ನವದೆಹಲಿ: ಕರ್ನಾಟಕ ಸರ್ಕಾರ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಲು ಉದ್ದೇಶಿಸಿರುವ ಮೇಕೆದಾಟು ಅಣೆಕಟ್ಟು ಯೋಜನೆಗೆ ಅನುಮತಿ ನೀಡದಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಮನವಿ ಮಾಡಿದ್ದಾರೆ.
ದೆಹಲಿಯಲ್ಲಿ ಪ್ರಧಾನಿಯನ್ನು ಭೇಟಿ ಮಾಡಿದ ಅವರು, ಜಲಶಕ್ತಿ ಸಚಿವಾಲಯವು ಮೇಕೆದಾಟು ಯೋಜನೆಗೆ ಅಥವಾ ಕಾವೇರಿ ಜಲಾನಯನ ಪ್ರದೇಶದಲ್ಲಿ ಯಾವುದೇ ಹೊಸ ಯೋಜನೆಗಳಿಗೆ ಅನುಮೋದನೆ ನೀಡಬಾರದು. ಅಲ್ಲದೆ ಮೇಕೆದಾಟು ಯೋಜನೆಗೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸಮ್ಮತಿ ಸೂಚಿಸಬಾರದು. ತಮಿಳುನಾಡಿನ ಪೂರ್ವಾನುಮತಿ ಇಲ್ಲದೆ ಯಾವುದೇ ಹೊಸ ಯೋಜನೆ ಕೈಗೆತ್ತಿಕೊಳ್ಳದಂತೆ ಕರ್ನಾಟಕ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದೂ ಅವರು ಕೋರಿದ್ದಾರೆ. ಇದನ್ನೂ ಓದಿ: ಮೇಕೆದಾಟು: ತಮಿಳುನಾಡು ವಿರುದ್ಧದ ಖಂಡನಾ ನಿರ್ಣಯಕ್ಕೆ ಜೆಡಿಎಸ್ ಬೆಂಬಲ
ಇದೇ ವೇಳೆ ಶ್ರೀಲಂಕಾದ ಬಿಕ್ಕಟ್ಟಿನ ಬಗ್ಗೆ ಚರ್ಚಿಸಿದ ಅವರು, ಶ್ರೀಲಂಕಾ ಇತಿಹಾಸದಲ್ಲೇ ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟಿನ ಪರಿಸ್ಥಿತಿ ಎದುರಿಸುತ್ತಿದೆ. ಈ ನಡುವೆ ಡೀಸೆಲ್ ಪೂರೈಕೆಯಲ್ಲಿ ಕೊರತೆಯಾಗಿದೆ, ನೆನ್ನೆಯಷ್ಟೇ ಷೇರು ಮಾರುಕಟ್ಟೆ ವ್ಯಾಪಾರವನ್ನೂ ನಿರ್ಬಂಧಿಸಿದೆ. ಇದರಿಂದಾಗಿ ಶ್ರೀಲಂಕಾದ ಉತ್ತರ ಮತ್ತು ಪೂರ್ವ ಭಾಗಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿರುವ ತಮಿಳಿಗರು ಆರ್ಥಿಕ ಸಂಕಷ್ಟಕ್ಕೀಡಾಗಿದ್ದಾರೆ. ಅವರಿಗೆ ತಮಿಳುನಾಡಿನಿಂದ ಔಷಧಿ ಸೇರಿದಂತೆ ಕೆಲವು ಅಗತ್ಯ ವಸ್ತುಗಳನ್ನು ಕಳಿಸಿಕೊಡಲು ನಮ್ಮ ರಾಜ್ಯ ಸರ್ಕಾರ ಇಚ್ಛಿಸುತ್ತಿದೆ. ಅದಕ್ಕೆ ಅನುಮತಿ ನೀಡಬೇಕು ಎಂದು ಕೋರಿದ್ದಾರೆ. ಇದನ್ನೂ ಓದಿ: ಮೇಕೆದಾಟು ವಿವಾದ – ತಮಿಳುನಾಡು ವಿಧಾನಸಭೆ ನಿರ್ಣಯಕ್ಕೆ ನಾಳೆ ರಾಜ್ಯದಿಂದ ಕೌಂಟರ್
ಇದೇ ವೇಳೆ, ಉಕ್ರೇನ್‌ನಿಂದ ವೈದ್ಯಕೀಯ ಶಿಕ್ಷಣ ಅರ್ಧಕ್ಕೇ ನಿಲ್ಲಿಸಿ, ಭಾರತಕ್ಕೆ ಬಂದಿರುವ ವಿದ್ಯಾರ್ಥಿಗಳು ಇಲ್ಲಿಯೇ ಶಿಕ್ಷಣ ಮುಂದುವರಿಸಲು ಕ್ರಮಕೈಗೊಳ್ಳಬೇಕು. ಈ ವಿಚಾರದಲ್ಲಿ ಪ್ರಧಾನಿಯವರು ಮಧ್ಯಪ್ರವೇಶಿಸಿ ಕ್ರಮ ವಹಿಸಬೇಕು. ಜಿಎಸ್‌ಟಿ ಪರಿಹಾರ ಮುಂದುವರಿಕೆಗೆ ಕೇಂದ್ರ ಸರ್ಕಾರದ ಬೆಂಬಲ ನೀಡಬೇಕು, ಕೈಗಾರಿಕೆ ಹಾಗೂ ಸಾರಿಗೆ ಇಲಾಖೆಗಳ ಅಭಿವೃದ್ಧಿಗೂ ಕ್ರಮ ಕೈಗೊಳ್ಳಬೇಕು ಎಂಬಿತ್ಯಾದಿ ಬೇಡಿಕೆಗಳು ಸೇರಿದಂತೆ 14 ಬೇಡಿಕೆಗಳನ್ನು ಒತ್ತಾಯಿಸಿದ್ದಾರೆ.
ಇತ್ತೀಚೆಗಷ್ಟೇ ಕೇರಳದ ಹಣಕಾಸು ಸಚಿವ ಕೆ.ಎನ್.ಬಾಲಗೋಪಾಲನ್ ಅವರು ನೆರೆಯ ದೇಶದ ಆರ್ಥಿಕ ಬಿಕ್ಕಟ್ಟು ಭಾರತಕ್ಕೆ ಒಂದು ಪಾಠ ಎಂದು ಹೇಳಿದ್ದರು.