ಮಂಡ್ಯ: ಐತಿಹಾಸಿಕ, ಪುರಾಣ ಪ್ರಸಿದ್ಧ ಮೇಲುಕೋಟೆಯಲ್ಲಿರುವ ತಂಗಿಯ ಕೊಳದ ನೀರು ಇದೀಗ ತಮಿಳು ಸಿನಿಮಾ ತಂಡ ಮಾಡಿರುವ ಒಂದು ಯಡವಟ್ಟಿನಿಂದ ಕಲುಷಿತಗೊಂಡಿದೆ. ಪವಿತ್ರ ಹಾಗೂ ಶುದ್ಧತೆಗೆ ಹೆಸರುವಾಸಿಯಾಗಿದ್ದ ತಂಗಿ ಕೊಳದ ನೀರು ಕಲುಷಿತಗೊಳ್ಳಲು ತಮಿಳು ಸಿನಿಮಾ ತಂಡ ಕೊಳದ ನೀರಿಗೆ ಬಣ್ಣ ಹಾಗೂ ಹೂ ಹಾಕಿರುವುದೇ ಕಾರಣವಾಗಿದೆ.
ಸಕ್ಕರೆ ನಾಡು ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಐತಿಹಾಸಿಕ ಹಾಗೂ ಪುರಾಣ ಪ್ರಸಿದ್ಧ ಮೇಲುಕೋಟೆ ಹಲವು ಐತಿಹಾಸಿಕ ಕತೆಗಳಿಗೆ ಪ್ರಸಿದ್ಧಿ ಪಡೆದಿದೆ. ಇಲ್ಲಿರುವ ಅಕ್ಕ-ತಂಗಿಯ ಕೊಳಗಳಿಗೂ ಇತಿಹಾಸ ಇದೆ. ಇಲ್ಲಿನ ಅಕ್ಕನ ಕೊಳದ ನೀರು ಗಡುಸಾಗಿರುವ ಕಾರಣ ಕುಡಿಯಲು ಯೋಗ್ಯವಲ್ಲ. ಹೀಗಾಗಿ ಈ ನೀರನ್ನು ಯಾರು ಉಪಯೋಗಿಸುವುದಿಲ್ಲ. ಅಕ್ಕನ ಕೊಳದ ಪಕ್ಕದಲ್ಲಿರುವ ತಂಗಿ ಕೊಳದ ನೀರು ಪಾವಿತ್ರತೆ ಹಾಗೂ ಶುದ್ಧೀಕರಣಕ್ಕೆ ಹೆಸರುವಾಸಿ ಪಡೆದುಕೊಂಡಿದೆ. ಹೀಗಾಗಿ ತಂಗಿ ಕೊಳದ ನೀರನ್ನು ಚೆಲುವನಾರಾಯಣಸ್ವಾಮಿಯ ಅಭಿಷೇಕಕ್ಕೆ, ಭಕ್ತರಿಗೆ ತೀರ್ಥ ನೀಡಲು ಬಳಸಲಾಗುತ್ತದೆ. ಅಲ್ಲದೇ ಈ ನೀರನ್ನು ಜನರು ಕುಡಿಯಲು ಸಹ ಬಳಸುತ್ತಾರೆ. ಇದನ್ನೂ ಓದಿ: ಮುಂದಿನ 2 ವರ್ಷದಲ್ಲಿ ಎಲೆಕ್ಟ್ರಿಕ್ ವಾಹನಗಳ ಬೆಲೆ ಪೆಟ್ರೋಲ್ ವಾಹನದಷ್ಟೇ ಆಗಲಿದೆ: ಗಡ್ಕರಿ
- Advertisement
- Advertisement
ಇದೀಗ ಕಳೆದ ಒಂದು ತಿಂಗಳ ಹಿಂದೆ ತಮಿಳು ಚಿತ್ರ ತಂಡವೊಂದು ಚಿತ್ರೀಕರಣದ ವೇಳೆ ತಂಗಿ ಕೊಳಕ್ಕೆ ಬಣ್ಣ ಹಾಗೂ ಹೂವನ್ನು ಹಾಕಿದ ಕಾರಣ ತಂಗಿ ಕೊಳದ ನೀರು ಸಂಪೂರ್ಣವಾಗಿ ಕಲುಷಿತಗೊಂಡಿದೆ. ಶುದ್ಧವಾಗಿದ್ದ ನೀರು ಇದೀಗ ಕಂದು ಬಣ್ಣಕ್ಕೆ ತಿರುಗಿದೆ. ಹೀಗಾಗಿ ಭಕ್ತರಿಗೆ ತೀರ್ಥದ ರೂಪದಲ್ಲಿ ನೀಡುತ್ತಿದ್ದ ಈ ನೀರನ್ನು ಈಗ ಕೊಡುತ್ತಿಲ್ಲ. ಸಿನಿಮಾ ತಂಡ ಮಾಡಿರುವ ಯಡವಟ್ಟಿನಿಂದ ತಂಗಿ ಕೊಳದ ನೀರಿನ ಪಾವಿತ್ರತೆ ಹಾಗೂ ಶುದ್ಧತೆ ಹಾಳಾಗಿದೆ. ಇದರಿಂದ ಇಲ್ಲಿನ ಜನರ ಹಾಗೂ ಭಕ್ತರ ನಂಬಿಕೆಗೆ ಪೆಟ್ಟುಬಿದ್ದಂತೆ ಆಗಿದೆ. ಈ ಬಗ್ಗೆ ಅಧಿಕಾರಿಗಳನ್ನು ಪ್ರಶ್ನೆ ಮಾಡಿದರೆ ಇಲ್ಲಿ ತಮಿಳು ಸಿನಿಮಾಗೆ ಅವಕಾಶ ನೀಡಿಲ್ಲ. ಮಳೆಯ ನೀರಿನಿಂದ ಹೀಗೆ ಆಗಿದೆ ಎಂದು ಸಬೂಬು ನೀಡುತ್ತಾರೆ. ಮಳೆಯ ನೀರು ಆಗಿದ್ದ ಇಷ್ಟೋತ್ತಿಗೆ ತಿಳಿಗೊಳ್ಳುತ್ತಿತ್ತು. ಇಲ್ಲಿ ಚಿತ್ರೀಕರಣವಾಗಿರುವುದು ಸತ್ಯ, ಅವರು ಆ ವೇಳೆ ಬಣ್ಣ ಹಾಗೂ ಹೂವನ್ನು ನೀರಿಗೆ ಹಾಕಿದ್ದರು ಹೀಗಾಗಿ ನೀರು ಹೀಗೆ ಆಗಿದೆ ಎಂದು ಸ್ಥಳೀಯರು ಆರೋಪ ಮಾಡುತ್ತಿದ್ದಾರೆ. ಇದನ್ನೂ ಓದಿ: ಅನ್ನ ಸಂತರ್ಪಣೆ ವೇಳೆ ಪುನೀತ್ ನೆನೆದು ಕಣ್ಣೀರಿಟ್ಟ ಅಶ್ವಿನಿ
ತಮಿಳು ಚಿತ್ರತಂಡ ಮಾಡಿರುವ ಯಡವಟ್ಟಿನಿಂದ ತಂಗಿ ಕೊಳದ ನೀರು ಕಲುಷಿತಗೊಂಡಿರುವುದು ವಿಪರ್ಯಾಸದ ಸಂಗತಿ. ಜಿಲ್ಲಾಡಳಿತ ಈ ಬಗ್ಗೆ ಸೂಕ್ತ ಕ್ರಮಕೈಗೊಂಡು ತಂಗಿ ಕೊಳದ ಪವಿತ್ರತೆಯನ್ನು ಕಾಪಡಬೇಕಿದೆ.