ಚೆನ್ನೈ: ವ್ಯಕ್ತಿಯೊಬ್ಬ ಯೂಟ್ಯೂಬ್ ನಲ್ಲಿ ಸಲಹೆ ತೆಗೆದುಕೊಂಡು ಹೆರಿಗೆ ಮಾಡಿಸಲು ಹೋಗಿ ಪತ್ನಿಯೇ ಮೃತಪಟ್ಟಿರುವ ದಾರುಣ ಘಟನೆ ತಮಿಳುನಾಡಿನ ತಿರುಪ್ಪೂರು ಪಟ್ಟಣದಲ್ಲಿ ನಡೆದಿದೆ.
ಕೃತಿಗಾ(28) ಮೃತ ಮಹಿಳೆ. ಈಕೆಯ ಪತಿ ಕಾರ್ತಿಕೇಯನ್ ಈ ರೀತಿಯ ದುಸ್ಸಾಹ ಮಾಡಿದ್ದಾನೆ. ಇವರಿಬ್ಬರು ಖಾಸಗಿ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು. ಇವರು ನಾರ್ಮಲ್ ಹೆರಿಗೆಯ ಮೇಲೆ ನಂಬಿಕೆ ಇಟ್ಟಿದ್ದು, ಸ್ನೇಹಿತರ ಸಲಹೆಯ ಮೇರೆಗೆ ಮನೆಯಲ್ಲಿ ಮಗುವನ್ನು ಹೊಂದಲು ನಿರ್ಧರಿಸಿದ್ದರು.
Advertisement
ಕೃತಿಕಾಗೆ ಭಾನುವಾರ ಮಧ್ಯಾಹ್ನದ ವೇಳೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಈ ವೇಳೆ ಕಾರ್ತಿಕೇಯನ್ ತನ್ನ ಕುಟುಂಬ ಸ್ನೇಹಿತರಾದ ಪ್ರವೀಣ್ ಕುಮಾರ್ ಮತ್ತು ಲಾವಣ್ಯ ದಂಪತಿ ಜೊತೆ ಸೇರಿ ಮನೆಯಲ್ಲೇ ಹೆರಿಗೆ ಮಾಡಿಸಲು ಮುಂದಾಗಿದ್ದಾರೆ. ಆಗ ಮೂವರು ಯೂಟ್ಯೂಬ್ ನಿಂದ ಹೆರಿಗೆ ಮಾಡಿಸಲು ಸಲಹೆಯನ್ನು ತೆಗೆದುಕೊಂಡಿದ್ದಾರೆ. ಅದೇ ರೀತಿ ಕೃತಿಗಾಗೆ ಹೆರಿಗೆ ಮಾಡಿಸಿದ್ದಾರೆ. ಕೊನೆಗೆ ಕೃತಿಗಾ ಸುಮಾರು 1:30ಕ್ಕೆ ಮನೆಯಲ್ಲಿಯೇ ಮಗುವಿಗೆ ಜನ್ಮ ನೀಡಿದ್ದಾರೆ.
Advertisement
Advertisement
ಹೆರಿಗೆಯಾಗಿ ಒಂದು ಗಂಟೆಯ ನಂತರ ಅಂಬ್ಯುಲೆನ್ಸ್ ಗೆ ಕರೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಕೃತಿಗಾ ಅಷ್ಟರಲ್ಲಿಯೇ ಮೃತಪಟ್ಟಿದ್ದರು. ಹೆರಿಗೆ ಸಮಯದಲ್ಲಿ ಕೃತಿಗಾಗೆ ತುಂಬಾ ರಕ್ತಸ್ರಾವವಾಗಿದ್ದು, ಜೊತೆಗೆ ಆಘಾತಕ್ಕೆ ಒಳಗಾದ ಕಾರಣ ಆಕೆ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಸದ್ಯಕ್ಕೆ ಮಗು ಆರೋಗ್ಯವಾಗಿದೆ ಎಂದು ತಿರುಪ್ಪುರದ ಮುಖ್ಯ ಆರೋಗ್ಯ ಅಧಿಕಾರಿ ಕೆ. ಬೂಪತಿ ಹೇಳಿದ್ದಾರೆ.
Advertisement
ಈ ದಂಪತಿಗೆ ಈಗಾಗಲೇ ಒಂದು ಮಗುವಿದ್ದು, ಇದು ಎರಡನೇ ಮಗುವಾಗಿದೆ. ಇತ್ತೀಚೆಗಷ್ಟೆ ಇವರ ಅಜ್ಜ ಮೃತಪಟ್ಟಿದ್ದರು. ಮತ್ತೆ ಅವರೇ ಹುಟ್ಟಿ ಬರುತ್ತಾರೆ ಎಂದು ನಂಬಿಕೊಂಡಿದ್ದರು. ಅಷ್ಟೇ ಅಲ್ಲದೇ ಇವರು ನಾರ್ಮಲ್ ಹೆರಿಗೆಯನ್ನು ಅತಿ ಹೆಚ್ಚು ಪ್ರೋತ್ಸಾಹಿಸಿದ್ದರು. ಅದೇ ರೀತಿ ಕೃತಿಗಾ ಯಾವುದೇ ವೈದ್ಯರು ಅಥವಾ ಆಸ್ಪತ್ರೆಗೆ ಪರೀಕ್ಷೆಗಾಗಿ ಹೋಗಿರಲಿಲ್ಲ ಎಂದು ತನಿಖಾಧಿಕಾರಿ ಜೈಯಚಂದ್ರನ್ ತಿಳಿಸಿದ್ದಾರೆ.
ಸದ್ಯಕ್ಕೆ ಪತಿ ಕಾರ್ತಿಕೇಯನ್ ನನ್ನು ಪೊಲೀಸರು ಕಸ್ಟ್ ಡಿಗೆ ತೆಗೆದುಕೊಂಡಿದ್ದಾರೆ. ಅಷ್ಟೇ ಅಲ್ಲದೇ ಈ ಹೆರಿಗೆಗೆ ಸಹಾಯ ಮಾಡಿದ ಪ್ರವೀಣ್ ದಂಪತಿಯನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ.