ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಗ್ರಾಮೀಣ ಠಾಣೆ ಪೊಲೀಸರು ಭಟ್ಕಳ ಭಾಗಕ್ಕೆ ಸಾಗಾಟವಾಗುತಿದ್ದ ಮೂರು ಎಮ್ಮೆಗಳನ್ನು ವಾಹನ ಸಮೇತ ವಶಪಡಿಸಿಕೊಂಡಿದ್ದಾರೆ. ಆದರೆ ಭಟ್ಕಳಕ್ಕೆ ಅಕ್ರಮ ಗೋವುಗಳ ಸಾಗಾಟ ಹೆಚ್ಚಾಗುತ್ತಿದೆ ಎಂದು ಹಿಂದೂಪರ ಕಾರ್ಯಕರ್ತರು ಠಾಣೆಗೆ ಮುತ್ತಿಗೆ ಹಾಕಿ ಚೆಕ್ ಪೋಸ್ಟ್ ಅನ್ನು ಹೆಚ್ಚು ತಪಾಸಣೆ ನಡೆಸುವಂತೆ ಠಾಣೆಯ ಸಿಪಿಐ ಚಂದನ್ ಗೋಪಾಲ್ ರವರಿಗೆ ಆಗ್ರಹಿಸಿದ್ದಾರೆ.
ಈ ವೇಳೆ ಪೊಲೀಸರು ಹಾಗೂ ಹಿಂದೂಪರ ಕಾರ್ಯಕರ್ತರ ನಡುವೆ ಮಾತಿಗೆ ಮಾತು ಬೆಳದಿದ್ದು ಶ್ರೀನಿವಾಸ ನಾಯ್ಕ ಎಂಬಾತನ ನನ್ನು ಸಿಪಿಐ ಎಳೆದಾಡಿದ್ದಾರೆ ಎಂದು ಹಿಂದೂಪರ ಕಾರ್ಯಕರ್ತರು ಆರೋಪಿಸಿದ್ದಾರೆ. ಬಕ್ರೀದ್ ಹತ್ತಿರ ಬರುತಿದ್ದಂತೆ ಗೋ ಸಾಗಾಟ ಭಟ್ಕಳದಲ್ಲಿ ಹೆಚ್ಚಾಗುತ್ತದೆ. ಹೀಗಾಗಿ ಕಠಿಣ ಕ್ರಮ ಪೊಲೀಸರು ತೆಗೆದುಕೊಳ್ಳುತ್ತಿಲ್ಲ. ಗೋವುಗಳ ವಧೆ ಯಾಗುತ್ತದೆ ಎಂಬುದು ಹಿಂದೂಪರ ಹೋರಾಟಗಾರರ ಆರೋಪವಾಗಿದ್ದು, ಕೆಲವು ಸಮಯ ಠಾಣೆ ಎದುರು ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು.
ಸಾಗರ ರಸ್ತೆ ಕ್ರಾಸ್ ನಲ್ಲಿ ವಶಪಡಿಸಿಕೊಂಡ ಮಹೇಂದ್ರ ಮ್ಯಾಕ್ಸಿ ವಾಹನ, ಮೂರು ಕೋಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಶಿವಮೊಗ್ಗ ಮೂಲದ ಮೂವರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಬಾರಂಗಿ ಹೋಬಳಿಯ ಬಾನಕುಳಿಯ ಮಂಜು ನಾಯ್ಕ, ಚಾಲಕ ಚಂದ್ರಪ್ಪ ಹಾಗೂ ಭಟ್ಕಳದ ಜಟ್ಟಪ್ಪ ನಾಯ್ಕ ಎಂಬವರನ್ನು ವಶಕ್ಕೆ ಪಡೆಯಲಾಗಿದೆ.