗೆ ಟ್ಯೂಶನ್ ತೆಗೆದುಕೊಳ್ಳುತ್ತಾಳೆ. ಇದರ ಜೊತೆಗೆ ಗೋಡಂಬಿಗಳನ್ನೂ ಮಾರಿ ಮನೆ ನಡೆಸುತ್ತಿದ್ದಾಳೆ. ನಾಸಾದ ಬಾಹ್ಯಾಕಾಶ ವಿಜ್ಞಾನಿಗಳನ್ನು ಸಂದರ್ಶಿಸುವ ಅದ್ಭುತ ಪ್ರವಾಸಕ್ಕೆ ಆಯ್ಕೆಯಾಗಿರುವ ಕೆಲವೇ ವಿದ್ಯಾರ್ಥಿಗಳಲ್ಲಿ ಜಯಲಕ್ಷ್ಮಿ ಸಹ ಒಬ್ಬಳು.

ಐದು ದಿನಗಳ ಪ್ರವಾಸದಲ್ಲಿ ಕಾರ್ಯಾಗಾರ ಮಾತ್ರವಲ್ಲದೆ ಡಿಸ್ನಿಯಂತಹ ಹತ್ತಿರದ ಪ್ರವಾಸಿ ತಾಣಗಳಿಗೆ ಭೇಟಿ ನೀಡಲಿದ್ದಾರೆ. ಜಯಲಕ್ಷ್ಮಿ ಅದನಕೊಟ್ಟೈ ಸರ್ಕಾರಿ ಪ್ರೌಢ ಶಾಲೆಯಲ್ಲಿ ವಿಜ್ಞಾನ ವಿದ್ಯಾರ್ಥಿನಿಯಾಗಿದ್ದು, ಗೋ ಫೋರ್ ಗುರು ಎಂಬ ಸಂಸ್ಥೆ ಆನ್‍ಲೈನ್ ಪರೀಕ್ಷೆ ನಡೆಸುತ್ತಿದೆ ಎಂದು ಅಚಾನಕ್ಕಾಗಿ ತಿಳಿದು ಬಂದಿದೆ. ಈ ಕುರಿತು ತಿಳಿಯುತ್ತಿದ್ದಂತೆ ವಿದ್ಯಾರ್ಥಿನಿ ಪರೀಕ್ಷೆಗೆ ಸಿದ್ಧತೆ ನಡೆಸಿದ್ದಾಳೆ.

ಎಪಿಜೆ ಅಬ್ದುಲ್ ಕಲಾಂ ಅವರೇ ನನಗೆ ಪ್ರೇರಣೆ ನಾನು ಬಾಹ್ಯಾಕಾಶದ ಬಗ್ಗೆ ಓದಿಕೊಂಡಿದ್ದೇನೆ. ಹೀಗಾಗಿ ನನ್ನ ಆಸಕ್ತಿ ಹೆಚ್ಚಿದೆ ಎಂದು ಜಯಲಕ್ಷ್ಮಿ ಸಂತಸ ವ್ಯಕ್ತಪಡಿಸಿದ್ದಾಳೆ.

ನಾನು ಕ್ಯಾರಮ್ ಆಡುತ್ತಿದ್ದಾಗ, ಬೋರ್ಡ್ ಕೆಳಗಡೆ ನ್ಯೂಸ್ ಪೇಪರ್ ಇತ್ತು. ಅದರಲ್ಲಿ ಕಳೆದ ವರ್ಷ ನಾಸಾಗೆ ತೆರಳಲು ಚಾನ್ಸ್ ಗಿಟ್ಟಿಸಿಕೊಂಡಿದ್ದ ಧನ್ಯಾ ಥಸ್ನೆಮ್ ಬಗ್ಗೆ ವರದಿ ಬಂದಿತ್ತು. ನಂತರ ನಾನು ತಕ್ಷಣವೇ ಅಲ್ಲಿಂದ ಹೊರಟು ಮನೆಗೆ ತೆರಳಿ, ಪರೀಕ್ಷೆಗೆ ಹೆಸರು ನೋಂದಾಯಿಸಿದೆ ಎಂದು ತಿಳಿಸಿದ್ದಾಳೆ.

ಜಯಲಕ್ಷ್ಮಿ ಈಗಾಗಲೇ ಹಲವು ಸ್ಕಾಲರ್‍ಶಿಪ್‍ಗಳನ್ನು ಪಡೆಯುತ್ತಿದ್ದಾಳೆ. ಆದರೆ ಇದೀಗ ನಾಸಾ ಪ್ರವಾಸಕ್ಕೆ ತೆರಳುವುದೇ ಸವಾಲಾಗಿ ಪರಿಣಮಿಸಿದೆ. ಇವಳ ಪ್ರಯಾಣದ ವೆಚ್ಚ ಸುಮಾರು 1.69 ಲಕ್ಷ ಆಗಬಹುದು ಎಂದು ಅಂದಾಜಿಸಲಾಗಿದೆ.

ನಮ್ಮ ತಂದೆ ಬೇರೆಡೆ ವಾಸಿಸುತ್ತಿದ್ದು, ಒಂದು ಬಾರಿ ಮಾತ್ರ ಹಣ ಕಳುಹಿಸುತ್ತಾರೆ. ಗುರುಗಳು ಹಾಗೂ ಸ್ನೇಹಿತರ ಸಹಾಯದಿಂದ ಪಾಸ್‍ಪೋರ್ಟ್ ಪಡೆಯಲು ಸಾಧ್ಯವಾಯಿತು. ಪಾಸ್‍ಪೋರ್ಟ್ ಅಧಿಕಾರಿಗಳು ಸಹ ನನ್ನಿಂದ 500 ರೂ. ಪಡೆದರು. ಹೀಗಾಗಿ ನನ್ನ ಪ್ರಯಾಣದ ವೆಚ್ಚವನ್ನು ಭರಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದೇನೆ. ನನ್ನ ಗೆಲವು ಸರ್ಕಾರಿ ಶಾಲೆಯ ಇತರ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿದೆ ಎಂದು ಜಯಲಕ್ಷ್ಮಿ ತಿಳಿಸಿದ್ದಾಳೆ.

ಎಪಿಜೆ ಅಬ್ದುಲ್ ಕಲಾಂ ಅವರ ರೀತಿ ನಾನೂ ಸಹ ರಾಕೆಟ್ ತಯಾರಿಸಬೇಕು. ಈ ಪ್ರವಾಸಕ್ಕೆ ತೆರಳಲು ಯಾವುದೇ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ವಿಜೇತರಾಗಿಲ್ಲ. ನಾನು ಸರ್ಕಾರಿ ಶಾಲೆಯ ಇತರ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಬೇಕು. ಈ ಪ್ರವಾಸಕ್ಕೆ ತೆರಳುವ ಮೂಲಕ ನನ್ನ ಶಾಲಾ ಪ್ರಾಂಶುಪಾಲರು ಹಾಗೂ ಶಿಕ್ಷಕರಿಗೆ ಹೆಮ್ಮೆಯನ್ನುಂಟು ಮಾಡಬೇಕು ಎಂದು ತನ್ನ ಮನದಾಳವನ್ನು ಹಂಚಿಕೊಂಡಿದ್ದಾಳೆ.

ಈ ಕುರಿತು ಶಾಲೆಯ ಪ್ರಾಂಶುಪಾಲರು ಪ್ರತಿಕ್ರಿಯಿಸಿ, ಇವಳು ತುಂಬಾ ಪ್ರತಿಭಾವಂತ ಹುಡುಗಿ. ಅಲ್ಲದೆ ಈ ವರೆಗೆ ಹಲವು ಸ್ಪರ್ಧೆಗಳಲ್ಲಿ ಜಯಗಳಿಸಿದ್ದಾಳೆ. ಆಕಾಶವೇ ಅವಳಿಗೆ ಚಿಕ್ಕದೆನಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Click to comment

Leave a Reply

Your email address will not be published. Required fields are marked *