ತಮಿಳು ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿರುವ ಮತ್ತು ಹನ್ನೆರಡಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಪ್ರತಾಪ್ ಪೋಥೆನ್ ತಮ್ಮ ಚೆನ್ನೈನ ಅಪಾರ್ಟಮೆಂಟ್ ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. 69ರ ವಯಸ್ಸಿನ ಪ್ರತಾಪ್, ಕೇರಳ ಮೂಲದವರು. ಮಲಯಾಳಂ ಸಿನಿಮಾ ರಂಗದಿಂದ ವೃತ್ತಿ ಆರಂಭಿಸಿದ್ದ ಇವರು, ನಂತರ ತೆಲುಗು, ಹಿಂದಿ, ತಮಿಳಿನಲ್ಲೂ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ. ಇದನ್ನೂ ಓದಿ:ಬಾಡಿ ಶೇಮಿಂಗ್ ಬಗ್ಗೆ ಮಾತನಾಡಿದವರಿಗೆ ಖಡಕ್ ವಾರ್ನಿಂಗ್ ಕೊಟ್ಟ ಫ್ಯಾಶನ್ ಡಿಸೈನರ್ ಮಸಾಬ ಗುಪ್ತಾ
ಪ್ರತಾಪ್ ನಿಧನಕ್ಕೆ ಅನಾರೋಗ್ಯವೇ ಕಾರಣ ಎಂದು ಹೇಳಲಾಗುತ್ತಿದೆ. ಹಲವು ದಿನಗಳಿಂದ ಇವರು ಅನಾರೋಗ್ಯದಿಂದ ಬಳಲುತ್ತಿದ್ದರು. ಒಂಟಿಯಾಗಿ ವಾಸಿಸುತ್ತಿದ್ದರಿಂದ ಸಾವಿನ ಬಗ್ಗೆ ನಿಖರ ಮಾಹಿತಿ ತಿಳಯಬೇಕಿದೆ. ಹಿರಿಯ ಕಲಾವಿದರ ನಿಧನಕ್ಕೆ ತಮಿಳು ಮತ್ತು ಮಲಯಾಳಂ ಸಿನಿಮಾ ರಂಗ ಕಂಬನಿ ಮಿಡಿದಿದೆ. ಅನೇಕ ಅಭಿಮಾನಿಗಳು ಕೂಡ ಶ್ರದ್ಧಾಂಜಲಿಯನ್ನು ಅರ್ಪಿಸಿದ್ದಾರೆ.
ಪ್ರತಾಪ್ ಪೋಥೆನ್ ಅವರ ಖಾಸಗಿ ಬದುಕಿ ಅಷ್ಟೊಂದು ನೆಮ್ಮದಿಯಾಗಿರಲಿಲ್ಲ ಎಂದು ಹೇಳಲಾಗುತ್ತಿದೆ. ಜನಪ್ರಿಯತೆಯ ಉತ್ತುಂಗದಲ್ಲಿರುವಾಗ ನಟಿ ರಾಧಿಕಾ ಅವರನ್ನು ಮದುವೆಯಾಗಿದ್ದರಂತೆ. ಸಪ್ತಪದಿ ತುಳಿದ ಒಂದೇ ವರ್ಷಕ್ಕೆ ಈ ವಿವಾಹ ಮುರಿದು ಬಿದ್ದಿದೆ. ನಂತರ ಅಮಲಾ ಸತ್ಯನಾಥ್ ಎನ್ನುವವರ ಜೊತೆ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. 22 ವರ್ಷದ ಬಳಿಕ ಅವರೊಂದಿಗೆ ವಿಚ್ಚೇದನ ಪಡೆದಿದ್ದಾರೆ. ಈ ಜೋಡಿಗೆ ಒಂದು ಹೆಣ್ಣು ಮಗು ಕೂಡ ಇದೆ.
ನಟನೆ ಮತ್ತ ನಿರ್ದೇಶನ ಎರಡರಲ್ಲೂ ಪಳಗಿದ್ದ ಪ್ರತಾಪ್ ಅವರ ನಿರ್ದೇಶನದಲ್ಲಿ ಮೂಡಿ ಬಂದ ಮೀಂದು ಒರು ಕಾದಲ್ ಕಥೈ ಸಿನಿಮಾ ಇವರಿಗೆ ಸಾಕಷ್ಟು ಹೆಸರು ತಂದುಕೊಟ್ಟಿತ್ತು. ಈ ಸಿನಿಮಾ ರಾಷ್ಟ್ರ ಪ್ರಶಸ್ತಿ ಕೂಡ ಪಡೆದಿತ್ತು. ನಟನೆ ಮತ್ತು ನಿರ್ದೇಶನಕ್ಕಾಗಿ ಮೂರು ಬಾರಿ ಫಿಲ್ಮ್ ಫೇರ್ ಪ್ರಶಸ್ತಿಯನ್ನೂ ಇವರು ಪಡೆದಿದ್ದಾರೆ. ಅನಾರೋಗ್ಯದ ನಡುವೆಯೂ ಅವರು ಸಿನಿಮಾಗಳಲ್ಲಿ ಕೆಲಸ ಮಾಡುತ್ತಿದ್ದರು. ಪ್ರತಾಪ್ ನಿಧನಕ್ಕೆ ಪೃಥ್ವಿರಾಜ್ ಸುಕುಮಾರನ್ ಸೇರಿದಂತೆ ಹಲವರು ಕಂಬನಿ ಮಿಡಿದಿದ್ದಾರೆ.